ಸೋಮವಾರ, ಅಕ್ಟೋಬರ್ 18, 2021
26 °C

ದೆಹಲಿಯಲ್ಲಿ ಅಮರಿಂದರ್ ಸಿಂಗ್: ಬಿಜೆಪಿ ನಾಯಕರ ಭೇಟಿ ಕುರಿತು ವದಂತಿ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ಕೆಲ ದಿನಗಳ ನಂತರ, ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ದೆಹಲಿಗೆ ತೆರಳಲಿದ್ದಾರೆ. ಸೆಪ್ಟೆಂಬರ್ 18 ರಂದು ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.

ಸಿಂಗ್ ಅವರು ದೆಹಲಿಯಲ್ಲಿ ಕೆಲವು ಬಿಜೆಪಿ ನಾಯಕರನ್ನು ಭೇಟಿಯಾಗಬಹುದು ಎಂದು ಕೆಲವು ಮಾಧ್ಯಮ ವರದಿ ಮಾಡಿದ ನಂತರ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್, ಸಿಂಗ್ ಭೇಟಿ ಕುರಿತಂತೆ ವಿವರಣೆ ನೀಡಿದ್ದಾರೆ.

'ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ದೆಹಲಿ ಭೇಟಿ ಕುರಿತಂತೆ ಹಲವು ಊಹಾಪೋಹಗಳು ಎದ್ದಿವೆ. ವೈಯಕ್ತಿಕ ಕಾರಣಕ್ಕಾಗಿ ಅವರು ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಅವರು ಕೆಲವು ಸ್ನೇಹಿತರನ್ನು ಭೇಟಿ ಮಾಡಲಿದ್ದಾರೆ ಮತ್ತು ನೂತನ ಮುಖ್ಯಮಂತ್ರಿಗಾಗಿ ಕಪುರ್‌ತಲಾದ ಮನೆಯನ್ನು ಖಾಲಿ ಮಾಡುತ್ತಾರೆ. ಈ ವಿಚಾರವಾಗಿ ಯಾವುದೇ ಅನಗತ್ಯ ಊಹಾಪೋಹಗಳ ಅಗತ್ಯವಿಲ್ಲ' ಎಂದು ತುಕ್ರಾಲ್ ಟ್ವೀಟ್ ಮಾಡಿದ್ದಾರೆ.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಜಗಳದ ನಡುವೆ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ ನಂತರ ಪಂಜಾಬ್ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮರಿಂದರ್ ಸಿಂಗ್, 'ನನಗೆ ಅವಮಾನವಾಗಿದೆ. ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿ ಮಾತನಾಡುವುದಾದರೆ, ನನ್ನ ಮುಂದೆ ಸದಾ ಆಯ್ಕೆಗಳಿರುತ್ತದೆ. ಅವಕಾಶ ಬಂದಾಗ ಅದನ್ನು ಉಪಯೋಗಿಸುತ್ತೇನೆ' ಎಂದಿದ್ದರು. ಅಲ್ಲದೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು 'ಅನನುಭವಿ'ಗಳು ಎಂದು ಕರೆದರು. ಸಿಧು ಅವರನ್ನು 'ರಾಷ್ಟ್ರ ವಿರೋಧಿ' ಮತ್ತು 'ಅಪಾಯಕಾರಿ' ಎಂದು ಕರೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು