ಬುಧವಾರ, ಜೂನ್ 29, 2022
23 °C

ಅಲಿಗಡ ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 36ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಲಿಗಡ/ಲಖನೌ: ಅಲಿಗಡದಲ್ಲಿ ಶುಕ್ರವಾರ ಸಂಭವಿಸಿದ್ದ ಕಳ್ಳಭಟ್ಟಿ ದುರಂತದಲ್ಲಿ ಮತ್ತೆ 11 ಜನರು ಮೃತಪಟ್ಟಿರುವುದು ಸೋಮವಾರ ದೃಢಪಟ್ಟಿದೆ. ಇದರಿಂದ ಮೃತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ವಿಷಕಾರಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು ಉತ್ತರ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ.

ಇದರ ಬೆನ್ನಲ್ಲೆ ಉತ್ತರ ಪ್ರದೇಶ ಸರ್ಕಾರ ಅಬಕಾರಿ ಆಯುಕ್ತ ಪಿ. ಗುರುಪ್ರಸಾದ್‌ ಮತ್ತು ಇಬ್ಬರು ಹಿರಿಯ ಅಧಿಕಾರಿಗಳು ಅಮಾನತು ಮಾಡಿದೆ. ಅಲ್ಲದೆ ಇಡೀ ದುರಂತದ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ.

ವಿಷಕಾರಿ ಮದ್ಯ ಸೇವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿರುವ ಇತರ 35 ಜನರ ಒಳಾಂಗಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಇಲ್ಲಿನ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ.ಭಾನು ಪ್ರತಾಪ್ ಕಲ್ಯಾಣಿ ತಿಳಿಸಿದ್ದಾರೆ.

ಈ ದುರಂತದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಸತತ ಮೂರನೇ ದಿನವೂ ಪೊಲೀಸರು, ಅಬಕಾರಿ ಅಧಿಕಾರಿಗಳು ದಾಳಿಗಳನ್ನು ಮುಂದುವರಿಸಿದ್ದು, ಅಕ್ರಮ ಮದ್ಯ ವ್ಯಾಪಾರದಲ್ಲಿ ನೇರ ಮತ್ತು ಪರೋಕ್ಷವಾಗಿ ಭಾಗಿ ಆಗಿರುವ 10 ಜನರನ್ನು ಸೋಮವಾರ ಬಂಧಿಸಿದ್ದಾರೆ. ಇದರೊಂದಿಗೆ ಶುಕ್ರವಾರದಿಂದ ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಬಂಧಿತರಾಗಿರುವ ಸಂಖ್ಯೆ 30ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.

ಅಕ್ರಮ ಮದ್ಯ ವ್ಯಾಪಾರಕ್ಕೆ ಬಳಸಲಾಗುತ್ತಿದ್ದ ಹಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆಯೇ ಎಂಬುದರ ಕುರಿತು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಕ್ರಮ ಮದ್ಯ ವ್ಯಾಪಾರದಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.

‘ಶುಕ್ರವಾರದಿಂದ ಸೋಮವಾರ ಮುಂಜಾನೆಯವರೆಗೆ ಒಟ್ಟು 71 ಶವಗಳು ಮರಣೋತ್ತರ ಪರೀಕ್ಷೆಗೆ ಬಂದಿವೆ. ಇವುಗಳ ಪೈಕಿ 36 ಜನರ ಸಾವಿಗೆ ವಿಷಕಾರಿ ಮದ್ಯವೇ ಕಾರಣ ಎಂಬುದು ದೃಢಪಟ್ಟಿದೆ. ಉಳಿದ 35 ಶವಗಳ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಅವರ ಸಾವಿಗೂ ವಿಷಯುಕ್ತ ಮದ್ಯವೇ ಕಾರಣ ಎಂದು ಶಂಕಿಸಲಾಗಿದೆ. ಆದರೆ, ಇವರ ಒಳಾಂಗಗಳ ವರದಿ ಬಂದ ನಂತರವೇ ಸಾವಿಗೆ ಖಚಿತ ಕಾರಣ ತಿಳಿಯುತ್ತದೆ’ ಎಂದು ಸಿಎಂಒ ಭಾನು ಪ್ರತಾಪ್ ಕಲ್ಯಾಣಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು