ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಪ್ರದೇಶ: ಎಸ್‌.ಪಿ ಅಭ್ಯರ್ಥಿ ಬೆಂಬಲಿಸಲು ರೈಲ್ವೆ ನಿಲ್ದಾಣದಲ್ಲಿ ಮನವಿ

ರೈಲ್ವೆ ವಿಚಾರಣಾ ಪ್ರಕಟಣೆ ವ್ಯವಸ್ಥೆ ಬಳಸಿಕೊಂಡ ಆರೋಪ
Last Updated 27 ನವೆಂಬರ್ 2022, 13:58 IST
ಅಕ್ಷರ ಗಾತ್ರ

ಲಖನೌ:ಉತ್ತರ ಪ್ರದೇಶದ ಇಟಾವಾ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು. ರೈಲುಗಳ ಸಂಚಾರ ಸಮಯ ಮತ್ತು ಪ್ಲಾಟ್‌ ಫಾರ್ಮ್ ಸಂಖ್ಯೆಗಳ ಬಗ್ಗೆ ಘೋಷಣೆ ಮಾಡುವ ಬದಲು ಡಿ. 5 ರ ಉಪ ಚುನಾವಣೆಯಲ್ಲಿ ಮೈನ್ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸಮಾಜವಾದಿ ಪಕ್ಷದ (ಎಸ್ ಪಿ) ಅಭ್ಯರ್ಥಿ ಡಿಂಪಲ್ ಯಾದವ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಉತ್ತರ ರೈಲ್ವೆಯ ಕಾನ್ಪುರ-ದೆಹಲಿ ವಿಭಾಗದ ಇಟಾವಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ವಿಚಾರಣಾ ಪ್ರಕಟಣೆ ವ್ಯವಸ್ಥೆ ಬಳಸಿಕೊಂಡು ‘ಡಿಂಪಲ್ ಯಾದವ್ ಜಿಂದಾಬಾದ್’ ಮತ್ತು ‘ಡಿಂಪಲ್ ಬಾಬಿ ಅವರನ್ನು ಗೆಲ್ಲಿಸಿ’ ಎಂಬ ಘೋಷಣೆಗಳನ್ನು ಶನಿವಾರ ರಾತ್ರಿ ಕೂಗಲಾಯಿತು.

ಘೋಷಣೆಗಳನ್ನು ಕೇಳಿದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ, ಚುನಾವಣಾ ಪ್ರಚಾರಕ್ಕಾಗಿ ರೈಲ್ವೆ ವಿಚಾರಣಾ ವ್ಯವಸ್ಥೆ ಬಳಸಿಕೊಂಡಿರುವುದರ ವಿರುದ್ಧ ಪ್ರತಿಭಟನೆ ದಾಖಲಿಸಿದರು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಎಂದು ವರದಿಗಳು ತಿಳಿಸಿವೆ.

ಈ ವಿಷಯವನ್ನು ಜಿಆರ್‌ಪಿ ಗಮನಕ್ಕೆ ತರಲಾಗಿದೆ ಎಂದು ಇಟಾವಾದ ಪೊಲೀಸ್ ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲ ಕಿಡಿಗೇಡಿಗಳು ನಿಲ್ದಾಣದ ಪ್ರಕಟಣಾ ಕೊಠಡಿಯನ್ನು ಬಲವಂತವಾಗಿ ಪ್ರವೇಶಿಸಿ, ಡಿಂಪಲ್ ಯಾದವ್ ಅವರನ್ನು ಬೆಂಬಲಿಸುವ ಘೋಷಣೆಗಳನ್ನು ಒಳಗೊಂಡ ರೆಕಾರ್ಡ್ ಮಾಡಿದ ಸಂದೇಶವನ್ನು ರವಾನಿಸಿದರು ಎಂದು ಇಟಾವಾದ ರೈಲ್ವೆ ಅಧಿಕಾರಿ ಉಲ್ಲೇಖಿಸಿ ಮೂಲಗಳು ತಿಳಿಸಿವೆ.

ಮತ್ತೊಂದು ವರದಿ ಪ್ರಕಾರ, ಸಭೆಯೊಂದರಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲ್ವೆ ಯೂನಿಯನ್‌ ಕೆಲ ಸದಸ್ಯರು ಘೋಷಣಾ ಕೊಠಡಿಯೊಳಗೆ ಪ್ರವೇಶಿಸಿ, ಎಸ್‌ಪಿ ಅಭ್ಯರ್ಥಿ ಪರವಾಗಿ ಘೋಷಣೆ ಕೂಗಲು ಬಳಸಿಕೊಂಡರು ಎಂದು ಹೇಳಿವೆ.

ಮೈನ್‌ಪುರಿಯ ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯಾ ಅವರು ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.ಘಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಎಸ್‌ಪಿ ಮುಖಂಡರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT