ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮುನಾ ನದಿ ಮಾಲಿನ್ಯ: ಜನರ ನಂಬಿಕೆಗಳಿಗೆ ಕೇಜ್ರಿವಾಲ್‌ರಿಂದ ಅಗೌರವ ಎಂದ ಶೇಖಾವತ್

Last Updated 10 ನವೆಂಬರ್ 2021, 4:12 IST
ಅಕ್ಷರ ಗಾತ್ರ

ನವದೆಹಲಿ: ಯಮುನಾ ನದಿಯಲ್ಲಿನ ಮಾಲಿನ್ಯಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಾಗ್ದಾಳಿ ನಡೆಸಿದ್ದಾರೆ. ಜನರ ನಂಬಿಕೆಗಳಿಗೆ ಅಗೌರವ ತೋರಿದ ಪಾಪದಿಂದ ಕೇಜ್ರಿವಾಲ್ ತಪ್ಪಿಸಿಕೊಳ್ಳಲಾಗದು ಎಂದು ಅವರು ಹೇಳಿದ್ದಾರೆ.

‘ದೆಹಲಿ ಸರ್ಕಾರ ಯಮುನಾ ನದಿ ಸ್ವಚ್ಛಗೊಳಿಸುವ ಜವಾವ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ನದಿಯನ್ನು ಸ್ವಚ್ಛಗೊಳಿಸುವ ಬದಲು ಕೇಜ್ರಿವಾಲ್ ಸರ್ಕಾರವು ನದಿ ತಟದಲ್ಲಿ ‘ಛಠ್ ಪೂಜಾ’ ಆಚರಿಸಲು ಬಿಡದಿರುವುದು ದುರದೃಷ್ಟಕರ’ ಎಂದು ಶೇಖಾವತ್ ಹೇಳಿದ್ದಾರೆ.

ಇದಕ್ಕೆ ಎಎಪಿ ನಾಯಕ ರಾಘವ್ ಚಡ್ಡಾ ತಿರುಗೇಟು ನೀಡಿದ್ದು, ಕೇಂದ್ರ ಸಚಿವರು ರಾಜಕೀಯ ಮಾಡುವುದರಲ್ಲಷ್ಟೇ ಆಸಕ್ತರಾಗಿದ್ದಾರೆ ಎಂದು ಹೇಳಿದ್ದಾರೆ. ಸಮಸ್ಯೆಯ ಬಗ್ಗೆ ಅರಿತುಕೊಳ್ಳಲು ಹಾಗೂ ಪರಿಹಾರ ಕಂಡುಕೊಳ್ಳಲು ದೆಹಲಿ, ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರಗಳ ಸಭೆ ಕರೆದು ಚರ್ಚಿಸುವ ಬದಲು ಶೇಖಾವತ್ ಅವರು ರಾಜಕೀಯ ಹೇಳಿಕೆಗಳನ್ನು ನೀಡುವುದರಲ್ಲಿ ನಿರತರಾಗಿದ್ದಾರೆ ಎಂದು ಅವರು ದೂರಿದ್ದಾರೆ.

ನರೇಂದ್ರ ಮೋದಿ ಸರ್ಕಾರವು ಇತರರ ಮೇಲೆ ಆರೋಪಗಳನ್ನು ಮಾಡುತ್ತಾ ತನ್ನ ವೈಫಲ್ಯ ಮತ್ತು ಅಸಮರ್ಪಕ ಕಾರ್ಯವೈಖರಿಯನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದು ಸಚಿವರ ಹೇಳಿಕೆಯಿಂದ ಪ್ರಕಟವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.

‘ಛಠ್ ಪೂಜಾ’ ಸಂದರ್ಭದಲ್ಲಿ ಭಕ್ತರು ವಿಷಕಾರಿ ನೊರೆ ಹೊಮ್ಮುತ್ತಿರುವ ಯಮುನಾ ನದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ವಿಡಿಯೊಗಳು, ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಇದು ಎಎಪಿ ಮತ್ತು ಬಿಜೆಪಿ ನಡುವಣ ವಾಕ್ಸಮರಕ್ಕೂ ಕಾರಣವಾಗಿದೆ.

ತನ್ನ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ದೆಹಲಿಯ ಎಎಪಿ ಸರ್ಕಾರವು ಭಕ್ತರಿಗೆ ಯಮುನಾ ನದಿಗೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಇದೇ ರೀತಿ ಉತ್ತರ ಪ್ರದೇಶದ ಮತ್ತು ಹರಿಯಾಣ ಸರ್ಕಾರಗಳ ವಿರುದ್ಧ ಎಎಪಿ ವಾಗ್ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT