ಕಾಶ್ಮೀರದಲ್ಲಿ ಯುದ್ಧದ ರೀತಿಯಲ್ಲಿ ಸಂಗ್ರಹಿಸಿದ್ದ ಶಸ್ತ್ರಾಸ್ತ್ರ ವಶ

ಶ್ರೀನಗರ: ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರಾಂತ್ಯದಲ್ಲಿ ಪಾಕಿಸ್ತಾನ, ಚೀನಾದ ರೈಫಲ್‌ಗಳು ಸೇರಿದಂತೆ ಯುದ್ಧದ ರೀತಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದಿಂದ ಮಾದಕ ವಸ್ತು ಕಳ್ಳಸಾಗಾಣೆ ಮಾಡುತ್ತಿದ್ದ ಪ್ರಕರಣದಲ್ಲಿ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಯಲ್ಲಿ ಐವರು ಪೊಲೀಸರು, ರಾಜಕೀಯ ಪಕ್ಷದ ಓರ್ವ ಕಾರ್ಯಕರ್ತ, ಗುತ್ತಿಗೆದಾರ ಮತ್ತು ವ್ಯಾಪಾರಿ ಸೇರಿದಂತೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರು ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 74 ರೈಫಲ್ಸ್‌ಗಳು, 24 ಮ್ಯಾಗಜೈನ್ಸ್‌ಗಳು, ಬಂದೂಕಿನ 560 ಸುತ್ತಿನ ಮದ್ದುಗುಂಡುಗಳು, 12 ಚೀನಾ ಪಿಸ್ತೂಲು, ಪಿಸ್ತೂಲಿನ 224 ಸುತ್ತಿನ ಮದ್ದುಗುಂಡು, 14 ಪಾಕಿಸ್ತಾನ ಮತ್ತು ಚೀನಾದ ಗ್ರೆನೇಡ್, ಪಾಕಿಸ್ತಾನ ಧ್ವಜದ ಚಿತ್ರ ಹೊಂದಿರುವ 81 ಬಲೂನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಎನ್‌ಐ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಬಂಧಿತ ವಾಸೀಂ ನಜರ್ ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ವಾಸೀಂ ಮಾದಕ ವಸ್ತು ಕಳ್ಳಸಾಗಣಿಕೆ ಬೃಹತ್ ಜಾಲದ ಸದಸ್ಯ. ಜಿಲ್ಲೆಯಲ್ಲಿನ ತನ್ನ ಸಹವರ್ತಿಗಳ ಕುರಿತಾಗಿಯೂ ಈತ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.