ದಿಬ್ರೂಗರ್, ಅಸ್ಸಾಂ (ಪಿಟಿಐ): ಸಿಖ್ ಮೂಲಭೂತವಾದಿ ಧರ್ಮಪ್ರಚಾರಕ ಅಮೃತಪಾಲ್ ಸಿಂಗ್‌ನ ಏಳು ಸಹಚರರನ್ನು, ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರಿಸಿದ್ದು, ಸಿಸಿಟಿವಿ ಕಣ್ಗಾವಲು ಇಡಲಾಗಿದೆ.
ಇಡೀ ಕಾರಾಗೃಹದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ‘ವಾರಿಸ್ ಪಂಜಾಬ್ ಡೇ‘ (ಡಬ್ಲ್ಯುಪಿಡಿ) ಸಂಘಟನೆಯ ಏಳು ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪ್ರತ್ಯೇಕ ಕೋಣೆಯಲ್ಲಿ ಹಾಸಿಗೆ, ಹೊದಿಕೆ, ಟಿ.ವಿ. ಒದಗಿಸಲಾಗಿದೆ.
ಕಣ್ಗಾವಲು ಬಿಗಿಗೊಳಿಸುವ ಕ್ರಮ ವಾಗಿ ಜೈಲಿನ ಒಳ ಭಾಗದಲ್ಲಿ ನಾಲ್ಕು ಸಿಸಿಟಿವಿ ಕ್ಯಾಮೆರಾ ಹಾಗೂ ಹೊರ ಭಾಗದಲ್ಲಿಯೂ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ ಹೊರಗೆ ಬ್ಲ್ಯಾಕ್ ಪ್ಯಾಂಥರ್ ಅಸ್ಸಾಂ ಪೊಲೀಸ್ ಪಡೆ ಕಮ್ಯಾಂಡೊ ಹಾಗೂ ಒಳಗೆ ಸಿಆರ್‌ಪಿಎಫ್ ಯೋಧರನ್ನು ನಿಯೋಜಿಸಲಾಗಿದೆ.
ಭದ್ರತಾ ಕ್ರಮಗಳನ್ನು ಐಜಿಪಿ ಪ್ರಶಾಂತ ಭುಯನ್, ಜಿಲ್ಲಾಧಿಕಾರಿ ಬಿಸ್ವೈಟ್ ಪೆಗು ಅವರು ಬುಧವಾರ ಪರಿಶೀಲಿಸಿದರು.
ಅಮೃತ್‌ಪಾಲ್ ಸಿಂಗ್ ಅವರ ಚಿಕ್ಕಪ್ಪ ಹರಜೀತ್ ಸಿಂಗ್ ಸೇರಿದಂತೆ ಏಳು ಮಂದಿ ಸಹಚರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿದ್ದು, ದಿಬ್ರೂಗರ್‌ಗೆ ಕರೆತರಲಾಗಿತ್ತು.
ಪ್ರಮುಖ ಸದಸ್ಯನ ಬಂಧನ (ಚಂಡೀಗಢ ವರದಿ): ಅಮೃತ್‌ಪಾಲ್ ಸಿಂಗ್‌ನ ಖಾಸಗಿ ಭದ್ರತೆಯ ಪ್ರಮುಖ ಸದಸ್ಯ ಎನ್ನಲಾದ ತೇಜಿಂದರ್ ಸಿಂಗ್ ಗಿಲ್ ಎಂಬಾತನನ್ನು ಪಂಜಾಬ್‌ನ ಪೊಲೀಸರು ಬಂಧಿಸಿದ್ದಾರೆ. ಲೂಧಿಯಾನ ಜಿಲ್ಲೆಯ ಖನ್ನಾ ವಲಯದ ಮಂಗೇವಾಲ್ ಗ್ರಾಮದ ಆತನ ನಿವಾಸದಲ್ಲಿ ಬಂಧಿಸಲಾಯಿತು.
ಮಾಜಿ ಸೈನಿಕರು, ಯುವಕರು ಗುರಿ
ಚಂಡೀಗಢ(ಪಿಟಿಐ): ಅಮೃತ್ ಪಾಲ್ ಸಿಂಗ್ ಭಯೋತ್ಪಾದಕ ಸಂಘಟನೆಯನ್ನು ಕಟ್ಟಲು ಮಾದಕ ದ್ರವ್ಯ ವ್ಯಸನಿಗಳು ಮತ್ತು ಮಾಜಿ ಸೈನಿಕರನ್ನೇ ಗುರಿಯಾಗಿಸಿದ್ದ ಎಂದು ಗುರುವಾರ ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತ್‌ಪಾಲ್ ಅವರ ಪಯಣ ಮತ್ತು ಯೋಜನೆಯ ಕಾರ್ಯಗತವು ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಅಪ್ಪಣೆಯ ಮೇರೆಗೆ ನಡೆಯುವ ಸಾಧ್ಯತೆ ಇತ್ತು. ದುಬೈನಿಂದ ವಾಪಸಾದ ಬಳಿಕ ಜಲ್ಲುಪುರ್ ಖೇರಾ ಗ್ರಾಮದಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಿದ್ದ. ಇದರ ಜತೆಗೆ ದುರ್ನಡತೆಯಿಂದ ನಿವೃತ್ತಿ ಹೊಂದಿರುವ ಮಾಜಿ ಸೈನಿಕರನ್ನು ಹುಡುಕಿ ಅವರನ್ನು ಶಸ್ತ್ರಾಸ್ತ್ರಗಳ ತರಬೇತಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಟ, ಹೋರಾಟಗಾರ ದೀಪು ಸಿಧುವಿನ ಮರಣದ ನಂತರ ‘ವಾರಿಸ್ ಪಂಜಾಬ್ ಡೇ‘ (ಡಬ್ಲ್ಯುಪಿಡಿ) ಸಂಘಟನೆಯ ಉಸ್ತುವಾರಿ ವಹಿಸಿಕೊಂಡು, ಇಬ್ಬರು ಖಾಸಗಿ ರಕ್ಷಣಾ ಸಿಬ್ಬಂದಿಯನ್ನು ಇರಿಸಿಕೊಂಡಿದ್ದ, ಈ ವರ್ಷ ಅವರ ಸಂಖ್ಯೆ 16ಕ್ಕೆ ಏರಿಕೆಯಾಗಿತ್ತು.
ಅಮೃತ್‌ಪಾಲ್‌ಗೆ ಆಶ್ರಯ ನೀಡಿದ್ದ ಮಹಿಳೆ ಬಂಧನ
ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರ ಪಾಪಲ್‌ಪ್ರೀತ್ ಸಿಂಗ್‌ಗೆ ಕುರುಕ್ಷೇತ್ರ ಜಿಲ್ಲೆಯ ತನ್ನ ಮನೆಯಲ್ಲಿ ಆಶ್ರಯ ನೀಡಿದ ಆರೋಪದ ಮೇರೆಗೆ ಬಲ್ಜಿತ್ ಕೌರ್ ಎಂಬ ಮಹಿಳೆಯನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್‌ನಿಂದ ಮಹಿಳೆಯನ್ನು ಬಂಧಿಸಲಾಗಿದ್ದು, ಅವರನ್ನು ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ ಸುರೀಂದರ್ ಸಿಂಗ್ ಭೋರಿಯಾ ಮಾಹಿತಿ ನೀಡಿದ್ದಾರೆ. ಬಂಧಿತ ಮಹಿಳೆ ಮತ್ತು ಪಾಪಲ್‌ಪ್ರೀತ್ ಸಿಂಗ್ ಎರಡು ವರ್ಷಗಳಿಂದ ಪರಿಚಿತರಾಗಿದ್ದರು. ಬೈಕ್, ಕಾರು, ಎಸ್‌ಯುವಿಗಳ ಮೂಲಕ ತಪ್ಪಿಸಿಕೊಂಡಿರುವ ಪಾಪಲ್‌ಪ್ರೀತ್ ಸಿಂಗ್ ಮತ್ತು ಅಮೃತಪಾಲ್ ಸಿಂಗ್ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು. ಕುರುಕ್ಷೇತ್ರದಲ್ಲಿ ಮನೆಯಿಂದ ಹೊರಟ ಅಮೃತ್‌ಪಾಲ್ ತನ್ನ ಮುಖ ಮರೆಮಾಚಲು ಛತ್ರಿಯನ್ನು ಹಿಡಿದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.