ಸೋಮವಾರ, ಸೆಪ್ಟೆಂಬರ್ 20, 2021
29 °C

ಅಯೋಧ್ಯೆಯನ್ನು ಫೈಜಾಬಾದ್‌ ಎಂದು ಬರೆದ ಪೋಸ್ಟರ್ ತೆಗೆಯುವಂತೆ ಎಐಎಂಐಎಂಗೆ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ಅಯೋಧ್ಯೆಯನ್ನು ಫೈಜಾಬಾದ್‌ ಎಂದು ಬರೆಯಲಾಗಿರುವ ಪೋಸ್ಟರ್‌ಗಳನ್ನು ತೆಗೆದುಹಾಕುವಂತೆ ಉತ್ತರ ಪ್ರದೇಶ ಪೊಲೀಸರು ಎಐಎಂಐಎಂ ಪಕ್ಷಕ್ಕೆ ಸೂಚಿಸಿದ್ದಾರೆ.

ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಮೂರುದಿನಗಳ ಭೇಟಿ ಸಲುವಾಗಿ ಉತ್ತರ ಪ್ರದೇಶಕ್ಕೆ ಇಂದು (ಮಂಗಳವಾರ) ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ‌ ಹಾಕಲಾಗಿರುವ ಪೋಸ್ಟರ್‌ಗಳಲ್ಲಿ ಅಯೋಧ್ಯೆಯ ಹಿಂದಿನ ಹೆಸರನ್ನು (ಫೈಜಾಬಾದ್‌) ಬಳಸಲಾಗಿದೆ. ಇದು ʼಹಿಂದುತ್ವ ವಿರೋಧಿʼ ನಡೆ ಎಂದು ಟೀಕೆಗಳು ವ್ಯಕ್ತವಾಗಿದೆ.

18ನೇ ಶತಮಾನದ ಸೂಫಿ ಸಂತ ಶೇಕ್‌ ಅಲಂ ಮಖ್‌ದೂಮ್‌ ಝಾದ ಅವರ ಸಮಾಧಿಯು ಅಯೋಧ್ಯೆ ಜಿಲ್ಲೆಯ ರುದೌಲಿಯಲ್ಲಿದೆ. ಒವೈಸಿ ಇಲ್ಲಿಗೆ ಭೇಟಿ ನೀಡಲಿದ್ದು, ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಪೋಸ್ಟರ್‌ಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವವರು, ಪೋಸ್ಟರ್‌ಗಳಲ್ಲಿ ಫೈಜಾಬಾದ್‌ ಬದಲು ಅಯೋಧ್ಯೆ ಎಂದು‌ ಉಲ್ಲೇಖಿಸದಿದ್ದರೆ ಒವೈಸಿ ಸಾರ್ವಜನಿಕ ಸಭೆ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ʼಅಯೋಧ್ಯೆಯನ್ನು ಫೈಜಾಬಾದ್‌ ಎನ್ನುವಂತಿಲ್ಲ. ಜಿಲ್ಲೆಯ ಹೊಸ ಹೆಸರು ಅಯೋಧ್ಯೆ ಎಂದು ಸರ್ಕಾರದ ದಾಖಲೆಗಳಲ್ಲಿ ಉಲ್ಲೇಖವಾಗಿದೆʼ ಎಂದು‌ ಹನುಮಾನ್‌ ಗರ್ಹಿ ದೇವಾಲಯದ ಮಹಂತ್‌ ರಾಜು ದಾಸ್ ಹೇಳಿದ್ದಾರೆ.

ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಐಎಂಐಎಂ ಜಿಲ್ಲಾ ಘಟಕದ ಅಧ್ಯಕ್ಷ ಶಹನವಾಜ್‌ ಸಿದ್ದಿಕಿ, ಅಯೋಧ್ಯೆಯನ್ನು ಈ ಹಿಂದೆ ಫೈಜಾಬಾದ್‌ ಎಂದು ಕರೆಯಲಾಗುತ್ತಿತ್ತು. ಜನರು ಬದಲಾವಣೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದಿದ್ದಾರೆ.

ಮುಂದುವರಿದು, ಪೋಸ್ಟರ್‌ನಲ್ಲಿ ಎರಡೂ ಹೆಸರುಗಳನ್ನು ಹಾಕಲಾಗಿದೆ. ನಾವು ಯಾವ ಹೆಸರು ಬರೆದರೂ ಪರವಾಗಿಲ್ಲ. ಇದು ಸಮಸ್ಯೆಯ ವಿಚಾರವೇ ಅಲ್ಲ ಎಂದೂ ಸಮರ್ಥಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರವು ಫೈಜಾಬಾದ್‌ ಅನ್ನು ಅಯೋಧ್ಯೆ ಎಂದು 2018ರ ನವೆಂಬರ್‌ನಲ್ಲಿ ಬದಲಿಸಿತ್ತು.

ಒವೈಸಿ ಸೆಪ್ಟೆಂಬರ್‌ 8 ಮತ್ತು 9ರಂದು ಸುಲ್ತಾನ್‌ಪುರ ಹಾಗೂ ಬಾರಾಬಂಕಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಒವೈಸಿ ಭೇಟಿ ಮಹತ್ವ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು