ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಪಕ್ಷಗಳು ಚುನಾವಣೆ ಬಯಸಿವೆ: ಮುಖ್ಯ ಚುನಾವಣಾ ಆಯುಕ್ತ

ಮುಖ್ಯ ಚುನಾವಣಾ ಆಯುಕ್ತ ಹೇಳಿಕೆ l ಉತ್ತರ ಪ್ರದೇಶದಲ್ಲಿ ನಿಗದಿತ ಅವಧಿಯಲ್ಲೇ ಚುನಾವಣೆ ನಡೆಸುವ ಸುಳಿವು
Last Updated 30 ಡಿಸೆಂಬರ್ 2021, 18:32 IST
ಅಕ್ಷರ ಗಾತ್ರ

ಲಖನೌ: ‘ಉತ್ತರ ಪ್ರದೇಶ ವಿಧಾನಸಭಾ ಚುನಾವಣೆನಿಗದಿತ ಅವಧಿಯಲ್ಲೇ ನಡೆಯಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಬಯಸಿವೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಹೇಳಿದ್ದಾರೆ.

ಕೋವಿಡ್‌ನ ಮೂರನೇ ಅಲೆ ಬರುವ ಅಪಾಯವಿರುವ ಕಾರಣ 2022ರ ಮಾರ್ಚ್‌ನಲ್ಲಿ ನಡೆಯಬೇಕಿರುವ ಚುನಾವಣೆಯನ್ನು ಮುಂದೂಡುವುದನ್ನು ಪರಿಗಣಿಸಿ ಎಂದು ಅಲಹಾಬಾದ್ ಹೈಕೋರ್ಟ್‌ ಇದೇ 23ರಂದು ಚುನಾವಣಾ ಆಯೋಗಕ್ಕೆ ಹೇಳಿತ್ತು. ಆದರೆ ಈಗ ಚುನಾವಣಾ ಆಯುಕ್ತರು, ‘ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಚುನಾವಣೆ ನಡೆಸಬೇಕು’ ಎಂದು ಹೇಳಿದ್ದಾರೆ. ಚುನಾವಣೆ ಮುಂದೂಡುವ ಸಾಧ್ಯತೆ ಇಲ್ಲ ಎಂಬ ಸೂಚನೆಯನ್ನು ಈ ಮೂಲಕ ಅವರು ನೀಡಿದ್ದಾರೆ.

ಸುಶೀಲ್ ಚಂದ್ರ ಅವರು ರಾಜಕೀಯ ಪಕ್ಷಗಳ ಜತೆಗೆ ಬುಧವಾರ ಸಭೆ ನಡೆಸಿದ್ದರು. ಸಭೆಯ ಮರುದಿನ ಈ ಬಗ್ಗೆ ಅವರು ವಿವರ ನೀಡಿದ್ದಾರೆ. ಅಲ್ಲದೆ, ಚುನಾವಣೆ ನಡೆಯಬೇಕಿರುವುದರಿಂದ ಕೋವಿಡ್‌ ಲಸಿಕೆ
ಕಾರ್ಯಕ್ರಮಕ್ಕೆ ವೇಗ ನೀಡಿ ಎಂದು ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿದ್ದಾರೆ.

‘ಪ್ರಚಾರ ರ‍್ಯಾಲಿಗಳಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಡೆಗಣಿಸುತ್ತಿರುವುದರ ಬಗ್ಗೆ ಮತ್ತು ದ್ವೇಷ ಭಾಷಣದ ಬಗ್ಗೆ ಕೆಲವು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಎಚ್ಚರಿಕೆ ವಹಿಸಲಾಗುವುದು. ದ್ವೇಷ ಭಾಷಣ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆಯೋಗದ ಸಿವಿಜಿಲ್ ಆ್ಯಪ್‌ ಸಕ್ರಿಯವಾಗಲಿದೆ. ಚುನಾವಣಾ ಅಕ್ರಮಗಳ ಬಗ್ಗೆ ದೂರುದಾರರು ಈ ಆ್ಯಪ್‌ ಮೂಲಕ ದೂರು, ಚಿತ್ರ/ವಿಡಿಯೊ ಸಲ್ಲಿಸಬಹುದು. ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಕೆಲವು ಅಧಿಕಾರಿಗಳು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಚುನಾವಣಾ ಕರ್ತವ್ಯದಿಂದ ದೂರ ಇಡುವಂತೆ ಹಲವು ಪಕ್ಷಗಳು ಮನವಿ ಸಲ್ಲಿಸಿವೆ. ಆ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತದೆ. ಅಂತಹ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದ ಹೊಣೆ ನೀಡುವುದಿಲ್ಲ’ ಎಂದು ಆಯುಕ್ತರು ಹೇಳಿದ್ದಾರೆ.

‘ಜನವರಿ 5ರಂದು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಚುನಾವಣೆಯ ಅಧಿಸೂಚನೆ ಬಂದು, ನಾಮಪತ್ರ ಸಲ್ಲಿಕೆ ಆರಂಭವಾಗುವವರೆಗೆ ಮತದಾರರ ಪಟ್ಟಿಗೆ ಆಕ್ಷೇಪ ಸಲ್ಲಿಸಲು ಅವಕಾಶವಿರಲಿದೆ. ರಾಜ್ಯದಲ್ಲಿ ಒಟ್ಟು 15 ಕೋಟಿಗೂ ಹೆಚ್ಚು ಅರ್ಹ ಮತದಾರರು ಇದ್ದಾರೆ. ಈ ಬಾರಿ 52.80 ಲಕ್ಷ ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಮತಗಟ್ಟೆಗಳಲ್ಲಿನ ವಿವಿಪ್ಯಾಟ್‌ಗಳನ್ನು ಪರಸ್ಪರ ತಾಳೆ ಮಾಡಿ ನೋಡಲಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಪಾಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಕ್ರಮಗಳು

l ರಾಜ್ಯದಲ್ಲಿ ಲಸಿಕೆ ಪಡೆದುಕೊಳ್ಳಲು ಅರ್ಹರಾದ ಶೇ 86ರಷ್ಟು ಜನರಿಗೆ ಲಸಿಕೆಯ ಮೊದಲ ಡೋಸ್‌ ನಿಡಲಾಗಿದೆ. ಶೇ 49ರಷ್ಟು ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. ಮುಂದಿನ 15–20 ದಿನಗಳಲ್ಲಿ ಎಲ್ಲಾ ಅರ್ಹ ಜನರಿಗೆ ಮೊದಲ ಡೋಸ್‌ ನೀಡಲಾಗುತ್ತದೆ

l ರಾಜ್ಯದಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು ಏರಿಸಲಾಗಿದೆ. ಮೊದಲು 1,500 ಜನರಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗುತ್ತಿತ್ತು. ಈಗ 1,250 ಜನರಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗುತ್ತದೆ. ಹೀಗಾಗಿ ಒಟ್ಟು ಮತಗಟ್ಟೆಗಳ ಸಂಖ್ಯೆಯನ್ನು 1,63,351ರಿಂದ 1,74,351ಕ್ಕೆ ಏರಿಸಲಾಗಿದೆ

l ನಕ್ಸಲ್ ಪೀಡಿತ ಪ್ರದೇಶದಲ್ಲಿರುವ ಮತಗಟ್ಟೆಗಳನ್ನು ಹೊರತುಪಡಿಸಿ, ಬೇರೆಡೆ ಇರುವ ಎಲ್ಲಾ ಮತಗಟ್ಟೆಗಳಲ್ಲಿ ಮತದಾನದ ಅವಧಿಯನ್ನು ಒಂದು ತಾಸು ವಿಸ್ತರಿಸಲಾಗಿದೆ

l ಚುನಾವಣೆ ಕರ್ತವ್ಯದಲ್ಲಿರುವ ಎಲ್ಲಾ ಅಧಿಕಾರಿಗಳು ಕನಿಷ್ಠ ಎರಡೂ ಡೋಸ್‌ ಹಾಕಿಸಿಕೊಳ್ಳಬೇಕು. ಅಗತ್ಯವಿದ್ದವರಿಗೆ ಮುನ್ನೆಚ್ಚರಿಕಾ ಡೋಸ್‌ ಅನ್ನು ಸಹ ನೀಡಲಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ

l ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್‌ ಮತ್ತು ಸ್ಯಾನಿಟೈಸರ್‌ ಇಡಲಾಗುತ್ತದೆ. ಅಂತರ ಕಾಯ್ದುಕೊಳ್ಳಲು ಒತ್ತು ನೀಡಲಾಗುತ್ತದೆ

l ಅಂಗವಿಕಲರು, 80 ವರ್ಷ ಮೇಲ್ಪಟ್ಟವರು ಮತ್ತು ಕೋವಿಡ್‌ ಪೀಡಿತರು ತಮ್ಮ ಮನೆಯಿಂದಲೇ ಅಂಚೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಅಂತಹ ಮತದಾರರ ವಿವರವನ್ನು ರಾಜಕೀಯ ಪಕ್ಷಗಳಿಗೂ ನೀಡಲಾಗುತ್ತದೆ. ಮತದಾನದ ವೇಳೆ ಪಕ್ಷಗಳ ಏಜೆಂಟರು ಉಪಸ್ಥಿತರಿರಲು ಮತ್ತು ಗೋಪ್ಯ ಮತದಾನ ನಡೆಸಲು ಒತ್ತು ನೀಡಲಾಗುತ್ತದೆ

ಸಭೆಗೆ ಅವಕಾಶ ನೀಡಿ: ಆಯೋಗಕ್ಕೆ ಕಾಂಗ್ರೆಸ್‌ ಪತ್ರ

ಲಖನೌ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತರ ಸಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ನಿಯೋಗವು ಅಧಿಕೃತವಾದ ನಿಯೋಗವಲ್ಲ. ಹಾಗಾಗಿ, ಮತ್ತೊಂದು ಸಭೆ ನಡೆಸಲು ಪಕ್ಷಕ್ಕೆ ಗುರುವಾರ ಅವಕಾಶ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಮಾಡಿದೆ.

ಉತ್ತರ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ ಕುಮಾರ್‌ ಲಲ್ಲು ಈ ಕುರಿತು ಚುನಾವಣಾ ಆಯೋಗಕ್ಕೆ ಬುಧವಾರ ಪತ್ರ ಬರೆದಿದ್ದಾರೆ. ‘ಕಾಂಗ್ರೆಸ್‌ ನಾಯಕರಾದ ಆರಾಧನಾ ಮಿಶ್ರಾ, ಪ್ರಮೋದ್‌ ತಿವಾರಿ ಮತ್ತು ನಸೀಮುದ್ದೀನ್‌ ಸಿದ್ದಿಖಿ ಅವರನ್ನೊಳಗೊಂಡ ಅಧಿಕೃತ ನಿಯೋಗಕ್ಕೆ ನಿಮ್ಮನ್ನು ಭೇಟಿ ಆಗಲು ಅವಕಾಶ ನೀಡಿ. ಚುನಾವಣೆಯನ್ನು ನಿರ್ದಿಷ್ಟ ಸಮಯದಲ್ಲಿ ಪಾರದರ್ಶಕವಾಗಿ ನಡೆಸಲು ಈ ನಿಯೋಗ ಸಲಹೆಗಳನ್ನು ನೀಡಲಿದೆ’ ಎಂದು ಅವರು ಪತ್ರದಲ್ಲಿ
ಹೇಳಿದ್ದಾರೆ. ‌

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ, ‘ಕಾಂಗ್ರೆಸ್‌ ನೀಡಿದ್ದ ಪತ್ರದಲ್ಲಿ ಯಾವ ನಾಯಕರ ಹೆಸರುಗಳು ನಮೂದಾಗಿದ್ದವೋ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು’ ಎಂದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪೂರ್ವತಯಾರಿ ಪರಿಶೀಲಿಸಲು ಚುನಾವಣಾ ಆಯೋಗದ ಅಧಿಕಾರಿಗಳು ಲಖನೌಗೆ ಭೇಟಿ ನೀಡಿದ್ದರು. ಆ ವೇಳೆ ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಸರಣಿ ಸಭೆ ನಡೆಸಿದ್ದರು. ಕಾಂಗ್ರೆಸ್‌ನ ತ್ರಿಸದಸ್ಯ ನಿಯೋಗ ಕೂಡಾ ಆಯೋಗದ ಅಧಿಕಾರಿಗಳ ಜೊತೆ ಸಭೆ ನಡೆಸಿ ತಮ್ಮ ಬೇಡಿಕೆಗಳನ್ನು ಆಯೋಗದ ಎದುರು ಇರಿಸಿತ್ತು.

ಚುನಾವಣಾ ಕಣದಲ್ಲಿ

l ಪಂಜಾಬ್‌ನಲ್ಲಿ ಈಚೆಗೆ ಬಿಜೆಪಿ ಸೇರಿದ್ದ ಶಿರೋಮಣಿ ಅಕಾಲಿ ದಳದ ಮಜಿಂದರ್ ಸಿಂಗ್ ಸಿರ್ಸಾ ಮತ್ತು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ರಾಣಾ ಗುರುಮಿತ್ ಸಿಂಗ್ ಸೋಧಿ ಅವರಿಗೆ ಕೇಂದ್ರ ಸರ್ಕಾರವು ಝಡ್‌ ಶ್ರೇಣಿಯ ಭದ್ರತೆ ನೀಡಿದೆ

l ಗೋವಾ: ‘ಪಕ್ಷವನ್ನು ತೊರೆದು, ಬೇರೆ ಪಕ್ಷವನ್ನು ಸೇರುವುದಿಲ್ಲ’ ಎಂಬ ಪ್ರಮಾಣ ಇರುವ ಪತ್ರಕ್ಕೆ ಸಹಿ ಮಾಡಲು ಎಎಪಿಯು ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಸೂಚಿಸಿದೆ. ಚುನಾವಣೋತ್ತರ ಪಕ್ಷಾಂತರವನ್ನು ತಡೆಯಲು ಹೀಗೆ ಮಾಡಲಾಗುತ್ತಿದೆ ಎಂದು ಪಕ್ಷವು ಹೇಳಿದೆ

l ಉತ್ತರ ಪ್ರದೇಶ: ವಾಲ್ಮೀಕಿ ಜನಾಂಗವನ್ನು ಪ್ರತಿನಿಧಿಸುವ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗುವುದು. ಸೂಕ್ತ ವ್ಯಕ್ತಿಯನ್ನು ಜನಾಂಗದ ಜನರೇ ಸೂಚಿಸಿ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕರೆ ನೀಡಿದ್ದಾರೆ

l ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಯಾವುದೇ ಪಕ್ಷದ ಪರವಾಗಿ ಪ್ರಚಾರ ನಡೆಸಲು ಸಿದ್ಧನಿದ್ದೇನೆ ಎಂದು ಡಾ.ಕಫೀಲ್‌ ಖಾನ್ ಘೋಷಿಸಿದ್ದಾರೆ

l ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಸವಾಲು ಹಾಕಿದ್ದಾರೆ

l ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಆರನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಎಂಟು ಅಭ್ಯರ್ಥಿಗಳನ್ನು ಹೆಸರಿಸಲಾಗಿದ್ದು, ಈವರೆಗೆ 96 ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ

l ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಂಡಾಯ, ಅಸ್ಥಿರತೆ ಹಾಗೂ ಅಸಮಾನತೆ ಇದ್ದವು. ಆದರೆ ಬಿಜೆಪಿಯು ಮೂಲಸೌಕರ್ಯ ಅಭಿವೃದ್ಧಿ, ಅನ್ವೇಷಣೆ ಹಾಗೂ ಸಮಗ್ರತೆ ತಂದಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ

ಉತ್ತರಾಖಂಡ ಹಿಂದುಳಿಯಲು ಕಾಂಗ್ರೆಸ್ ಕಾರಣ: ಮೋದಿ ಟೀಕೆ

ಹಲ್ದ್‌ವಾನಿ/ಡೆಹ್ರಾಡೂನ್‌ (ಪಿಟಿಐ): ‘ಕೇಂದ್ರ ಮತ್ತು ಉತ್ತರಾಖಂಡದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್‌ ದಶಕಗಳ ಕಾಲ ಅಭಿವೃದ್ಧಿ ಯೋಜನೆಗಳನ್ನು ಚುರುಕುಗೊಳಿಸಲಿಲ್ಲ. ಅದರಿಂದಾಗಿ ರಾಜ್ಯದ ಗ್ರಾಮೀಣ ಭಾಗದ ಜನರು ವಲಸೆ ಹೋಗಬೇಕಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೂಷಿಸಿದರು.

ಉತ್ತರಾಖಂಡದ ಹಲ್ದ್‌ವಾನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉತ್ತರಾಖಂಡದ ಕಾಂಗ್ರೆಸ್‌ ಸರ್ಕಾರ ಲೂಟಿ ಮಾಡುವುದರಲ್ಲಿ ಮಾತ್ರ ಆಸಕ್ತಿ ತೋರಿತು ಎಂದರು.

ಇದೇ ವೇಳೆ, ₹5,747 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಲಖ್ವಾಡ್‌ ಜಲವಿದ್ಯುತ್‌ ಘಟಕವನ್ನು ಅವರು ಉದ್ಘಾಟಿಸಿದರು. ಅಲ್ಲದೆ, ₹12,000 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

‘ಲಖ್ವಾಡ್‌ ಯೋಜನೆ ಕುರಿತು ಮಾತನಾಡಿದ ಅವರು, 1974ರಲ್ಲಿಯೇ ಈ ಯೋಜನೆ ರೂಪಿಸಲಾಗಿತ್ತು. ಆದರೆ ಅದು ಅನುಷ್ಠಾನಕ್ಕೆ ಬರಲು 46 ವರ್ಷಗಳು ಬೇಕಾದವು. ಲಖ್ವಾಡ್ ಯೋಜನೆ ಈ ಮೊದಲೇ ಜಾರಿ ಆಗಿದ್ದರೆ, ಉತ್ತರಾಖಂಡದಲ್ಲಿ ಕುಡಿಯುವ ನೀರು, ವಿದ್ಯುತ್‌, ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು. ಇಂಥ ಯೋಜನೆಯನ್ನು ಇಷ್ಟು ವರ್ಷಗಳ ಕಾಲ ವಿಳಂಬ ಮಾಡಿದ್ದು ಈ ಹಿಂದೆ ಆಡಳಿತ ನಡೆಸಿದವರು ಮಾಡಿದ ಪಾಪ ಕೃತ್ಯವಲ್ಲವೇ. ನೀವು ಈ ಪಾಪ ಕೃತ್ಯವನ್ನು ಕ್ಷಮಿಸುತ್ತೀರಾ’ ಎಂದು ಅವರು ಜನರನ್ನು ಕೇಳಿದರು.

‘ಸಮರ್ಪಕ ರಸ್ತೆಗಳು ಮತ್ತು ಇತರ ಸೌಲಭ್ಯಗಳು ಇಲ್ಲವಾದ ಕಾರಣ ಉತ್ತರಾಖಂಡದ ಹಲವು ತಲೆಮಾರುಗಳು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ನಾನು ಹೃದಯಪೂರ್ವಕ ಮತ್ತು ಆತ್ಮಪೂರ್ವಕವಾಗಿ ಉತ್ತರಾಖಂಡದ ಏಳಿಗೆಗಾಗಿ ಕೆಲಸ ಮಾಡುತ್ತಿದ್ದೇನೆ’ ಎಂದರು. ಈ ತಿಂಗಳಲ್ಲಿ ಮೋದಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.

***

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅವಧಿಯಲ್ಲಿ ಬಾಹುಬಲಿಗಳು ಇಲ್ಲ, ಇರುವವರೆಲ್ಲರೂ ಬಜರಂಗಬಲಿಗಳೇ. ಎಸ್‌ಪಿ ಆಡಳಿತದಲ್ಲಿ ನಮ್ಮ ಹೆಣ್ಣುಮಕ್ಕಳು ಬಾಹುಬಲಿಗಳಿಂದ ದೌರ್ಜನ್ಯ ಅನುಭವಿಸಿದರು

ಅಮಿತ್ ಶಾ, ಕೇಂದ್ರ ಗೃಹಸಚಿವ

***

ಪಶ್ಚಿಮ ಬಂಗಾಳದಲ್ಲಿ ಎದುರಾದ ಹಿನ್ನಡೆಯ ಕಾರಣ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರು ಎಲ್ಲ ಕೆಲಸಗಳನ್ನು ಬಿಟ್ಟು ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಅಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಕಡಿಮೆ

ಅಶೋಕ್ ಗೆಹಲೋತ್, ರಾಜಸ್ಥಾನ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT