ಶನಿವಾರ, ಏಪ್ರಿಲ್ 1, 2023
26 °C

ದೀಪಾವಳಿ ಬೆನ್ನಲ್ಲೇ ಅಪಾಯಕಾರಿ ಮಟ್ಟಕ್ಕೆ ಕುಸಿದ ದೆಹಲಿಯ ವಾಯು ಗುಣಮಟ್ಟ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರ್ಬಂಧಗಳ ಹೊರತಾಗಿಯೂ ದೀಪಾವಳಿಯಂದು ಅತಿರೇಕದಿಂದ ಪಟಾಕಿ ಸಿಡಿಸಿರುವ ಪರಿಣಾಮ ದೇಶದ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಭಾರೀ ಪ್ರಮಾಣ ಹದಗೆಟ್ಟಿದೆ.

ಐದು ವರ್ಷಗಳಲ್ಲೇ ದೀಪಾವಳಿ ನಂತರದ ಅತ್ಯಂತ ಕಳಪೆ ಗಾಳಿ ಗುಣಮಟ್ಟ ಕಂಡುಬಂದಿದ್ದು, ಈ ಮಾಲಿನ್ಯಕ್ಕೆ ದೆಹಲಿ ಸುತ್ತಲಿನ ಕೃಷಿ ತ್ಯಾಜ್ಯದ ಸುಡುವಿಕೆಯ ಹೊಗೆಯೂ ಸೇರಿಕೊಂಡಿದೆ.

ಜನರು ಪಟಾಕಿ ನಿಷೇಧವನ್ನು ಧಿಕ್ಕರಿಸಲು ಬಿಜೆಪಿಯೇ ಕಾರಣ, ಕೇಸರಿ ಪಕ್ಷವು ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸುವಂತೆ ಮಾಡಿದೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಆರೋಪಿಸಿದ್ದಾರೆ.

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಗುರುವಾರ ರಾತ್ರಿ ಭಾರೀ ಹೆಚ್ಚಳವಾಗಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಎಕ್ಯುಐ 462ಕ್ಕೆ ತಲುಪಿತ್ತು. ಇಂದು ಬೆಳಗ್ಗೆ 470ರಷ್ಟಿತ್ತು.

ಎಎಪಿಗೆ ತಿರುಗೇಟು ನೀಡಿರುವ ದೆಹಲಿಯ ಬಿಜೆಪಿ ವಕ್ತಾರ ನವೀನ್ ಕುಮಾರ್ ಜಿಂದಾಲ್, ದೀಪಾವಳಿ ಹಿಂದೂಗಳ ಹಬ್ಬವೇ ಹೊರತು ರಾಜಕೀಯ ಪಕ್ಷಗಳದ್ದಲ್ಲ. ರಾಯ್ ಅವರ ಆಮ್ ಆದ್ಮಿ ಪಕ್ಷದೊಂದಿಗೆ ಇರುವ ಹಿಂದೂಗಳಿಗೆ ಅವರ ಹಬ್ಬವನ್ನು ಆಚರಿಸಲು ಬಿಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಸೂರ್ಯನನ್ನು ಮರೆಮಾಚುವಂತೆ ದಿನವಿಡೀ ದಟ್ಟವಾದ ಹೊಗೆ ಆವರಿಸಿತ್ತು. ನೆರೆಯ ನಗರಗಳಾದ ಫರಿದಾಬಾದ್ (460), ಗ್ರೇಟರ್ ನೋಯ್ಡಾ (423), ಗಾಜಿಯಾಬಾದ್ (450), ಗುರುಗ್ರಾಮ್ (478) ಮತ್ತು ನೋಯ್ಡಾ (466) ದಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ವಾಯು ಗುಣಮಟ್ಟ ಅಪಾಯದ ಮಟ್ಟ ತಲುಪಿತ್ತು.

ಶೂನ್ಯದಿಂದ 50 ರ ನಡುವಿನ AQI ಅನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ ಮತ್ತು 401 ರಿಂದ 500ರವರೆಗಿನ ವಾಯುಗುಣಮಟ್ಟವನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ದೇಶದ ಹಲವಾರು ಇತರ ನಗರಗಳು ಮತ್ತು ಜಿಲ್ಲೆಗಳಲ್ಲಿ ವಾಯುಗುಣಮಟ್ಟ ಹದಗೆಟ್ಟಿದೆ. ಆಗ್ರಾ, ಬಾಗ್‌ಪತ್, ಉತ್ತರ ಪ್ರದೇಶದ ಬೃಂದಾವನ; ಬಲ್ಭಗಢ್, ಭಿವಾನಿ, ಹಿಸಾರ್, ಜಿಂದ್, ಪಾಣಿಪತ್, ಹರಿಯಾಣದ ರೋಹ್ಟಕ್ ಮತ್ತು ರಾಜಸ್ಥಾನದ ಭಿವಾಡಿಗಳಲ್ಲಿ ಎಕ್ಯುಐ ಕುಸಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು