ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾಮಲೈ ರಾಜಕೀಯ ಪ್ರವೇಶ; ಪಕ್ಷ ಬಲಪಡಿಸಲು ಬಿಜೆಪಿಯ ಬೃಹತ್‌ ಯೋಜನೆ

ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಛಾಪು ಮೂಡಿಸುವರೇ?
Last Updated 27 ಆಗಸ್ಟ್ 2020, 5:45 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಸುವ ಪ್ರಯತ್ನದಲ್ಲಿ ಸಾಗಿರುವ ಬಿಜೆಪಿ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಸೇರಿಸಿಕೊಳ್ಳುವ ಮೂಲಕ ಮಹತ್ವದ ಹೆಜ್ಜೆಯನ್ನಿರಿಸಿದೆ. ಇದೊಂದು ಬಿಜೆಪಿಯ ಬೃಹತ್‌ ರಾಜಕೀಯ ಯೋಜನೆಯ ಭಾಗವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ತಮಿಳುನಾಡಿನಲ್ಲಿ ದ್ರಾವಿಡ ಸಿದ್ಧಾಂತಕ್ಕೆ ಪರ್ಯಾಯವಾಗಿ ಪಕ್ಷ ಕಟ್ಟಬೇಕಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರಬಲ ಸಮುದಾಯದ ವ್ಯಕ್ತಿ ಪಕ್ಷ ಸೇರಿರುವುದರಿಂದ ಮಹತ್ವದ ಪಾತ್ರ ವಹಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

1967ರಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಭಾವದಲ್ಲಿ ಇತರ ಪಕ್ಷಗಳು ಸಂಘಟನೆಯಲ್ಲಿ ಸಂಪೂರ್ಣ ದುರ್ಬಲವಾಗಿವೆ. ಅಣ್ಣಾಮಲೈ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಅತ್ಯುತ್ತಮ ನಿರ್ಧಾರವಾಗಿದೆ. ಪಕ್ಷಕ್ಕೆ ಯಾವುದೇ ರೀತಿಯಲ್ಲಿ ನೆಲೆ ಇಲ್ಲದ ತಮಿಳುನಾಡಿನಲ್ಲಿ ಸಂಘಟನೆಯನ್ನು ಬಲಪಡಿಸಲು ಇಂತಹ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ ಎನ್ನುವುದು ಪಕ್ಷದ ವಲಯದಲ್ಲಿ ವ್ಯಕ್ತವಾಗಿದೆ.

ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಹಾಲಿ ಅಧ್ಯಕ್ಷ ಎಲ್‌. ಮುರುಗನ್‌ ದಲಿತ ಸಮುದಾಯಕ್ಕೆ ಸೇರಿದ್ದಾರೆ. ಮುರುಗನ್‌ ಈ ಮೊದಲು ಡಿಎಂಕೆಯಲ್ಲಿದ್ದರು. ಪಕ್ಷದ ಉಪಾಧ್ಯಕ್ಷರಲ್ಲಿ ಒಬ್ಬರಾಗಿರುವ ವಿ.ಪಿ. ದೊರೈಸ್ವಾಮಿ ಸಹ ದಲಿತ ಸಮುದಾಯಕ್ಕೆ ಸೇರಿದ್ದಾರೆ. ಇತರ ಹಿಂದುಳಿದ ವರ್ಗಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ‘ಸಾಮಾಜಿಕ ನ್ಯಾಯ’ದ ಸೂತ್ರವನ್ನು ಅನುಸರಿಸುವ ಪ್ರಯತ್ನ ನಡೆಸಲಾಗುತ್ತಿದೆ.

36 ವರ್ಷದ ಅಣ್ಣಾಮಲೈ, ಪ್ರಬಲ ಗೌಂಡರ್‌ ಸಮುದಾಯಕ್ಕೆ ಸೇರಿದ್ದಾರೆ. ಮುಖ್ಯಮಂತ್ರಿ ಪಳನಿಸ್ವಾಮಿ ಸಹ ಇದೇ ಸಮುದಾಯಕ್ಕೆ ಸೇರಿದ್ದಾರೆ. ಕಳಂಕರಹಿತ ಅಣ್ಣಾಮಲೈ ಅವರ ವರ್ಚಸ್ಸು ಹಾಗೂ ಪೊಲೀಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶೈಲಿ ಯುವ ಸಮುದಾಯವನ್ನು ಸೆಳೆಯಲು ಅನುಕೂಲವಾಗುತ್ತದೆ. ಈ ಸೂತ್ರವೇ ರಾಜ್ಯದಲ್ಲಿ ಪರ್ಯಾಯ ರಾಜಕೀಯ ಸಿದ್ಧಾಂತಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ ಎನ್ನುವುದು ಮುಖಂಡರ ವಿಶ್ಲೇಷಣೆ.

ಎಂಟು ಜಿಲ್ಲೆಗಳಿರುವ ಪಶ್ಚಿಮ ತಮಿಳುನಾಡಿನಲ್ಲಿ ಗೌಂಡರ್‌ ಸಮುದಾಯ ಹೆಚ್ಚು ಪ್ರಭಾವ ಹೊಂದಿದೆ. ಹೀಗಾಗಿ, ಉದ್ಯಮ ಮತ್ತು ವಿವಿಧ ವ್ಯಾಪಾರ ವಹಿವಾಟಿನಲ್ಲಿ ಅತಿ ಹೆಚ್ಚು ತೊಡಗಿಸಿಕೊಂಡಿರುವ ಈ ಸಮುದಾಯ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂದು ಗೌಂಡರ್ ಸಮುದಾಯದ ಉದ್ಯಮಿಗಳು ಇಚ್ಛೆ ವ್ಯಕ್ತಪಡಿಸಿದ್ದರು. ಜತೆಗೆ, ಕೊಯಮತ್ತೂರು ಸೇರಿದಂತೆ ಪಶ್ಚಿಮ ಜಿಲ್ಲೆಗಳಲ್ಲಿ ತನ್ನದೇ ಆದ ನೆಲೆಯನ್ನು ಪಕ್ಷ ಹೊಂದಿದೆ. ಹೀಗಾಗಿ, ಎಲ್ಲ ವಿಷಯಗಳನ್ನು ಅವಲೋಕಿಸಿದಾಗ ಈ ಸಮುದಾಯವು ಪಕ್ಷದ ಪರ ಒಲವು ವ್ಯಕ್ತಪಡಿಸಬಹುದು ಎನ್ನುವ ಲೆಕ್ಕಾಚಾರ ಮುಖಂಡರದ್ದು.

ದಕ್ಷಿಣ ತಮಿಳುನಾಡು ಭಾಗದಲ್ಲಿ ಪ್ರಬಲ ಸಮುದಾಯವಾಗಿರುವ ತೇವರ್‌ ಮತ್ತು ಉತ್ತರ ಭಾಗದಲ್ಲಿರುವ ವಣ್ಣಿಯಾರ್ ಸಮುದಾಯಗಳನ್ನು ಸೆಳೆಯಲು ಬಿಜೆಪಿ ಕೆಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ಪಕ್ಷದ ಸಂಘಟನೆಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ.

ಆದರೆ, ಏನೇ ಪ್ರಯತ್ನಗಳಿದ್ದರೂ ಬಿಜೆಪಿಯನ್ನು ಇನ್ನೂ ‘ಹಿಂದಿ ಪಕ್ಷ‘ ಎಂದೇ ಪರಿಗಣಿಸಲಾಗುತ್ತಿದೆ. ಹಿಂದಿ ಹೇರುವ ಪ್ರಯತ್ನ ಮಾಡುತ್ತಿದೆ ಎಂದೇ ದೂರಲಾಗುತ್ತಿದೆ. ಈ ಆರೋಪಗಳಿಂದ ಮುಕ್ತವಾಗಲು ಪಕ್ಷ ವಿವಿಧ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಜನರ ಮನಸ್ಸಿನಲ್ಲಿ ಮೂಡಿರುವ ಭಾವನೆಗಳನ್ನು ತೆಗೆದುಹಾಕಲು ಸಮಾಲೋಚನೆ ನಡೆಸುತ್ತಿದೆ. ತೃತೀಯ ಭಾಷೆಯಿಂದ ಉತ್ತಮ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳು ಯಾವ ರೀತಿ ಸೃಷ್ಟಿಯಾಗುತ್ತವೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಾಹಸದಲ್ಲಿ ತೊಡಗಿದೆ.

ಹಿಂದುಳಿದ ಸಮುದಾಯಗಳು ಮತ್ತು ಇತರ ದುರ್ಬಲ ವರ್ಗಗಳ ನಾಯಕರನ್ನು ಸೆಳೆಯುವ ಮೂಲಕ ತಮಿಳುನಾಡಿನಲ್ಲಿ ಭದ್ರವಾಗಿರುವ ದ್ರಾವಿಡ ಪಕ್ಷಗಳ ಪ್ರಾಬಲ್ಯವನ್ನು ಕಡಿಮೆಗೊಳಿಸುವುದು ಬಿಜೆಪಿಯ ಉದ್ದೇಶವಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

‘ಬಿಜೆಪಿ ಈಗ ತಮಿಳುನಾಡಿನಲ್ಲಿ ಸಂಘಟನೆ ಕೈಗೊಂಡಿದೆ. ಸದ್ಯಕ್ಕೆ ಬಿಜೆಪಿಯ ರಾಜಕೀಯ ಶೈಲಿಯನ್ನು ವಿರೋಧಿಸುವುದು ತಮಿಳುನಾಡು ಮಾತ್ರ. ಆದರೂ, ವಿಭಿನ್ನ ಅಸ್ಮಿತೆ ಹೊಂದಿರುವ ತಮಿಳುನಾಡಿನಲ್ಲಿಯೂ ಪಕ್ಷಕ್ಕೆ ಭದ್ರ ನೆಲೆ ಒದಗಿಸುವ ಉದ್ದೇಶ ಹೊಂದಲಾಗಿದೆ’ ಎಂದು ಮದ್ರಾಸ್‌ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ. ರಾಮು ಮಣಿವಣ್ಣಮ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT