ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳ ಸಮಸ್ಯೆಗೆ ವಲಯ ಪರಿಷತ್ ಪರಿಹಾರ: ಅಮಿತ್‌ ಶಾ ಹೇಳಿಕೆ

Last Updated 14 ನವೆಂಬರ್ 2021, 19:59 IST
ಅಕ್ಷರ ಗಾತ್ರ

ತಿರುಪತಿ: ರಾಜ್ಯಗಳ ನಡುವಿನ ವಿವಾದಾತ್ಮಕ ವಿಷಯಗಳನ್ನು ಪರಿಹರಿಸಲು ವಲಯ ಪರಿಷತ್‌ಗಳಿಂದ ಸಾಧ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ತಾಜ್ ತಿರುಪತಿ ಹೋಟೆಲ್‌ನಲ್ಲಿ ನಡೆದ ದಕ್ಷಿಣ ವಲಯ ಪರಿಷತ್ತಿನ 29ನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂರು ವರ್ಷಗಳ ಬಿಡುವಿನ ಬಳಿಕ ಈ ಸಭೆ ನಡೆಯಿತು.

‘ರಾಜ್ಯಗಳ ನಡುವಿನ ವಿವಾದಾತ್ಮಕ ವಿಷಯಗಳ ಕುರಿತು ಪರಸ್ಪರ ಚರ್ಚೆ ನಡೆಸಲು ಸದಸ್ಯರಿಗೆ ಒಂದು ಉನ್ನತ ಮಟ್ಟದ ಅವಕಾಶವನ್ನು ವಲಯ ಮಂಡಳಿಗಳು ಕಲ್ಪಿಸಿಕೊಟ್ಟಿವೆ. ಕಳೆದ ಏಳು ವರ್ಷಗಳಲ್ಲಿ ಇಂತಹ 18 ಸಭೆಗಳನ್ನು ನಾವು ನಡೆಸಿದ್ದೇವೆ’ ಎಂದು ಶಾ ಹೇಳಿದರು.

ಎಲ್ಲ ರಾಜ್ಯಗಳನ್ನು ಸಂಪೂರ್ಣ ಲಸಿಕಾ ಕಾರ್ಯಕ್ರಮಕ್ಕೆ ಒಳಪಡಿಸುವ ದಿಸೆಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು, ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ತಮ್ಮ ತಮ್ಮ ರಾಜ್ಯಗಳ ಸಮಸ್ಯೆಗಳನ್ನು ಆಯಾ ಮುಖ್ಯಮಂತ್ರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಆಗ್ರಹಿಸಿದರು. ಆದರೆ ಇದಕ್ಕೆ ಶಾ ಖಚಿತ ಉತ್ತರ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪೋಷಣ್ ಕಾರ್ಯಕ್ರಮ ಹಾಗೂ ನೇರ ನಗದು ವರ್ಗಾವಣೆ ಯೋಜನೆ ಅನುಷ್ಠಾನ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ವೇಗ ನೀಡುವುದು ಸೇರಿದಂತೆ ವಿವಿಧ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು. 30ನೇ ಸಭೆಯು ಕೇರಳದಲ್ಲಿ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT