ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮಗಳ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ: ರವಿಶಂಕರ್‌ ಪ್ರಸಾದ್‌

ಇಂಟರ್‌ನೆಟ್‌ ಮೇಲೆ ಏಕಚಕ್ರಾಧಿಪತ್ಯ ಸಾಧಿಸುವುದನ್ನು ಸಹಿಸುವುದಿಲ್ಲ: ರಾಜ್ಯಸಭೆಯಲ್ಲಿ ಹೇಳಿಕೆ
Last Updated 18 ಮಾರ್ಚ್ 2021, 17:56 IST
ಅಕ್ಷರ ಗಾತ್ರ

ನವದೆಹಲಿ: ‘ಇಂಟರ್‌ನೆಟ್‌ ಮೇಲೆ ಕೆಲವೇ ಕಂಪನಿಗಳು ಏಕ ಚಕ್ರಾಧಿಪತ್ಯ ಸಾಧಿಸುವ ಪ್ರಯತ್ನವನ್ನು ಸಹಿಸುವುದಿಲ್ಲ’ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಟ್ವಿಟರ್‌ ಖಾತೆಗಳನ್ನು ನಿಷೇಧಿಸುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಅಥವಾ ವಿರೋಧ ವ್ಯಕ್ತಪಡಿಸುವುದನ್ನು ಸರ್ಕಾರ ಸ್ವಾಗತಿಸುತ್ತದೆ. ಆದರೆ, ಸಾಮಾಜಿಕ ಮಾಧ್ಯಮಗಳ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

‘ಟೂಲ್‌ ಕಿಟ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ ಪ್ರಸ್ತಾಪಿಸಿ ಕಾಂಗ್ರೆಸ್‌ನ ಜಿ.ಸಿ. ಚಂದ್ರಶೇಖರ್‌ ಅವರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಭಾರತದಲ್ಲಿ ಸುಮಾರು 140 ಕೋಟಿ ಮಂದಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ವಾಟ್ಸ್‌ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌, ಲಿಂಕ್‌ಡಿನ್‌ಗೆ ಮುಕ್ತವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಭಾರತದ ಸಾಮಾನ್ಯ ಜನರನ್ನು ಈ ಕಂಪನಿಗಳು ಸಬಲೀಕರಣಗೊಳಿಸಿವೆ’ ಎಂದು ಹೇಳಿದರು.

‘ಸಾಮಾಜಿಕ ಮಾಧ್ಯಮಗಳ ಬಳಕೆಯ ದುರುಪಯೋಗ ಮತ್ತು ಇವುಗಳ ಮೂಲಕ ನಿಂದನೆ ಮಾಡುವುದು ಚರ್ಚೆಯ ವಿಷಯವಾಗಿದೆ. ಇಂಟರ್‌ನೆಟ್‌ ಮಾನವನ ಅದ್ಭುತ ಅವಿಷ್ಕಾರ. ಆದರೆ, ಇಂಟರ್‌ನೆಟ್‌ ಮೇಲೆ ಕೆಲವರು ಮಾತ್ರ ಏಕಸ್ವಾಮ್ಯ ಹೊಂದಬಾರದು. ಹೀಗಾಗಿ, ಕೆಲವೇ ಕಂಪನಿಗಳು ಇಂಟರ್‌ನೆಟ್‌ ಮೇಲೆ ಸಾಮ್ರಾಜ್ಯಶಾಹಿ ಸ್ಥಾಪಿಸುವುದನ್ನು ಸಹಿಸುವುದಿಲ್ಲ’ ಎಂದು ಹೇಳಿದರು.

‘ದಿಶಾ ರವಿ ಪ್ರಕರಣ ನ್ಯಾಯಾಂಗದ ಪರಿಶೀಲನೆಯಲ್ಲಿದೆ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ನಿಂದಿಸಿ ಭಾರತದ ಗೌರವ, ಮಾನಕ್ಕೆ ಧಕ್ಕೆ ತರಲು ಅವಕಾಶ ನೀಡಬಹುದೇ ಎನ್ನುವ ಬಗ್ಗೆ ಸದನವು ನಿರ್ಧರಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT