ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖೀರ್ ಭವಾನಿ ಮೇಳ’ ಯಾತ್ರೆಗೆ ಹೊರಟ ಕಾಶ್ಮೀರಿ ಪಂಡಿತರು

ಬಿಗಿ ಬಂದೋಬಸ್ತ್ ನಡುವೆ 250 ಯಾತ್ರಾರ್ಥಿಗಳ ಪ್ರಯಾಣ ಆರಂಭ
Last Updated 7 ಜೂನ್ 2022, 20:19 IST
ಅಕ್ಷರ ಗಾತ್ರ

ಜಮ್ಮು: ‘ಬಿಗಿ ಭದ್ರತೆಯ ನಡುವೆ ಸುಮಾರು 250 ವಲಸಿಗ ಕಾಶ್ಮೀರಿ ಪಂಡಿತರು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಬುಧವಾರ ನಡೆಯಲಿರುವ ‘ಮಾತಾ ಖೀರ್ ಭವಾನಿ ಮೇಳ’ಕ್ಕೆ ಮಂಗಳವಾರ ಜಮ್ಮುವಿನಿಂದ ಸರ್ಕಾರಿ ಬಸ್‌ಗಳ ಪ್ರಯಾಣ ಬೆಳೆಸಿದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ಅವರು, ಜಮ್ಮು ಹೊರವಲಯದ ನಗ್ರೋತಾದಿಂದ ಯಾತ್ರೆಗೆ ಚಾಲನೆ ನೀಡಿದರು.

‘ಸುರಕ್ಷಿತ ತೀರ್ಥಯಾತ್ರೆಗಾಗಿ ಸರ್ಕಾರ ಎಲ್ಲ ಅಗತ್ಯ ವ್ಯವಸ್ಥೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದೆ. ಬುಧವಾರ ಖೀರ್ ಭವಾನಿ ದೇವಾಲಯದಲ್ಲಿ ದೇವಿಯ ದರ್ಶನ ಮಾಡಿ, ಒಂದು ದಿನದ ಬಳಿಕ ಜಮ್ಮುವಿಗೆ ಹಿಂತಿರುಗಲಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದರು.

‘ಯಾತ್ರೆ ಕೈಗೊಳ್ಳಲು ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಿಲ್ಲ. ದೇಗುಲದ ಮಾರ್ಗದಲ್ಲಿ ಮತ್ತು ದೇಗುಲದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಂಡಿರುವುದರಿಂದ ಯಾವುದೇ ಲೋಪವಾಗುವ ಸಾಧ್ಯತೆ ಇಲ್ಲ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಕೋವಿಡ್‌ ನಿಂದಾಗಿ ಎರಡು ವರ್ಷ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಉದ್ದೇಶಿತ ಹತ್ಯೆಗಳು ಕಾಶ್ಮೀರಿ ಪಂಡಿತರ ಸಮುದಾಯದಲ್ಲಿ ಭಯವನ್ನುಂಟು ಮಾಡಿವೆ. ಆದರೆ, ಖೀರ್ ಭವಾನಿ ಮಾತೆಯ ಕರೆಗೆ ಓಗೊಟ್ಟು ನಾವು ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೆ ಹೋಗುತ್ತಿದ್ದೇವೆ’ ಎಂದು ಜಗ್ತಿ ಟೌನ್‌ಶಿಪ್‌ನ ನಿವಾಸಿ, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿ ಮಾಣಿಕ್ ತಿಳಿಸಿದರು.

ಸರ್ಕಾರ ಒದಗಿಸಿರುವ ಬಿಗಿಭದ್ರತೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಅವರು, ಮೇ 31ರಂದು ಯಾತ್ರೆಗೆ ನೋಂದಣಿ ಮಾಡಿಸಿದ್ದಾಗಿ ತಿಳಿಸಿದರು. ಜಮ್ಮು–ಕಾಶ್ಮೀರದ ಶಾಂತಿ ಮತ್ತು ಸಮೃದ್ಧಿಗಾಗಿ ಖೀರ್ ಭವಾನಿ ಮಾತೆಯಲ್ಲಿ ಪ್ರಾರ್ಥಿಸುವುದಾಗಿಯೂ ಅವರು ಹೇಳಿದರು.

ಯಾತ್ರೆಗೆ ಹೊರಟಿದ್ದ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಕಳುಹಿಸಲು ಬಂದಿದ್ದ ವಿಕ್ಕಿ ಭಟ್ ಅವರು ‘ನಾನೂ ಕೂಡಾ ಯಾತ್ರೆಗೆ ನೋಂದಾಯಿಸಿದ್ದೆ. ಆದರೆ, ಹೆತ್ತವರ ಸಲಹೆಯ ಮೇರೆಗೆ ಯಾತ್ರೆಯ ಪ್ರವಾಸ ಕೈಬಿಟ್ಟೆ. ಮುಂದಿನ ವರ್ಷ ಯಾತ್ರೆ ಕೈಗೊಳ್ಳುವೆ’ ಎಂದು ತಿಳಿಸಿದರು.

ಪ್ರಸಿದ್ಧ ರಾಗ್ನ್ಯಾ ದೇವಿ (ಖೀರ್ ಭವಾನಿ) ದೇವಸ್ಥಾನದಲ್ಲಿ ಪ್ರತಿವರ್ಷ ‘ಮಾತಾ ಖೀರ್ ಭವಾನಿ ಮೇಳ’ವನ್ನು ಆಯೋಜಿಸಲಾಗುತ್ತದೆ. ಕೋವಿಡ್– 19 ಕಾರಣದಿಂದಾಗಿ ಎರಡು ವರ್ಷಗಳಿಂದ ಮೇಳವನ್ನು ಆಯೋಜಿಸಿರಲಿಲ್ಲ. ಈ ಬಾರಿ ಜೂನ್ 8ರಂದು ಮೇಳ ನಡೆಯಲಿದೆ.

ಕಣಿವೆ ರಾಜ್ಯದಲ್ಲಿ ಇತ್ತೀಚಿಗೆ ಉದ್ದೇಶಿತ ಹತ್ಯೆಗಳು ಹೆಚ್ಚಾಗಿವೆ. ಭದ್ರತೆಯ ಕಾರಣದಿಂದಾಗಿ 1990ರಿಂದ ಕಾಶ್ಮೀರದಿಂದ ಜಮ್ಮುವಿಗೆ ತೆರಳಿದ್ದ ಉದ್ಯೋಗಸ್ಥ ವಲಸಿಗ ಕಾಶ್ಮೀರಿ ಪಂಡಿತರಿಗೆ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ ಕಣಿವೆಯ ಸುರಕ್ಷಿತ ಸ್ಥಳಗಳಿಗೆ ವಾಪಸ್ ವರ್ಗಾಯಿಸುವ ಪ್ರಕ್ರಿಯೆಯಿಂದಾಗಿ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಕಾಶ್ಮೀರದಾದ್ಯಂತ ಐದು ದೇವಾಲಯಗಳಲ್ಲಿ ಖೀರ್ ಭವಾನಿ ಮೇಳಗಳನ್ನು ಆಯೋಜಿಸಲಾಗಿದೆ. ಗಂದರ್‌ಬಾಲ್‌ನ ತುಲ್ಮುಲ್ಲಾ, ಕುಲ್ಗಾಮ್‌ನ ಮಂಜ್‌ಗಾಮ್, ಕುಲ್ಗಾಮ್‌ನ ದೇವ್ಸರ್, ಅನಂತನಾಗ್‌ನ ಲೋಗ್ರಿಪೋರಾ ಮತ್ತು ಕುಪ್ವಾರದಲ್ಲಿರುವ ಟಿಕ್ಕರ್‌ನಲ್ಲಿರುವ ರಾಗ್ನ್ಯಾ ದೇವಿ ದೇವಾಲಯಗಳಿದ್ದು, ಇಲ್ಲಿ ಮೇಳಗಳನ್ನು ಆಯೋಜಿಸಲಾಗಿದೆ.

ಈ ಐದು ದೇವಾಲಯಗಳ ಪೈಕಿ, ಬೃಹತ್ ಚಿನಾರ್ ಮರಗಳ ನೆರಳಿನಲ್ಲಿರುವ ತುಲ್ಮುಲ್ಲಾ ದೇವಾಲಯಕ್ಕೆ ಕಾಶ್ಮೀರಿ ಪಂಡಿತರು ಮತ್ತು ದೇಶದ ವಿವಿಧ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದು ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT