ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಕಾಂಗ್ರೆಸ್‌ಗೆ ಸಿಧು ಹೆಸರು: ಸೋನಿಯಾಗೆ ಪತ್ರ ಬರೆದು ಅಮರಿಂದರ್‌ ಅತೃಪ್ತಿ

Last Updated 16 ಜುಲೈ 2021, 17:16 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ನವಜೋತ್‌ ಸಿಂಗ್‌ ಸಿಧು ಅವರನ್ನು ನೇಮಿಸುವ ಸಾಧ್ಯತೆಗಳ ಕುರಿತು ಅತೃಪ್ತಿ ವ್ಯಕ್ತಪಡಿಸಿ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

‘ಹಳಬರನ್ನು ಕಡೆಗಣಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ,’ ಎಂದು ಪಂಜಾಬ್ ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಅವರು ಶನಿವಾರ ಚಂಡೀಗಢದಲ್ಲಿ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್ ಸಂಸದ ಮತ್ತು ಪಕ್ಷದ ಹಿರಿಯ ಮುಖಂಡ ಮನೀಶ್ ತಿವಾರಿ ಅವರು ರಾಜ್ಯದ ಜನಸಂಖ್ಯಾ ಸಂಯೋಜನೆ ಕುರಿತು ಚರ್ಚೆ ಮಾಡುತ್ತಾ, ಅಧ್ಯಕ್ಷ ಹುದ್ದೆಗೆ ಹಿಂದೂ ಧರ್ಮಿಯರನ್ನು ನೇಮಿಸುವ ಅಗತ್ಯವನ್ನು ಗುರುವಾರವಷ್ಟೇ ಪ್ರತಿಪಾದಿಸಿದ್ದರು‌.

ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಗುರುವಾರ ವರದಿಗಳಾಗಿದ್ದವು. ಇವರ ಜೊತೆಗೆ ಒಬ್ಬ ದಲಿತ , ಇತರ ಜಾತಿಯ ಮತ್ತೊಬ್ಬರನ್ನು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಕಾರ್ಯಾಧ್ಯಕ್ಷ ಹುದ್ದೆಗೆ ಸಚಿವ ವಿಜಯ್ ಇಂದರ್ ಸಿಂಗ್ಲಾ ಮತ್ತು ಸಂಸದ ಸಂತೋಖ್ ಚೌಧರಿ ಅವರ ಹೆಸರುಗಳು ಕೇಳಿಬಂದಿವೆ.

ಆದರೆ ಸಿಧು ಅವರಿಗೆ ಪ್ರಮುಖ ಹುದ್ದೆ ನೀಡುವ ವಿಚಾರವಾಗಿ ಅಮರಿಂದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT