ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿನ ಕಾರ್ಖಾನೆ ಖಾಸಗೀಕರಣಕ್ಕೆ ವಿರೋಧ: ಆಂಧ್ರಪ್ರದೇಶ ಬಂದ್‌ ಶಾಂತಿಯುತ

Last Updated 5 ಮಾರ್ಚ್ 2021, 7:56 IST
ಅಕ್ಷರ ಗಾತ್ರ

ಹೈದರಾಬಾದ್‌: ವಿಶಾಖಪಟ್ಟಣದಲ್ಲಿನ ಉಕ್ಕಿನ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ಕರೆ ನೀಡಿರುವ ಆಂಧ್ರಪ್ರದೇಶ ಬಂದ್‌ ಶಾಂತಿಯುತವಾಗಿ ನಡೆಯುತ್ತಿದೆ.

ಬಂದ್‌ ಅಂಗವಾಗಿ ‘ವಿಶಾಖಾ ಉಕ್ಕು ಪರಿರಕ್ಷಣಾ ಪೋರಾಟ ಸಮಿತಿ’ ಆಯೋಜಿಸಿರುವ ಬೃಹತ್‌ ಪ್ರತಿಭಟನೆಯಲ್ಲಿ ಬಿಜೆಪಿ ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು, ಕಾರ್ಮಿಕ ಸಂಘಟನೆ‌ಗಳು ಪಾಲ್ಗೊಂಡಿವೆ.

ಪ್ರತಿಭಟನಾಕಾರರು ಹಲವು ಸ್ಥಳಗಳಲ್ಲಿ ರಸ್ತೆ ತಡೆ ನಡೆಸಿದರು. ಅಂಗಡಿ–ಮುಂಗಟ್ಟುಗಳು, ಶಾಲಾ– ಕಾಲೇಜುಗಳು ಮುಚ್ಚಿವೆ. ವಿಶಾಖಪಟ್ಟಣದಲ್ಲೂ ಬೃಹತ್‌ ಮಾನವ ಸರಪಳಿ ರಚಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಬಂದ್‌ಗೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸರ್ಕಾರ ಸಹ ಬೆಂಬಲ ಸೂಚಿಸಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿವೆ. ತುರ್ತು ಸೇವೆಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

‘ವಿಶಾಖಪಟ್ಟಣ ಉಕ್ಕಿನ ಕಾರ್ಖಾನೆ ಖಾಸಗೀಕರಣಕ್ಕೆ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಜಗಮೋಹನ್‌ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ’ ಎಂದು ವಾರ್ತಾ ಸಚಿವ ಪೆರ್ನಿ ವೆಂಕಟರಾಮಯ್ಯ ಗುರುವಾರ ಹೇಳಿದ್ದರು.

ಉಕ್ಕು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಉಕ್ಕಿನ ಕಾರ್ಖಾನೆ ಪ್ರತಿ ವರ್ಷ 73 ಲಕ್ಷ ಟನ್‌ ಉತ್ಪಾದನೆ ಮಾಡುತ್ತದೆ. 20 ಸಾವಿರ ಎಕರೆ ಪ್ರದೇಶದಲ್ಲಿರುವ ಈ ಕಾರ್ಖಾನೆ 1992ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.

ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಾಷ್ಟ್ರೀಯ ಇಸ್ಪಾತ್‌ ನಿಗಮ ಲಿಮಿಟೆಡ್‌ನಿಂದ ಶೇಕಡ 100ರಷ್ಟು ಷೇರು ವಿಕ್ರಯಕ್ಕೆ ಅನುಮೋದನೆ ನೀಡಿತ್ತು. ವಿಶಾಖಪಟ್ಟಣ ಉಕ್ಕು ಕಾರ್ಖಾನೆಯು ಈ ನಿಗಮದ ವ್ಯಾಪ್ತಿಗೆ ಒಳಪಡುತ್ತದೆ.

ಕಾರ್ಖಾನೆಯಲ್ಲಿ 15 ಸಾವಿರ ಕಾಯಂ ಮತ್ತು 20 ಸಾವಿರ ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ, 65 ಸಾವಿರ ಮಂದಿಗೆ ಪರೋಕ್ಷವಾಗಿ ಉದ್ಯೋಗವನ್ನು ನೀಡುತ್ತಿದೆ. ಹೀಗಾಗಿ, ಸುಮಾರು ಒಂದು ಲಕ್ಷ ಮಂದಿಗೆ ಈ ಕಾರ್ಖಾನೆ ಉದ್ಯೋಗ ಕಲ್ಪಿಸಿದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಆದರೆ, ಕಬ್ಬಿಣ ಅದಿರು ಗಣಿಯ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಕಾರ್ಖಾನೆ ನಷ್ಟದ ಸುಳಿಗೆ ಸಿಲುಕಿದೆ. ಕಾರ್ಖಾನೆಗಾಗಿಯೇ ಅದಿರು ಗಣಿ ಕಲ್ಪಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಹಲವು ವರ್ಷಗಳಿಂದ ಸರ್ಕಾರವನ್ನು ಒತ್ತಾಯಿಸಿವೆ.

1977ರಲ್ಲಿ ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾರ್ಖಾನೆಗಾಗಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಹೋರಾಟದ ಸಂದರ್ಭದಲ್ಲಿ 30 ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT