ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಗಡಿಯಲ್ಲಿ ಚಳಿ ಎದುರಿಸಲು ಸಿದ್ಧವಾಗ್ತಿದೆ ಭಾರತೀಯ ಸೇನೆ

ಸೇನಾ ಹಿಂತೆಗೆತ ಇಲ್ಲ
Last Updated 21 ಸೆಪ್ಟೆಂಬರ್ 2020, 15:24 IST
ಅಕ್ಷರ ಗಾತ್ರ
ADVERTISEMENT
""
""

ಚೀನಾ ಗಡಿಯ ಮುಂಚೂಣಿ ನೆಲೆಗಳಲ್ಲಿ ಸೇನೆಯು ಚೀನಾ ಸೇನೆಯನ್ನು ಮಾತ್ರವಲ್ಲ ಚಳಿಗಾಲದೊಂದಿಗೂ ಹೋರಾಡಬೇಕಿದೆ. ಇದಕ್ಕಾಗಿ ಸೇನೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ? ಇಲ್ಲಿದೆ ಮಾಹಿತಿ...

ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆ ನೈಜ ನಿಯಂತ್ರಣ ರೇಖೆಯನ್ನು ದಾಟಿ ಬಂದು ಟೆಂಟ್ ಹಾಕಿಕೊಂಡಿದ್ದು ಮತ್ತು ಅದನ್ನು ತೆರವುಗೊಳಿಸುವ ಸಂದರ್ಭ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು ಜಗತ್ತಿನ ಗಮನ ಸೆಳೆದ ವಿದ್ಯಮಾನಗಳು. ಚುರುಕಿನ ರಾಜತಾಂತ್ರಿಕ ಮತ್ತು ಸೇನಾ ಪ್ರಕ್ರಿಯೆಗಳುಆರಂಭವಾಗಲು ಕಾರಣವಾದ ಈ ಬೆಳವಣಿಗೆಯ ನಂತರ ಭಾರತೀಯ ಸೇನೆಯು ಚೀನಾ ಗಡಿಯಲ್ಲಿ ನಿಯೋಜನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿತು.

ಇದೀಗ ಚೀನಾ ಸೇನೆಯು ಗಾಲ್ವನ್ ಕಣಿವೆ ಸೇರಿದಂತೆ ಬಹುತೇಕ ಪ್ರದೇಶಗಳಿಂದ ಅತಿಕ್ರಮಣ ತೆರವುಗೊಳಿಸಿ ಹಿಂದೆ ಸರಿದಿದೆ. ಆದರೂ ಭಾರತೀಯ ಸೇನೆಯು ಗಡಿಯಲ್ಲಿ ನಿಯೋಜನೆಯನ್ನು ಕಡಿಮೆ ಮಾಡಿಲ್ಲ. ಸಂಭವನೀಯ ಸವಾಲುಗಳ ಲೆಕ್ಕಾಚಾರದಲ್ಲಿ ಇತರ ನೆಲೆಗಳಿಂದ ಸೇನಾಪಡೆಗಳನ್ನು ಲಡಾಖ್ ವಲಯದಲ್ಲಿ ನಿಯೋಜಿಸುವುದನ್ನು ಮುಂದುವರಿಸಿದೆ.

ಚಳಿಯೊಂದಿಗೆ ಹೋರಾಟ

ಮುಂಚೂಣಿ ನೆಲೆಗಳಿಗೆ ನಿಯೋಜಿಸಿರುವ ಸೇನಾ ತುಕಡಿಗಳಿಗೆ ಚಳಿಗಾಲದಲ್ಲಿ ಆಹಾರ ಮತ್ತು ಇನ್ನಿತರ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ರಕ್ಷಣಾ ಇಲಾಖೆ ಸಿದ್ಧತೆ ಅರಂಭಿಸಿದ್ದು, ಅಗತ್ಯ ವಸ್ತುಗಳ ಖರೀದಿ ಮತ್ತು ದಾಸ್ತಾನಿಗೆ ಮುಂದಾಗಿದೆ. ಲಡಾಖ್ ವಲಯದಲ್ಲಿ ಈ ಬಾರಿ ವಾಡಿಕೆಗಿಂತಲೂ 30,000 ಹೆಚ್ಚುವರಿ ಸೈನಿಕರು 'ಮೂಳೆ ನಡುಗಿಸುವ ಚಳಿ' ಎದುರಿಸಲಿದ್ದಾರೆ. ಅಕ್ಟೋಬರ್‌ನಿಂದ ಅರಂಭವಾಗುವ ಚಳಿರಾಯನ ಕಾರುಬಾರು ಮುಂದಿನ ಆರು ತಿಂಗಳವರೆಗೆ, ಅಂದರೆ ಏಪ್ರಿಲ್‌ವರೆಗೆ ವಿಜೃಂಭಿಸುತ್ತದೆ. ಈ ಅವಧಿಯಲ್ಲಿ ಚೀನಿ ಸೇನೆ ಮಾತ್ರವಲ್ಲ, ಚಳಿಯ ಜೊತೆಗೂ ನಮ್ಮ ಸೈನಿಕರು ಹೋರಾಡಬೇಕಿದೆ.

ಕಡು ಹಸಿರು ಬಣ್ಣದ 6000 ಎಎಲ್‌ಎಸ್ ಟ್ರಕ್‌ಗಳು ಸೈನಿಕರನ್ನು ಮತ್ತು ಅವರಿಗೆ ಅತ್ಯಗತ್ಯವಾಗಿ ಬೇಕಿರುವ ವಸ್ತುಗಳನ್ನು ಅವಿರತ ಸಾಗಿಸಲು ಸಿದ್ಧವಾಗಿವೆ. ವಾಡಿಕೆಯಂತೆ ಇಲ್ಲಿರುವ ಸೈನಿಕರ ಜೊತೆಗೆ ಈ ಬಾರಿ ಹೆಚ್ಚುವರಿಯಾಗಿ 30 ಸಾವಿರ ಮಂದಿಯನ್ನು ನಿಯೋಜಿಸಲಾಗುವುದು. ಇವರಿಗಾಗಿ 20,000 ಟನ್ ದಿನಸಿಯನ್ನು ಹೆಚ್ಚುವರಿಯಾಗಿ ಲಡಾಖ್‌ಗೆ ಸಾಗಿಸಬೇಕಾಗಬಹುದು ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ ದಿ ಪ್ರಿಂಟ್, ಎಂಎಸ್‌ಎನ್, ಪಯನೀರ್ ಸೇರಿದಂತೆ ಹಲವು ಜಾಲತಾಣಗಳು ವರದಿ ಮಾಡಿವೆ.

ಎತ್ತರದ ಪ್ರದೇಶದಲ್ಲಿ ವಿಪರೀತ ಚಳಿ ತಡೆಯಲು ನೆರವಾಗುವ ಬಟ್ಟೆಗಳು, ತಾತ್ಕಾಲಿಕ ಶಿಬಿರಗಳು ಮತ್ತು ಟೆಂಟ್‌ಗಳಿಗೆ ಬಳಸುವ ವಸ್ತುಗಳನ್ನೂ ಸೇನಾ ವಾಹನಗಳು ಮುಂಚೂಣಿ ನೆಲೆಗಳಿಗೆ ಸಾಗಿಸಬೇಕಿದೆ.

ಸೇನೆಯ 14ನೇ ಕಾರ್ಪ್ಸ್‌ ಲಡಾಖ್‌ ಆಸುಪಾಸಿನ ನೈಜ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಕಾಯುತ್ತದೆ. ಸಿಯಾಚಿನ್‌ ಭದ್ರತೆಯೂ ಇದರದೇ ಹೊಣೆ. ಲಡಾಖ್‌ನಲ್ಲಿ 70,000 ಯೋಧರನ್ನು ನಿಯೋಜಿಸುವುದು ವಾಡಿಕೆ. ಈ ಬಾರಿ ಇದು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಈಗಿನ ಲೆಕ್ಕಾಚಾರದಲ್ಲಿ ಹೆಚ್ಚುವರಿಯಾಗಿ 30,000 ಯೋಧರನ್ನು ನಿಯೋಜಿಸಲಾಗುವುದು. ಅಂದರೆ ಲಡಾಖನ್‌ನಲ್ಲಿ ಸೇನಾ ನಿಯೋಜನೆ 1 ಲಕ್ಷ ಸಿಬ್ಬಂದಿ ಆಗುತ್ತದೆ.

ಚಳಿಗಾಲದಲ್ಲಿ ಸರಬರಾಜು ಮಾರ್ಗಗಳು ಕಡಿತಗೊಳ್ಳುವ ಅಪಾಯ ಇದೆ. ಹೀಗಾಗಿ ಇಷ್ಟು ಜನರಿಗೆ 6 ತಿಂಗಳಅವಧಿಗೆ ಏನೆಲ್ಲಾ ಬೇಕು? ಎಷ್ಟೆಲ್ಲಾ ಬೇಕು ಎಂಬುದನ್ನು ಮುಂಚಿತವಾಗಿಯೇ ಅಂದಾಜಿಸಿ, ದಾಸ್ತಾನು ಮಾಡಲಾಗುತ್ತದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಚಳಿ ಎದುರಿಸುವ ಉಡುಪು

ಸೇನಾ ನೆಲೆಯಲ್ಲಿರುವ ದೊಡ್ಡ ಮಟ್ಟದ ಸಂಖ್ಯೆಗೂ ಈ ಬಾರಿ ಸೇನೆ ಖರೀದಿಸಲು ಉದ್ದೇಶಿಸಿರುವ ಚಳಿಗಾಲದ ಉಡುಪುಗಳ ಸಂಖ್ಯೆಗೂ ಸಾಕಷ್ಟು ಅಂತರವಿದೆ.

ಲಡಾಖ್‌ ಆಸುಪಾಸಿನ ನೈಜ ನಿಯಂತ್ರಣ ರೇಖೆಯ ಮುಂಚೂಣಿ ಠಾಣೆಗಳಿಗೆ ನಿಯೋಜಿಸುವ ಸೈನಿಕರಿಗೆ ಸಿಯಾಚಿನ್‌ನಲ್ಲಿರುವ ಸೈನಿಕರಿಗೆ ಕೊಡುವಂಥದ್ದೇ ಉಡುಪು ಕೊಡಲಾಗುತ್ತದೆ. ಈ ಬಾರಿ ಸೇನೆಯು ಇಂಥ 15 ಸಾವಿರ ಜೊತೆಗಳನ್ನು ಖರೀದಿಸಲು ಮುಂದಾಗಿದೆ. ಹಾಲಿ ಬಳಕೆಯಲ್ಲಿರುವ 2000 ಹಳೆಯ ಉಡುಪುಗಳನ್ನು ಸಣ್ಣಪುಟ್ಟ ರಿಪೇರಿ ಮಾಡಿ ಮರುಬಳಕೆಗೆ ಹಂಚಲಾಗುವುದು.

'ಸೇನಾನೆಲೆಯಲ್ಲಿರುವ ಎಲ್ಲರಿಗೂ ದುಬಾರಿಯಾದ ಚಳಿಗಾಲದ ಉಡುಪಿನ ಅಗತ್ಯ ಇರುವುದಿಲ್ಲ. ಮುಂಚೂಣಿ ನೆಲೆಗಳಿಗೆ ನಿಯೋಜಿಸುವ ಸೈನಿಕರಿಗೆ ಮಾತ್ರ ಇಂಥ ಉಡುಪುಗಳನ್ನು ನೀಡಲಾಗುತ್ತದೆ' ಎಂದು ಸೇನಾ ಮೂಲಗಳು ಹೇಳಿವೆ. ಮಂಜಿನ ಮೇಲೆ ಹಾಕಬಹುದಾದ ಆರ್ಕಿಟಿಕ್ ಟೆಂಟ್‌ಗಳನ್ನೂ ಅಗತ್ಯ ಪ್ರಮಾಣದಲ್ಲಿ ಸೇನೆ ಖರೀದಿಸುತ್ತಿದೆ. ಇದರ ಜೊತೆಗೆ ಬಂಕರ್‌ಗಳ ಸುರಕ್ಷೆಗೆ ಬೇಕಾದ ಮುಳ್ಳುತಂತಿಗಳೂ, ಮಂಜು ಅಗೆಯುವ ಉಪಕರಣಗಳನ್ನೂ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ.

ಒಬ್ಬರಿಗೆ 2.5 ಕೆಜಿ

ಪ್ರತಿ ಯೋಧನಿಗೂ ಪ್ರತಿದಿನ 2.5 ಕೆ.ಜಿ. ಆಹಾರ ಧಾನ್ಯ ಬೇಕಾಗುತ್ತದೆ ಎಂಬುದು ಸೇನೆಯ ಲೆಕ್ಕಾಚಾರ. ಇದರಂತೆ ಹೆಚ್ಚುವರಿಯಾಗಿ ನಿಯೋಜಿಸಿರುವ 30 ಸಾವಿರ ಮಂದಿಗೆ 180 ದಿನಕ್ಕೆ 13,500 ಟನ್ ಆಹಾರ ಧಾನ್ಯ ಬೇಕು. ಇದರ ಜೊತೆಗೆ ಹೆಚ್ಚಿನ ಎತ್ತರ ಪ್ರದೇಶದಲ್ಲಿ ಕೆಲಸ ಮಾಡುವ ಯೋಧರಿಗಾಗಿ ಹೆಚ್ಚುವರಿಯಾಗಿ 6,500 ಟನ್ ಆಹಾರ ಬೇಕಿದೆ. ಅಡುಗೆ ಇಂಧನದ ಅಗತ್ಯ ಪೂರೈಸಲು 1.50 ಕೋಟಿ ಲೀಟರ್‌ಗಳಷ್ಟು ಸೀಮೆಎಣ್ಣೆಯನ್ನೂ ದಾಸ್ತಾನು ಮಾಡಲಾಗುವುದು ಎಂದು ಸೇನೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಲಂಡಾಖ್ ಸಂಪರ್ಕಿಸುವ ಝೊಜಿಲಾ ಮತ್ತು ರೊಹ್‌ಟಂಗ್‌ ಮಾರ್ಗಗಳಲ್ಲಿ ಸೇನಾ ಟ್ರಕ್‌ಗಳ ಓಡಾಟ ಭರದಿಂದ ಸಾಗಿದೆ. ತಾವು ಪ್ರಸ್ತುತ ಇರುವ ನೆಲೆಗಳಿಂದ ಲಡಾಖ್‌ಗೆ ಹೊಸದಾಗಿ ನಿಯೋಜಿತರಾಗಿರುವ ತುಕಡಿಗಳಿಗೆ, ಅವರೊಂದಿಗೆ ಮೀಸಲು ಆಹಾರ ಧಾನ್ಯಗಳನ್ನೂ ತರುವಂತೆ ಸೂಚಿಸಲಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT