ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಗೆ ಅಖಿಲೇಶ್‌ ಭೇಟಿ

ಬಿಜೆಪಿಯ ‘ಹಿಂದೂ ವಿರೋಧಿ’ ಆರೋಪಕ್ಕೆ ಪ್ರತ್ಯುತ್ತರ
Last Updated 26 ಫೆಬ್ರುವರಿ 2022, 21:51 IST
ಅಕ್ಷರ ಗಾತ್ರ

ಲಖನೌ: ‘ನನಗೆ ರಾಮನ ಅನುಗ್ರಹವಿದೆ. ಜನರು ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂಬ ಖಚಿತತೆ ಇದೆ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಅಯೋಧ್ಯೆಯಲ್ಲಿ ಶುಕ್ರವಾರ ಹೇಳಿದ್ದಾರೆ.

ಮುಸ್ಲಿಂ ಸಮುದಾಯದವನ್ನು ಎದುರು ಹಾಕಿಕೊಳ್ಳುವ ಭೀತಿಯಿಂದ ಅಖಿಲೇಶ್‌ ಅವರುಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವುದಿಲ್ಲ ಎಂದು ಬಿಜೆಪಿ ಆರೋಪಿಸುತ್ತಲೇ ಇತ್ತು. ರಾಮ ಮಂದಿರಕ್ಕೆ ಭೇಟಿ ನೀಡುವ ಮೂಲಕ ಅಖಿಲೇಶ್‌ ಆ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಐದನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರದ ಕೊನೆ ದಿನವಾದ ಶುಕ್ರವಾರ ಅವರು ಅಯೋಧ್ಯೆಯಲ್ಲಿ ರೋಡ್‌ ಶೋ ನಡೆಸಿದರು. ಹಲವಾರು ಸಂತರು ಈ ವೇಳೆ ಭಾಗವಹಿಸಿದ್ದರು. ತೆಹ್ರಿ ಬಜಾರ್‌, ರಾನೊಪಾಲಿ, ಬೆನಿಗಂಜ್‌ ಮತ್ತು ಅಮಾನಿಗಂಜ್‌ ಪ್ರದೇಶಗಳ ಮೂಲಕ ‘ಸಮಾಜವಾದಿ ರಥ’ ಹಾದುಹೋಯಿತು.

ಬಳಿಕ, ನಯಾ ಘಾಟ್‌ನಲ್ಲಿ ಚುನಾವಣಾ ಸಭೆ ನಡೆಸಿದ ಅವರು, ‘ಜನರು ಬಿಜೆಪಿಯನ್ನು ತಿರಸ್ಕರಿಸಿ, ದೇಶ ಮತ್ತು ರಾಜ್ಯದ ಸಂಯುಕ್ತ ಸಂಸ್ಕೃತಿಯನ್ನು ಕಾಪಾಡುತ್ತಾರೆ ಎಂಬ ಭರವಸೆ ಇದೆ. ಈ ಚುನಾವಣೆ ಬಳಿಕ ಎಸ್‌ಪಿ ಸರ್ಕಾರ ರಚಿಸಿದರೆ ಮುಂದಿನ ಐದು ವರ್ಷಗಳಲ್ಲಿ ಅಯೋಧ್ಯೆಯನ್ನು ಪ್ರಮುಖ ಧಾರ್ಮಿಕ ಸ್ಥಳವನ್ನಾಗಿ ಮಾರ್ಪಾಡು ಮಾಡಲಾಗುವುದು’ ಎಂದು ಭರವಸೆ ನೀಡಿದರು. ಜೊತೆಗೆ, 2015ರಲ್ಲಿ ಅಯೋಧ್ಯೆಯಲ್ಲಿ ‘ಭಜನಾ ಸ್ಥಳ’ವನ್ನು ತಮ್ಮ ಸರ್ಕಾರವೇ ನಿರ್ಮಿಸಿದ್ದು ಎಂದು ಜನರಿಗೆ ನೆನಪಿಸಿದರು.

ಬೀಡಾಡಿ ಜಾನುವಾರುಗಳ ಹಾವಳಿ, ನಿರುದ್ಯೋಗ ಮತ್ತು ಬೆಲೆ ಏರಿಕೆ ಕುರಿತು ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಯುವಜನರಿಗೆ ಉದ್ಯೋಗ ನೀಡುವ ಸಲುವಾಗಿ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಬಾಬಾ (ಯೋಗಿ ಆದಿತ್ಯನಾಥ) ಅವರ ನೆಚ್ಚಿನ ಪ್ರಾಣಿ (ಬೀಡಾಡಿ ಜಾನುವಾರುಗಳು) ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುತ್ತಿವೆ. ಮತದಾನದ ವೇಳೆ ರೈತರು ಈ ಸಮಸ್ಯೆ ಕುರಿತು ಬಿಜೆಪಿಗೆ ಸರಿಯಾದ ಉತ್ತರ ನೀಡುತ್ತಾರೆ’ ಎಂದರು.

ಮೂರು ಹಂತಗಳ ಮತದಾನ ಬಾಕಿ ಇರುವ ಕಾರಣದಿಂದಾಗಿ ಅಖಿಲೇಶ್‌ ಅವರ ಅಯೋಧ್ಯೆ ಭೇಟಿ ಮಹತ್ವ ಪಡೆದಿದೆ. ಬಿಜೆಪಿ ನೀಡಿರುವ ‘ಹಿಂದೂ ವಿರೋಧಿ’ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಅಖಿಲೇಶ್‌ ಅವರು ಮಾಡಿರುವ ಪ್ರಯತ್ನವಿದು ಎಂದು ಕೂಡಾ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT