ಬುಧವಾರ, ಮೇ 12, 2021
18 °C
ಮಧ್ಯಪ್ರದೇಶದ ಇಂದೋರ್‌ ಮೂಲಕ ಸಾಗುತ್ತಿರುವ ಕಾರ್ಮಿಕರು

ಲಾಕ್‌ಡೌನ್‌ ಭೀತಿ: ಮುಂಬೈ ತೊರೆಯುತ್ತಿರುವ ವಲಸಿಗರು

ಪಿಟಿಐ Updated:

ಅಕ್ಷರ ಗಾತ್ರ : | |

ಇಂದೋರ್‌: ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳು ವಿಪರೀತವಾಗುತ್ತಿರುವ ಮತ್ತು ಅದರ ನಿಯಂತ್ರಣಕ್ಕೆ ಲಾಕ್‌ಡೌನ್‌ ಮಾತುಗಳು ಕೇಳಿಬರುತ್ತಿರುವ ಕಾರಣ ವಲಸೆ ಕಾರ್ಮಿಕರು ಮಹಾನಗರಿಯನ್ನು ತೊರೆಯತೊಡಗಿದ್ದು, ಮಧ್ಯಪ್ರದೇಶದ ಈ ನಗರದಲ್ಲೂ ಅದು ಗೋಚರಿಸಿದೆ.

ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಸಂಪರ್ಕಿಸುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಕೆಲದಿನಗಳಿಂದ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ.

ಮುಂಬೈ–ಆಗ್ರಾ ರಸ್ತೆ ಎಂದೇ ಈ ಹೆದ್ದಾರಿ ಪ್ರಸಿದ್ಧವಾಗಿದ್ದು, ಮೋಟರ್‌ ಸೈಕಲ್‌ಗಳಲ್ಲಿ, ಕಪ್ಪು–ಹಳದಿ ಬಣ್ಣದ ಮಿನಿಟ್ರಕ್‌ಗಳಲ್ಲಿ ಮತ್ತು ಆಟೊಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಊರಿಗೆ ಮರಳುತ್ತಿರುವ ಚಿತ್ರಣ ಕಾಣುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಭಾನುವಾರ ತಿಳಿಸಿದರು.

‘ಮುಂಬೈಯಲ್ಲಿ ಸೋಂಕು ಪ್ರಕರಣಗಳ ಏರಿಕೆ ಪ್ರಮಾಣ ಕಳವಳಕಾರಿಯಾಗಿದೆ. ಲಾಕ್‌ಡೌನ್‌ ಹೇರುವ ಸಾಧ್ಯತೆಯಿದೆ. ಹಾಗಾದಲ್ಲಿ ನಾವು ಕಳೆದ ವರ್ಷದಂತೆ ಕೆಲಸವಿಲ್ಲದೇ ಇರಬೇಕಾಗುತ್ತದೆ. ಹೀಗಾಗಿ ನಾವೆಲ್ಲಾ ಊರಿಗೆ ಹೋಗುತ್ತಿದ್ದೇವೆ’ ಎಂದು ಆಟೊದಲ್ಲಿದ್ದ ಉತ್ತರ ಪ್ರದೇಶದ ಬಲಿಯಾ ಪಟ್ಟಣದ ರಾಮಶರಣ್‌ ಸಿಂಗ್ ಹೇಳಿದರು.

ಬಿಹಾರದ ಭೋಜಪುರ ಜಿಲ್ಲೆಯ ಮೊಹಮ್ಮದ್‌ ಶದಾಬ್‌ ಅವರೂ ಇದೇ ಧಾಟಿಯಲ್ಲಿ ಮಾತನಾಡಿದರು. ‘ನಾನು ಮುಂಬೈನ ರೆಸ್ಟೊರಂಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಸೋಂಕು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಲ್ಲಿ ಮಾತ್ರ ಅಲ್ಲಿಗೆ ಮರಳುತ್ತೇನೆ. ಇಲ್ಲವಾದರೆ ಊರಲ್ಲೇ ಕೆಲಸ ಹುಡುಕುತ್ತೇನೆ’ ಎಂದರು.

ವಾರಾಂತ್ಯ ಲಾಕ್‌ಡೌನ್‌ ಇರುವ ಕಾರಣ ಮತ್ತು ಅಂತರ ರಾಜ್ಯ ಪ್ರಯಾಣಕ್ಕೆ ವಿನಾಯಿತಿ ನೀಡಿರುವ ಕಾರಣ ಇವರೆಲ್ಲರ ಪ್ರಯಾಣ ಅಡೆತಡೆಗಳಿಲ್ಲದೇ ಸಾಗುತ್ತಿದೆ.

ಕಳೆದ ವರ್ಷ ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳುವ ಧಾವಂತದಲ್ಲಿ ವಾಹನಗಳ ಓಡಾಟ ವಿಪರೀತವಾಗಿ ಈ ರಸ್ತೆಯಲ್ಲಿ ದೊಡ್ಡ ಮಟ್ಟಿಗೆ ಸಂಚಾರ ಸಮಸ್ಯೆ ತಲೆದೋರಿತ್ತು. ಪ್ರತಿಕೂಲ ಹವೆಯ ಜೊತೆ, ಕೋವಿಡ್‌ ನಿರ್ಬಂಧಗಳಿಂದ ಬಿಹಾರ, ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳ ಬಹುತೇಕ ಕಾರ್ಮಿಕರು ಹೈರಾಣಾಗಿದ್ದರು.

ಮುಂಬೈನಲ್ಲಿ ಶನಿವಾರ 9,330 ಹೊಸ ಪ್ರಕರಣಗಳು ವರದಿಯಾಗಿದ್ದವು. 28 ಮಂದಿ ಮೃತಪಟ್ಟಿದ್ದರು. ಸೋಂಕುಪೀಡಿತರ ಸಂಖ್ಯೆ 5,10,512ಕ್ಕೆ ಏರಿದ್ದು, ಮೃತಪಟ್ಟವರ ಸಂಖ್ಯೆ 12 ಸಾವಿರ ಸಮೀಪಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು