ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ: 40 ಜನರ ಸುಳಿವಿಲ್ಲ, 16 ಮೃತದೇಹ ಪತ್ತೆ

16 ಮೃತದೇಹ ಪತ್ತೆ; 15 ಸಾವಿರ ಯಾತ್ರಾರ್ಥಿಗಳ ಸ್ಥಳಾಂತರ
Last Updated 9 ಜುಲೈ 2022, 19:30 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಅಮರನಾಥದಲ್ಲಿ ಶುಕ್ರವಾರ ಸಂಭವಿಸಿದ ದಿಢೀರ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಪ್ರವಾಹ ಹಾಗೂ ಭೂಕುಸಿತ ದಲ್ಲಿ ಗಾಯಗೊಂಡ 25 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಶುಕ್ರವಾರ ರಾತ್ರಿ ಯಿಂದಲೂ ಕಾರ್ಯಾಚರಣೆ ನಡೆ ಸುತ್ತಿವೆ. 15 ಸಾವಿರಕ್ಕೂ ಹೆಚ್ಚು ಅಮರನಾಥ ಯಾತ್ರಾರ್ಥಿಗಳನ್ನು ಬೇಸ್‌ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈವರೆಗೆ 16 ಮೃತದೇಹಗಳನ್ನು ಪತ್ತೆ ಮಾಡ ಲಾಗಿದೆ.ನಾಪತ್ತೆಯಾದ ಇನ್ನೂ 40 ಜನರಿಗಾಗಿ ಹುಡುಕಾಟ ನಡೆಯುತ್ತಿದೆ.

ಪಂಚತರಣಿ ಬೇಸ್‌ಕ್ಯಾಂಪ್‌ಗೆ ಬಹುತೇಕ ಯಾತ್ರಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಜಮ್ಮುವಿನ ಬಾಲಟಾಲ್ ಹಾಗೂ ಪಹಲ್ಗಾಮ್ ಬೇಸ್‌ಕ್ಯಾಂಪ್‌ಗಳಿಂದ ಅಮರನಾಥಕ್ಕೆ ಹೊರಟಿದ್ದ ಯಾತ್ರಾರ್ಥಿಗಳ ಹೊಸ ತಂಡಕ್ಕೆ ಶನಿವಾರ ತಡೆ ಒಡ್ಡಲಾಗಿದೆ.

‘ಮತ್ತೆ ಭೂಕುಸಿತ ಆಗಿರುವ ಬಗ್ಗೆ ವರದಿಯಾಗಿಲ್ಲ. ನಿರಂತರ ಮಳೆಯಾಗುತ್ತಿದ್ದರೂ, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿಲ್ಲ’ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ಅವರು ಹೇಳಿದ್ದಾರೆ. ಎನ್‌ಡಿಆರ್‌ಎಫ್‌ನ 4 ತಂಡಗಳ 100ಕ್ಕೂ ಹೆಚ್ಚು ಸದಸ್ಯರುರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಸೇನೆ, ಎಸ್‌ಡಿಆರ್‌ಎಫ್, ಸಿಆರ್‌ಪಿಎಫ್ ಸದಸ್ಯರೂ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಶನಿವಾರ ನಸುಕಿನ ಸುಮಾರು 4 ಗಂಟೆವರೆಗೂ ಯಾತ್ರಾರ್ಥಿಗಳ ಸ್ಥಳಾಂತರ ಕೆಲಸ ನಡೆಯಿತು. ಪ್ರವಾಹಕ್ಕೆ ಸಾಕ್ಷಿಯಾದ ಸ್ಥಳದಲ್ಲಿ ಈಗ ಯಾವ ಯಾತ್ರಾರ್ಥಿಯೂ ಇಲ್ಲ’ ಎಂದು ಐಟಿಬಿಪಿ ವಕ್ತಾರರು ತಿಳಿಸಿದ್ದಾರೆ.

ಹಗುರ ಹೆಲಿಕಾಪ್ಟರ್ ಬಳಕೆ

ಭಾರತೀಯ ವಾಯುಪಡೆಯ ಎಂಐ–17 ಹಾಗೂ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌ಗಳನ್ನುರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಅತ್ಯಾಧುನಿಕ ಉಪಕರಣಗಳೊಂದಿಗೆ ಪರ್ವತ ರಕ್ಷಣಾ ತಂಡಗಳು ಹಾಗೂ ನಿಗಾ ತಂಡಗಳು ಕಾರ್ಯಾಚರಣೆ ಕೈಗೊಂಡಿವೆ. ಅವಶೇಷಗಳಡಿ ಬದುಕುಳಿದವರನ್ನು ಪತ್ತೆ ಹಚ್ಚಲು ಶ್ವಾನದಳದ ನೆರವು ಪಡೆಯಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮೇಘಸ್ಫೋಟ ಅಲ್ಲ, ದಿಢೀರ್ ಪ್ರವಾಹ: ಐಎಂಡಿ

ಅಮರನಾಥ ಗುಹೆ ಸಮೀಪ ಉಂಟಾದ ದಿಢೀರ್ ಪ್ರವಾಹಕ್ಕೆ ಸ್ಥಳೀಯವಾಗಿ ಸುರಿದ ಭಾರಿ ಮಳೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಸ್ಪಷ್ಟಪಡಿಸಿದೆ.

ಶುಕ್ರವಾರ ಸಂಜೆ 4.30ರಿಂದ 6.30ರ ಸಮಯದಲ್ಲಿ 31 ಮಿಲಿಮೀಟರ್ ಮಳೆ ಸುರಿದಿದ್ದು, ಇದನ್ನು ‘ಮೇಘಸ್ಫೋಟ’ ಎಂಬುದಾಗಿ ವರ್ಗೀಕರಿಸಲಾಗದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಐಎಂಡಿ ಪ್ರಕಾರ, ಒಂದು ಗಂಟೆಯ ಅವಧಿಯಲ್ಲಿ 100 ಮಿಲಿಮೀಟರ್ ಮಳೆ ಸುರಿದರೆ, ಆ ವಿದ್ಯಮಾನವನ್ನು ಮೇಘಸ್ಫೋಟ ಎಂದು ಕರೆಯಬಹುದು.

‘ಅಮರನಾಥ ಗುಹೆ ಸಮೀಪದ ಎತ್ತರದ ಬೆಟ್ಟಗಳಲ್ಲಿ ಸುರಿದ ಭಾರಿ ಮಳೆಯು ದಿಢೀರ್ ಪ್ರವಾಹಕ್ಕೆ ಕಾರಣ ಆಗಿರಬಹುದು’ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.ಯಾತ್ರಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಮರನಾಥ ಗುಹೆಯ ಸಮೀಪ ಹವಾಮಾನ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ಗುಹೆ ಸುತ್ತಲಿನ ಬೆಟ್ಟ ಪ್ರದೇಶಗಳ ಮೇಲೆ ನಿಗಾ ಇಡಲು ಅಲ್ಲಿ ಹವಾಮಾನ ಕೇಂದ್ರಗಳು ಇಲ್ಲ. ಈ ಬೆಟ್ಟಪ್ರದೇಶಗಳು ದುರ್ಗಮವಾಗಿದ್ದು ಹವಾಮಾನ ಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ದೋಡಾದಲ್ಲೂ ದಿಢೀರ್ ಪ್ರವಾಹ

ಜಮ್ಮುವಿನ ದೋಡಾದಲ್ಲಿ ಶನಿವಾರ ನಸುಕಿನ 4 ಗಂಟೆ ಸಮಯದಲ್ಲಿ ದಿಢೀರ್ ಪ್ರವಾಹ ಉಂಟಾಯಿತು. ಥಾತ್ರಿ ವಲಯದ ಘಂಟಿ ಅರಣ್ಯ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಉಂಟಾಯಿತು. ಯಾವುದೇ ಪ್ರಾಣಹಾನಿಯಾಗಿಲ್ಲ. ಕೆಲವು ವಾಹನಗಳು ಕೆಸರಿನಲ್ಲಿ ಹೂತುಹೋದವು. ಹೆದ್ದಾರಿ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು.

****

ಅಮರನಾಥ ದುರಂತದ ವಾಸ್ತವ ಅಂಶಗಳನ್ನು ಸರ್ಕಾರ ಜನರ ಮುಂದಿಡಬೇಕು. ಘಟನೆ ಗಮನಿಸಿದರೆ ಸಾಕಷ್ಟು ಜೀವಹಾನಿಯಾಗಿರುವ ಸಾಧ್ಯತೆಯಿದೆ

– ಯಶವಂತ್ ಸಿನ್ಹಾ, ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧಪಕ್ಷಗಳ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT