ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ವಿರುದ್ಧ ಬಿಜೆಪಿ ಶಾಸಕ: ಬಿಹಾರ ವಿಧಾನಸಭೆಯಲ್ಲಿ ಗದ್ದಲ, ಕಲಾಪ ಮುಂದೂಡಿಕೆ

ಮುಸ್ಲಿಂ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆ ಖಂಡನೆ
Last Updated 28 ಫೆಬ್ರುವರಿ 2022, 13:14 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ವಿರೋಧ ಪಕ್ಷಗಳ ತೀವ್ರ ವಿರೋಧದ ನಂತರ ಸೋಮವಾರದ ಬಿಹಾರ ವಿಧಾನಸಭೆಯ ಬಜೆಟ್‌ ಅಧಿವೇಶನವನ್ನು ಮುಂದೂಡಲಾಯಿತು.

ಬಿಜೆಪಿ ಶಾಸಕ ಹರಿಭೂಷಣ್‌ ಠಾಕೂರ್‌ ಭಚೌಲ್‌ ಅವರು ಈಚೆಗೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದನ್ನು ಖಂಡಿಸಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿ ತುರ್ತು ಕಲಾಪ ಸಲಹಾ ಸಮಿತಿ ಸಭೆ ನಡೆಸುವಂತೆ ಒತ್ತಾಯಿಸಿದ್ದರಿಂದ ಸದನವನ್ನು ಮುಂದಕ್ಕೆ ಹಾಕಲಾಯಿತು.

ಬೆಳಿಗ್ಗೆ 11 ಗಂಟೆ ಹೊತ್ತಿಗೆ ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕ ಹರಿಭೂಷಣ್‌ ಅವರನ್ನು ವಜಾಗೊಳಿಸಬೇಕೆಂದು ಆರ್‌ಜೆಡಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಹಲವು ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.

ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರ ಮತದಾನದ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಬೇಕು ಎಂದು ಕಳೆದ ವಾರ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದ ಬಚೌಲ್‌ ಅವರು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾದರು.

ಸಭಾಧ್ಯಕ್ಷ ವಿಜಯ್‌ ಕುಮಾರ್‌ ಸಿನ್ಹಾ ಅವರ ಮನವಿ ಮೇರೆಗೆ ಪ್ರತಿಭಟಿಸುತ್ತಿದ್ದ ಸದಸ್ಯರು ತಮ್ಮ ಆಸನಗಳಿಗೆ ಹಿಂತಿರುಗಿದರು.ಕಲಾಪದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ವಿಜಯ್‌ ಕುಮಾರ್‌ ಚೌಧರಿ ಸರ್ಕಾರದ ಪರವಾಗಿ ಉತ್ತರಿಸಿದರು. ಆದರೆ ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು ಕಲಾಪ ಸಲಹಾ ಸಮಿತಿ ಸಭೆ ನಡೆಸುವಂತೆ ಒತ್ತಾಯಿಸಿದರು.ನಂತರ ಕಲಾಪ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT