ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Uttar Pradesh Election: ರಾಮನೆಂದು ಬಿಂಬಿಸಿಕೊಳ್ಳುತ್ತಿರುವ ಅಖಿಲೇಶ್

Last Updated 24 ಡಿಸೆಂಬರ್ 2021, 15:36 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಬಹಿರಂಗ ಸಮಾವೇಶಗಳು ಕಾವೇರುತ್ತಿವೆ. ರಾಜಕೀಯ ನಾಯಕರ ನಡುವಣ ಆರೋಪ-ಪ್ರತ್ಯಾರೋಪಗಳು ಸಾಮಾನ್ಯವಾಗಿ ಬಿಟ್ಟಿದೆ.

1990ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡಿನ ದಾಳಿ ನಡೆದಾಗ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಸರ್ಕಾರ ಅಧಿಕಾರದಲ್ಲಿತ್ತು. ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನ ಬಿಜೆಪಿಯಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ತಕ್ಕ ತಿರುಗೇಟು ನೀಡಲು ಎಸ್‌ಪಿ ಹಾಗೂ ಮಿತ್ರ ಪಕ್ಷ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಂದಾಗಿದೆ.

ಅಲಿಗಢ ಜಿಲ್ಲೆಯ ಇಗ್ಲಾಸ್‌ನಲ್ಲಿ ನಡೆದ ಎಸ್‌ಪಿ ಹಾಗೂ ಆರ್‌ಎಲ್‌ಡಿಯ ಜಂಟಿ ಸಮಾವೇಶದಲ್ಲಿ, ಅಖಿಲೇಶ್ ಯಾದವ್ ಹಾಗೂ ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ ಅವರನ್ನು ರಾಮ-ಲಕ್ಷ್ಮಣರಿಗೆ ಸರಿ ಸಮಾನರಾಗಿ ಬಿಂಬಿಸುವ ಪ್ರಯತ್ನ ನಡೆದಿದೆ. ರಾಮ-ಲಕ್ಷ್ಮಣರು ಸೇರಿಕೊಂಡು ರಾಕ್ಷಸರನ್ನು (ಬಿಜೆಪಿ) ಮುಗಿಸಲಿದೆ ಎಂಬ ಪೋಸ್ಟರ್‌ಗಳನ್ನು ಸಮಾವೇಶದಲ್ಲಿದ್ದ ಕಾರ್ಯಕರ್ತರಿಗೂ ಹಂಚಲಾಯಿತು.

ಸ್ಥಳೀಯ ಜಾನಪದ ಗಾಯಕರು ಅಖಿಲೇಶ್-ಜಯಂತ್ ಅವರನ್ನು ರಾಮ-ಲಕ್ಷ್ಮಣರಂತೇ ಬಿಂಬಿಸುತ್ತಿರುವುದು ಕಂಡುಬಂದಿದೆ. ಈ ಘೋಷಣೆ ಕೂಗಿದಾಗೆಲ್ಲ ಬೆಂಬಲಿಗರಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತು.

ರಾಯ್‌ಬರೇಲಿಯಲ್ಲಿ ನಡೆದ ಮಗದೊಂದು ಸಮಾವೇಶದಲ್ಲಿ ಅಖಿಲೇಶ್ ಯಾದವ್ ಅವರನ್ನು ಕೃಷ್ಣನ ಜೊತೆ ಹೋಲಿಕೆ ಮಾಡಲಾಯಿತು ಎಂದು ವರದಿಯಾಗಿದೆ.

ಅಖಿಲೇಶ್ ಹಾಗೂ ಜಯಂತ್ ರಾಮ-ಲಕ್ಷ್ಮಣರ ಹಾಗೆ ಸಹೋದರರು ಇದ್ದಂತೆ ಎಂದು ಎಸ್‌ಪಿ ಹಾಗೂ ಆರ್‌ಎಲ್‌ಡಿ ನಾಯಕರು ಹೇಳಿದ್ದಾರೆ. 'ಅವರನ್ನು ಹಾಗೆ ಬಿಂಬಿಸುವುದರಲ್ಲಿ ತಪ್ಪೇನಿಲ್ಲ, ಜನರನ್ನು ಭಯಭೀತರನ್ನಾಗಿಸಿದ ರಾಕ್ಷಸರನ್ನು ರಾಮ-ಲಕ್ಷ್ಮಣರು ಮುಗಿಸಿದಂತೆ ದುರಾಡಳಿತದ ಪ್ರತೀಕವಾಗಿರುವ ಬಿಜೆಪಿಯನ್ನು ಸೋಲಿಸಲು ಅಖಿಲೇಶ್-ಜಯಂತ್ ಕೈಜೋಡಿಸಿದ್ದಾರೆ' ಎಂದು ಹೇಳಿದ್ದಾರೆ.

'ಬಿಜೆಪಿ ಚುನಾವಣೆಯನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದೆ. ಆ ಎಲ್ಲ ಯೋಜನೆಗಳನ್ನು ವಿಫಲಗೊಳಿಸುತ್ತೇವೆ' ಎಂದು ಎಸ್‌ಪಿ ನಾಯಕರೊಬ್ಬರು ಹೇಳಿದ್ದಾರೆ.

ಇತ್ತೀಚೆಗೆ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರದ ಆಡಳಿತದಲ್ಲಿ ಹಿಂದೂಗಳಿಗೆ ಹಬ್ಬಗಳನ್ನು ಆಚರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT