ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಶಾ, ನಡ್ಡಾ

ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ
Last Updated 18 ನವೆಂಬರ್ 2020, 21:28 IST
ಅಕ್ಷರ ಗಾತ್ರ

ಕೋಲ್ಕತ್ತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆವರೆಗೆ ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಬುಧವಾರ ತಿಳಿಸಿದ್ದಾರೆ.

‘ಪ್ರತ್ಯೇಕವಾಗಿ ಇಬ್ಬರೂ ಭೇಟಿ ನೀಡಲಿದ್ದು, ಚುನಾವಣೆಗೆ ರಾಜ್ಯ ಬಿಜೆಪಿ ಘಟಕದ ಸಿದ್ಧತೆಯನ್ನು ಪರಿಶೀಲನೆ ಮಾಡಲಿದ್ದಾರೆ. ಉಭಯ ನಾಯಕರ ಭೇಟಿಯೂ ರಾಜ್ಯ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಶಾ ಅವರು ತಿಂಗಳಲ್ಲಿ ಎರಡು ದಿನ, ನಡ್ಡಾ ಅವರು ತಿಂಗಳಲ್ಲಿ ಮೂರು ದಿನ ಪಶ್ಚಿಮ ಬಂಗಾಳದಲ್ಲಿ ಉಳಿದುಕೊಂಡು ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಿದ್ದಾರೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬಂಗಾಳಕ್ಕೆ ಹೆಚ್ಚಿನ ಸಮಯ ಮೀಸಲಿಡಲಿದ್ದಾರೆ ಎನ್ನಲಾಗಿದೆ.

‘ರಾಜ್ಯದ ಜನರು ಸಿಪಿಎಂ, ಕಾಂಗ್ರೆಸ್ ಹಾಗೂ ಟಿಎಂಸಿ ಪಕ್ಷಗಳಿಗೆ ಅವಕಾಶ ನೀಡಿದ್ದರು. ಆದರೆ ಜನರ ಆಶೋತ್ತರಗಳನ್ನು ಈಡೇರಿಸಲು ಮೂರೂ ಪಕ್ಷಗಳು ವಿಫಲವಾಗಿವೆ. ಜನರು ಇದೀಗ ಬಿಜೆಪಿಯ ಮೇಲೆ ಭರವಸೆ ಇರಿಸಿದ್ದು, ಅವರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ’ ಎಂದು ಘೋಷ್ ಹೇಳಿದ್ದಾರೆ.

ಪಕ್ಷವು ಮಂಗಳವಾರವಷ್ಟೇ ರಾಜ್ಯದ ಐದು ಸಂಘಟನಾ ವಲಯಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಕೇಂದ್ರ ನಾಯಕರಾದ ಸುನಿಲ್ ದೇವಧರ್‌, ವಿನೋದ್ ಸೋಂಕರ್, ಹರೀಶ್ ದ್ವಿವೇದಿ, ದುಶ್ಯಂತ್ ಕುಮಾರ್ ಗೌತಮ್, ವಿನೋದ್ ಟೌರೆ ಅವರು ಐದು ವಲಯಗಳಲ್ಲಿ ಚುನಾವಣಾ ಸಿದ್ಧತೆ ನೋಡಿಕೊಳ್ಳಲಿದ್ದಾರೆ.

ರಾಜ್ಯ ಚುನಾವಣೆಗೆ ಕೇಂದ್ರ ನಾಯಕರನ್ನು ಕರೆತಂದ ಬಿಜೆಪಿ ನಡೆಯನ್ನು ಆಡಳಿತಾರೂಢ ಟಿಎಂಸಿ ಟೀಕಿಸಿದೆ. ರಾಜ್ಯ ಬಿಜೆಪಿ ಮುಖಂಡರ ಬಗ್ಗೆ ವರಿಷ್ಠರಿಗೆ ನಂಬಿಕೆ ಇಲ್ಲ ಎಂದು ಲೇವಡಿ ಮಾಡಿದೆ.

‘ಬಿಜೆಪಿಯ ಈ ನಾಯಕರ ನಡೆಯ ಮೇಲೆ ಕಣ್ಣಿಡಲು ಮತ್ತು ಅವರು ಯಾವುದೇ ವಿಭಜಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಂತೆ ನೋಡಿಕೊಳ್ಳಲು ನಾವು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ’ ಎಂದು ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT