ಬುಧವಾರ, ನವೆಂಬರ್ 25, 2020
21 °C
ತೇಜ್‌ಪ್ರತಾಪ್‌ ಪತ್ನಿಯೇ ರಾಜಕೀಯ ವಿರೋಧಿ

ಬಿಹಾರ ಚುನಾವಣೆ: ಲಾಲು ಕುಟುಂಬಕ್ಕೆ ಐಶ್ಚರ್ಯಾ ಕಾಟ!

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಜೆಡಿಯು– ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಈ ಬಾರಿ ಶತಾಯಗತಾಯ ಸೋಲಿಸಬೇಕೆಂಬ ಪಣದೊಂದಿಗೆ ಬಿಹಾರ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಲಾಲು ಪ್ರಸಾದ್ ಕುಟುಂಬಕ್ಕೆ ಐಶ್ವರ್ಯಾ ರಾಯ್‌ ಮಗ್ಗಲು ಮುಳ್ಳಾಗಿ ಪರಿಣಮಿಸಿದ್ದಾರೆ.

ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ತನ್ನ ತಂದೆಯ ಪರ ಪ್ರಚಾರ ಮಾಡುತ್ತಿರುವ ಐಶ್ವರ್ಯಾ, ಲಾಲು ಪ್ರಸಾದ್ ಕುಟುಂಬವನ್ನು ವೈಯಕ್ತಿಕವಾಗಿ ಹಳಿಯುತ್ತ ‘ಅಪಪ್ರಚಾರ’ ಮಾಡುತ್ತಿರುವುದು ಆರ್‌ಜೆಡಿಗೆ ನುಂಗಲಾರದ ತುತ್ತಾದಂತಾಗಿದೆ.

ಹೀಗೆ ಆರ್‌ಜೆಡಿಯನ್ನು ಕಾಡುತ್ತಿರುವ ಐಶ್ವರ್ಯಾ ರಾಯ್ ಬೇರೆ ಯಾರೂ ಅಲ್ಲ. ಲಾಲು ಅವರ ಹಿರಿಯ ಪುತ್ರ ತೇಜ್‌ಪ್ರತಾಪ್ ಅವರ ಪತ್ನಿ.

2018ರಲ್ಲಿ ತೇಜ್‌ಪ್ರತಾಪ್ ಕೈಹಿಡಿದಿದ್ದ ಇವರ ವೈವಾಹಿಕ ಜೀವನ ಕೇವಲ 9 ತಿಂಗಳಲ್ಲಿ ಅಂತ್ಯಗೊಂಡಿದ್ದು, ವಿಚ್ಛೇದನ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಾಲಯ ಇನ್ನಷ್ಟೇ ಇತ್ಯರ್ಥಗೊಳಿಸಬೇಕಿದೆ.

70ರ ದಶಕದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ದರೋಗಾ ಪ್ರಸಾದ್ ರಾಯ್ ಮೊಮ್ಮಗಳಾಗಿರುವ ಐಶ್ವರ್ಯಾ, ಸಾರನ್ ಜಿಲ್ಲೆಯ ಸೋನ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ತಂದೆ ಚಂದ್ರಿಕಾ ರಾಯ್‌ ಪರ ಕಳೆದ ಮೂರು ದಿನಗಳಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಪ್ರಚಾರದುದ್ದಕ್ಕೂ ಬಹಿರಂಗ ಸಭೆಗಳಲ್ಲಿ ಭಾಷಣಕ್ಕೆ ಅವಕಾಶ ಪಡೆಯುತ್ತಿರುವ ಇವರ ಪ್ರಮುಖ ಚುನಾವಣಾ ವಿಷಯ ಲಾಲು ಕುಟುಂಬವನ್ನು ಹಳಿಯುವುದೇ ಆಗಿದೆ.

ಆರ್‌ಜೆಡಿಯ ಪ್ರಮುಖ ಮುಖಂಡರಾಗಿದ್ದ ಚಂದ್ರಿಕಾ ರಾಯ್, ಕಳೆದ ಮಾರ್ಚ್‌ನಲ್ಲಷ್ಟೇ ಜೆಡಿಯು ಸೇರಿಕೊಂಡಿದ್ದಾರೆ.

ಪರಿತ್ಯಕ್ತ ಪತಿ ತೇಜ್‌ಪ್ರತಾಪ್‌ ವಿರುದ್ಧವೇ ಐಶ್ವರ್ಯಾ ರಾಯ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವಾದರೂ ರಾಯ್ ಕುಟುಂಬ ಕೊನೆಯ ಕ್ಷಣದಲ್ಲಿ ಸ್ಪರ್ಧೆಯ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿತ್ತು.

ತೇಜ್‌ಪ್ರತಾಪ್‌ ಅವರು ಕಳೆದ ಬಾರಿ ಸ್ಪರ್ಧಿಸಿದ್ದ ಮಹುವಾ ಕ್ಷೇತ್ರವನ್ನು ಬಿಟ್ಟು ಸಮಷ್ಟಿಪುರ ಜಿಲ್ಲೆಯ ಹಸನ್‌ಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು ಈ ವದಂತಿಗಳಿಗೆ ಪುಷ್ಟಿ ನೀಡಿತ್ತು.

ಮದ್ಯ ನಿಷೇಧ; ಮಹಿಳೆಯರ ಬೆಂಬಲ

2015ರ ಚುನಾವಣೆ ಸಂದರ್ಭ ಮತದಾರರಿಗೆ ಭರವಸೆ ನೀಡಿದಂತೆ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಪ್ರಸಕ್ತ ಚುನಾವಣೆಯಲ್ಲಿ ಸಹಜವಾಗಿಯೇ ಮಹಿಳೆಯರ ಬೆಂಬಲ ವ್ಯಕ್ತವಾಗುತ್ತಿದೆ.

ಆಡಳಿತದ ಅವಧಿಯ ಐದು ವರ್ಷದುದ್ದಕ್ಕೂ ಮದ್ಯ ಮಾರಾಟದ ಆದೇಶ ಹಿಂದೆ ಪಡೆಯದೆಯೇ, ಮದ್ಯಪಾನ ವಿರೋಧಿಗಳ ಕಣ್ಮಣಿಯಾಗಿ ಉಳಿದಿರುವ ನಿತೀಶ್‌ ಅವರಿಗೆ ಮದ್ಯಪ್ರಿಯ ಪುರುಷರ ವಿರೋಧ ಎದುರಾಗುವ ಸಾಧ್ಯತೆಯೂ ದಟ್ಟವಾಗಿದೆ.

ಉದ್ಯೋಗ ಭರವಸೆಗೆ ಟೀಕೆ

ಉಚಿತ ಕೋವಿಡ್‌ ಲಸಿಕೆ ನೀಡುವ ಬಿಜೆಪಿಯ ಭರವಸೆಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ. 19 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂಬುದು ಬಿಜೆಪಿಯ ಇನ್ನೊಂದು ಭರವಸೆ. ಈ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. 

‘ಹತ್ತು ಲಕ್ಷ ಉದ್ಯೋಗ ನೀಡುವುದಾಗಿ ಮಹಾಮೈತ್ರಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ನೀಡಿದ ಭರವಸೆಯನ್ನು ನಿನ್ನೆಯವರೆಗೆ ಬಿಜೆಪಿ ಪ್ರಶ್ನಿಸಿತ್ತು. ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್‌ ಕುಮಾರ್‌ ಅವರೂ ತೇಜಸ್ವಿ ಅವರನ್ನು ಹಂಗಿಸಿದ್ದರು. ಈಗ, 19 ಲಕ್ಷ ಉದ್ಯೋಗ ಕೊಡುವುದಾಗಿ ಬಿಜೆಪಿ ಭರವಸೆ ಕೊಟ್ಟಿದೆ. ಬಿಜೆಪಿ ಈಗ ಹಾಸ್ಯಾಸ್ಪದವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಪ್ರೇಮ ಚಂದ್ರ ಮಿಶ್ರಾ ಹೇಳಿದ್ದಾರೆ. 

‘ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಬಿಜೆಪಿ ಈಡೇರಿಸಿದ್ದಿದ್ದರೆ ಈಗ 10 ಲಕ್ಷ ಉದ್ಯೋಗದ ಭರವಸೆ ನೀಡುವ ಅಗತ್ಯ ಇರಲಿಲ್ಲ’ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 

ಮೋದಿ, ರಾಹುಲ್‌ ಪ್ರಚಾರ

ಬಿಹಾರ ಚುನಾವಣಾ ಪ್ರಚಾರವು ಶುಕ್ರವಾರದಿಂದ ಇನ್ನಷ್ಟು ರಂಗೇರಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. 

ಅಕ್ಟೋಬರ್‌ 28ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಮೋದಿ ಅವರು ಮೂರು ಮತ್ತು ರಾಹುಲ್‌ ಅವರು ಎರಡು ರ್‍ಯಾಲಿಗಳನ್ನು ನಡೆಸಲಿದ್ದಾರೆ. ಮೋದಿ ಅವರ ಜತೆಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರು ರಾಹುಲ್‌ಗೆ ಸಾಥ್ ನೀಡಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು