ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪರಾಷ್ಟ್ರಪತಿ ಅಭ್ಯರ್ಥಿಯಾಗುವರೇ ಅಮರಿಂದರ್‌ ಸಿಂಗ್? ಬಿಜೆಪಿಯಲ್ಲಿ ಚರ್ಚೆ

Last Updated 2 ಜುಲೈ 2022, 14:51 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಭಾರತದ ಮುಂದಿನ ಉಪರಾಷ್ಟ್ರಪತಿಯಾಗುವ ರೇಸ್‌ನಲ್ಲಿದ್ದಾರೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

‘ಅಮರಿಂದರ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಹೆಸರುಗಳೂ ಬಿಜೆಪಿ ಎದುರು ಚರ್ಚೆಯಲ್ಲಿವೆ. ಬಿಜೆಪಿಯ ಹೈಕಮಾಂಡ್‌ ಮತ್ತು ಸಂಸದೀಯ ಮಂಡಳಿಯು ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ’ ಎಂದು ಬಿಜೆಪಿಯ ಒಳಗಿನ ಕೆಲ ಮಂದಿ ಮಾಹಿತಿ ನೀಡಿರುವುದಾಗಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ಶನಿವಾರ ವರದಿ ಮಾಡಿದೆ.

ಬೆನ್ನಿನ ಶಸ್ತ್ರಚಿಕಿತ್ಸೆಗಾಗಿ ಸಿಂಗ್ ಸದ್ಯ ಲಂಡನ್‌ನಲ್ಲಿದ್ದಾರೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಸಿಂಗ್‌ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡುವ ದೃಢೀಕರಣ ಇನ್ನೂ ಬಂದಿಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ.

ಹಾಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನೇ ಎರಡನೇ ಅವಧಿಗೆ ಮುಂದುವರಿಸುವ ಬಗ್ಗೆಯೂ ಬಿಜೆಪಿಯಲ್ಲಿ ಚರ್ಚೆಗಳಿವೆ ಎಂದು ಹೇಳಲಾಗುತ್ತಿದೆ. ಆದರೂ, ಸದ್ಯಕ್ಕೆ ಈ ಬಗ್ಗೆಯೂ ಸ್ಪಷ್ಟತೆ ಮೂಡಿಲ್ಲ ಎಂದು ಗೊತ್ತಾಗಿದೆ.

ಕಳೆದ ವರ್ಷ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಸಿಂಗ್‌ ಅವರನ್ನು ಕಾಂಗ್ರೆಸ್‌ ಕೆಳಗಿಳಿಸಿತ್ತು. ನಂತರ ಸಿಂಗ್ ಅವರು ಕಾಂಗ್ರೆಸ್ ತೊರೆದು ‘ಪಂಜಾಬ್ ಲೋಕ ಕಾಂಗ್ರೆಸ್’ ರಚಿಸಿದ್ದರು. ಇತ್ತೀಚಿನ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರು.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯೇ ಮುಂದಿನ ಉಪರಾಷ್ಟ್ರಪತಿಯಾಗುವುದು ಖಚಿತ. ಏಕೆಂದರೆ, ಉಪರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸುವವರು ಸಂಸತ್ ಸದಸ್ಯರಾಗಿರುತ್ತಾರೆ. ಲೋಕಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿದೆ. ರಾಜ್ಯಸಭೆಯಲ್ಲಿ ಬಿಜೆಪಿಯೇ ಏಕೈಕ ದೊಡ್ಡ ಪಕ್ಷವಾಗಿದ್ದು, 90ಕ್ಕಿಂತ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಹೀಗಾಗಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ.

2017ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳು ಗೋಪಾಲಕೃಷ್ಣ ಗಾಂಧಿ ಅವರನ್ನು ಕಣಕ್ಕಿಳಿಸಿದ್ದವು. ಆದರೆ ಅವರು ಎನ್‌ಡಿಎ ಅಭ್ಯರ್ಥಿ ನಾಯ್ಡು ವಿರುದ್ಧ ಸೋತಿದ್ದರು. ನಾಯ್ಡು ಅವರು 516 ಮತಗಳನ್ನು ಪಡೆದರೆ, ಗಾಂಧಿ ಕೇವಲ 244 ಮತಗಳನ್ನು ಗಳಿಸಿದ್ದರು.

ಆಗಸ್ಟ್‌ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT