ಶುಕ್ರವಾರ, ಜುಲೈ 1, 2022
24 °C

ಕೇರಳ ಭೂಕುಸಿತ | ರಕ್ಷಣಾ ಪಡೆಗಳಿಂದ ಎಲ್ಲ ರೀತಿಯ ನೆರವು: ಅಮಿತ್ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇರಳದಲ್ಲಿ ಸಂಭವಿಸಿರುವ ಭೂಕುಸಿತದಿಂದ ಹಲವರು ಮೃತಪಟ್ಟಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ರಾಜ್ಯವನ್ನು ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ. ‘ಇಡುಕ್ಕಿ ಜಿಲ್ಲೆಯ ರಾಜಮಲದಲ್ಲಿ ಭೂಕುಸಿತದಿಂದಾಗಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಎನ್‌ಡಿಆರ್‌ಎಫ್‌ ಜೊತೆಗೆ ಮಾತುಕತೆ ನಡೆಸಿದ್ದೇನೆ. ಅವರ ತಂಡವು ಸ್ಥಳಕ್ಕೆ ಧಾವಿಸಿದ್ದು, ಸಾಧ್ಯವಿರುವ ಎಲ್ಲಾ ನೆರವನ್ನೂ ನೀಡಲಿದೆ. ಗಾಯಗೊಂಡಿರುವವರು ಶೀಘ್ರವೇ ಚೇತರಿಸಿಕೊಳ್ಳಲಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ರಾಜಮಲದಲ್ಲಿ 15 ಜನರು ಮೃತಪಟ್ಟಿದ್ದಾರೆ ಹಾಗೂ 57 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಭಯಾನಕ ದುರಂತ: ರಾಹುಲ್
ಕೇರಳದಲ್ಲಿ ಉಂಟಾಗಿರುವ ಭೂಕುಸಿತವು ‘ಭಯಾನಕ ದುರಂತ’ ಎಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಂತ್ರಸ್ತರಿಗೆ ಸಾಧ್ಯವಾದಷ್ಟು ನೆರವು ನೀಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

‘ಕೇರಳದ ಮುನ್ನಾರ್‌ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಮೃತಪಟ್ಟಿವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ. ಸಂತ್ರಸ್ತರನ್ನು ರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ರಕ್ಷಣೆ ಹಾಗೂ ಪರಿಹಾರದ ಕಾರ್ಯಗಳಲ್ಲಿ ಸಹಕಾರ ನೀಡುವಂತೆ ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರಲ್ಲಿ ಕೋರುತ್ತೇನೆ’ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘ಕೇರಳದಲ್ಲಿನ ಪ್ರವಾಹ ಮತ್ತು ಭೂಕುಸಿತಗಳು, ನಮ್ಮ ಪರಿಸರವನ್ನು ರಕ್ಷಿಸಲು ನಾವು ಹೆಚ್ಚು ಶ್ರಮಿಸಬೇಕು ಮತ್ತು ಹವಾಮಾನ ವೈಪರೀತ್ಯಗಳನ್ನು ನಿಭಾಯಿಸಲು ಅನುವು ಮಾಡಿಕೊಡುವ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ರಚಿಸಬೇಕು ಎಂಬುದರ ಎಚ್ಚರಿಕೆಗಳಾಗಿವೆ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಇದು ಭಯಾನಕ ದುರಂತವಾಗಿದೆ. ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಮತ್ತು ನಾಯಕರು ಈ ಸಮಯದಲ್ಲಿ ನೆರವಿನ ಹಸ್ತ ಚಾಚುವಂತೆ ಮತ್ತು ಸಂಕಷ್ಟದಲ್ಲಿ ಸಿಲುಕಿರುವ ನಮ್ಮ ಸಹೋದರ–ಸಹೋದರಿಯರ ನೋವನ್ನು ತಗ್ಗಿಸಲು ಸಾಧ್ಯವಿರುವ ಪ್ರಮಾಣದಲ್ಲಿ ನೆರವಾಗಬೇಕು’ ಎಂದು ಕರೆ ನೀಡಿದ್ದಾರೆ.

Heavy rains in Kerala have resulted in floods and a massive landslide in Munnar in which many have lost their lives....

Posted by Rahul Gandhi on Friday, 7 August 2020

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು