ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌ ಸಹೋದರಿಯಿಂದ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ?

ವೈಎಸ್‌ಆರ್ ಪುತ್ರಿಯ ರಾಜಕೀಯ ಪ್ರವೇಶ ಊಹಾಪೋಹಕ್ಕೆ ರೆಕ್ಕೆಪುಕ್ಕ
Last Updated 9 ಫೆಬ್ರುವರಿ 2021, 10:50 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರದ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರು ಮಂಗಳವಾರ ತಮ್ಮ ತಂದೆ ವೈಎಸ್‌ಆರ್‌(ವೈ.ಎಸ್.ರಾಜಶೇಖರ ರೆಡ್ಡಿ) ಅವರ ಆಪ್ತರೊಂದಿಗೆ ಸಭೆ ನಡೆಸಿದ್ದು, ಈ ಮೂಲಕ ತೆಲಂಗಾಣದಲ್ಲಿ ರಾಜಕೀಯ ಪ್ರವೇಶ ಮಾಡುತ್ತಾರೆಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ..!

ಇಲ್ಲಿನ ‘ಲೋಟಸ್‌ ಪಾಂಡ್‌‘ನಲ್ಲಿರುವ ತಮ್ಮ ನಿವಾಸದಲ್ಲಿ ನಲ್ಗೊಂಡ ಜಿಲ್ಲೆಯ ವೈಎಸ್‌ಆರ್‌ ಅವರ ಆಪ್ತರನ್ನು ಶರ್ಮಿಳಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಮಾತುಕತೆಯ ವಿವರ ಬಹಿರಂಗವಾಗಿಲ್ಲ. ಅದರೆ, ಜಿಲ್ಲೆಯ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಶರ್ಮಿಳಾ ಪ್ರಯತ್ನಿಸಿದ್ದಾರೆ ಎಂದು ಗೊತ್ತಾಗಿದೆ.

ಶರ್ಮಿಳಾ ಅವರು ತಮ್ಮ ಸಹೋದರನ ಬೆಂಬಲವಿಲ್ಲದೇ, ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಯೋಚನೆಯಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಹೊಸ ಪಕ್ಷ ಸ್ಥಾಪಿಸುವ ಸಂಬಂಧ ಅವರು ಈಗಾಗಲೇ ವೈಎಸ್‌ಆರ್ ಅವರೊಂದಿಗೆ ನಿಕಟ ಸಂರ್ಪದಲ್ಲಿದ್ದ ಪ್ರಮುಖ ರಾಜಕೀಯ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ‘ರಾಜಣ್ಣ ರಾಜ್ಯ‘(ರಾಜಶೇಖರ್ ರೆಡ್ಡಿ ಆಡಳಿತ) ನಿರ್ಮಾಣ ಕುರಿತು ಮುಖಂಡರ ಅಭಿಪ್ರಾಯ ಕೇಳಿದ್ದಾರೆ‘ ಎಂದು ಹೇಳಲಾಗಿದೆ.

ಈ ಕುರಿತು ಮಂಗಳವಾರ ಮುಖಂಡರೊಂದಿಗೆ ಸಭೆ ನಡಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಇಲ್ಲಿನ ವಾಸ್ತವ ಸಂಗತಿಗಳನ್ನು ತಿಳಿದುಕೊಳ್ಳಲು ಹಾಗೂ ಕೆಲವೊಂದು ಸಲಹೆಗಳನ್ನು ಪಡೆಯುವುದಕ್ಕಾಗಿ ನಲ್ಗೊಂಡ ಜಿಲ್ಲೆಯ ರಾಜಕೀಯ ಮುಖಂಡರನ್ನು ಆಹ್ವಾನಿಸಿದ್ದೇನೆ. ಇದು ಅವರನ್ನು ಸಂಪರ್ಕಿಸುವುದಕ್ಕಾಗಿ ನಡೆಸಿದ ಸಭೆ ಅಷ್ಟೇ. ನಾನು ಎಲ್ಲ ಜಿಲ್ಲೆಯ ಜನರೊಂದಿಗೂ ಹೀಗೆ ಸಭೆ ನಡೆಸುತ್ತೇನೆ‘ ಎಂದು ಪ್ರತಿಕ್ರಿಯಿಸಿದರು.

ಇದೇ ವೇಳೆ ‘ನೀವು ಹೊಸ ರಾಜಕೀಯ ಪಕ್ಷವನ್ನು ಆರಂಭಿಸುತ್ತೀರಾ‘ ಎಂಬ ಸುದ್ದಿಗಾರರ ಪ್ರಶ್ನೆಗೆ ನೇರವಾಗಿ ಉತ್ತರಿಸದ ಶರ್ಮಿಳಾ ಅವರು, ‘ಈಗ ರಾಜಣ್ಣನ ರಾಜ್ಯವಿಲ್ಲ. ಹಾಗಾಗಿ, ಅದು ಏಕೆ ನಿರ್ಮಾಣವಾಗಬಾರದು‘ ಎಂದು ಮರು ಪ್ರಶ್ನೆ ಹಾಕಿದರು. ನಂತರ ‘ಜಗನ್‌ ಮೋಹನ್ ರೆಡ್ಡಿ ಆಂಧ್ರಪ್ರದೇಶದಲ್ಲಿ ತನ್ನ ಕೆಲಸ ಮಡುತ್ತಿದ್ದಾರೆ. ನಾನು ತೆಲಂಗಾಣದಲ್ಲಿ ನನ್ನ ಕೆಲಸ ಮಾಡುತ್ತೇನೆ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಶರ್ಮಿಳಾ ಮತ್ತು ಅವರ ತಾಯಿ ವಿಜಯಮ್ಮ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಜಯಗಳಿಸಿ, ಜಗನ್ ಅಧಿಕಾರವಹಿಸಿಕೊಂಡ ನಂತರ, ಶರ್ಮಿಳಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ.

‘ಶರ್ಮಿಳಾಗೆ ರಾಜಕೀಯ ಮಹಾತ್ವಾಕಾಂಕ್ಷೆಗಳಿವೆ. ಆದರೆ, ಈಗ ನಡೆಯುತ್ತಿರುವ ಬೆಳವಣಿಗಗಳು ಅಂತಿಮವಾಗಿ ಎಲ್ಲಿಗೆ ಹೋಗಿ ತಲುಪುತ್ತವೆ ಎಂಬುದು ಸ್ಪಷ್ಟವಾಗಿಲ್ಲ‘ ಎಂದು ಹೆಸರು ಹೇಳಲು ಇಚ್ಛಿಸದ ಆಂಧ್ರದ ವೈಎಸ್‌ಆರ್ ಕಾಂಗ್ರೆಸ್‌ನ ಹಿರಿಯ ಶಾಸಕರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಭಿಮಾನಿಗಳಲ್ಲಿ ವೈಎಸ್‌ಆರ್ ಎಂದೇ ಪರಿಚಿತರಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ, 2004 ರಿಂದ 2009ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2009ರಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT