ಭಾನುವಾರ, ಸೆಪ್ಟೆಂಬರ್ 25, 2022
29 °C

ಹಣದ ಮೂಲ ಬಹಿರಂಗಪಡಿಸಲು ಮದರಸಾಗಳಿಗೆ ಅಸ್ಸಾಂ ಪೊಲೀಸರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ: ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಶೀಘ್ರದಲ್ಲೇ ತೆರೆಯಲಿರುವ ಆನ್‌ಲೈನ್ ಪೋರ್ಟಲ್‌ನಲ್ಲಿ ಹಣದ ಮೂಲ ಸೇರಿದಂತೆ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡುವಂತೆ ಅಸ್ಸಾಂ ಪೊಲೀಸರು ಭಾನುವಾರ ಎಲ್ಲಾ ಖಾಸಗಿ ಮದರಸಾಗಳಿಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಜಿಹಾದಿ ಚಟುವಟಿಕೆಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಈ ನಿರ್ದೇಶನ ನೀಡಲಾಗಿದೆ. ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಸ್ಥಳೀಯ ಆಡಳಿತವು ಆಗಸ್ಟ್‌ನಲ್ಲಿ ಮೂರು ಮದರಸಾಗಳನ್ನು ನೆಲಸಮಗೊಳಿಸಿತ್ತು.

ಮುಸ್ಲಿಂ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿಜಿಪಿ ಭಾಸ್ಕರ್‌ ಜ್ಯೋತಿ ಮಹಂತ, ‘ಮಾಹಿತಿ ಪ್ರಕಾರ ರಾಜ್ಯದಲ್ಲಿ 1 ಸಾವಿರ ಖಾಸಗಿ ಮದರಸಾಗಳು ಇವೆ. ಅವುಗಳಲ್ಲಿ ಕೆಲವು ಮದರಸಾಗಳ ಚಟುವಟಿಕೆಗಳನ್ನು ನೋಡಿಕೊಳ್ಳುವ ಸಂಸ್ಥೆಗಳೊಂದಿಗೆ ನೋಂದಾಯಿಸಿಲ್ಲ. ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳನ್ನು ಹೊಂದಿರುವ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಅಂತಹ ಮದರಸಾಗಳು ತಮ್ಮ ವಿವರ, ಜಮೀನು, ಶಿಕ್ಷಕರು ಮತ್ತು ಹಣದ ಮೂಲಗಳ ವಿವರಗಳನ್ನು ಬಹಿರಂಗಪಡಿಸುವುದನ್ನು ಸಮಿತಿ ಖಚಿತಪಡಿಸುತ್ತದೆ. ಈ ಕಾರ್ಯ ಆರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದು ಅವರು ಹೇಳಿದರು. 

ಬಿಜೆಪಿ ನೇತೃತ್ವದ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಸುಮಾರು 800 ಸರ್ಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಿತ್ತು. ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ ಆರೋಪಕ್ಕೆ ಸಂಬಂಧಿಸಿ ಕಳೆದ ಮಾರ್ಚ್‌ನಿಂದ ಮದರಾಸ ಶಿಕ್ಷಕರು ಸೇರಿದಂತೆ 37 ಮಂದಿಯನ್ನು  ರಾಜ್ಯ ಪೊಲೀಸರು ಬಂಧಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು