ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಮುಖ್ಯ ವಕ್ತಾರರಾಗಿ ಅರವಿಂದ ಸಾವಂತ್ ನೇಮಕ

ಸಂಜಯ್ ರಾವುತ್‌ ಸಹ ಮುಂದುವರಿಕೆ
Last Updated 1 ಏಪ್ರಿಲ್ 2021, 8:23 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಪಕ್ಷವು ತನ್ನ ಲೋಕಸಭಾ ಸದಸ್ಯ ಅರವಿಂದ ಸಾವಂತ್ ಅವರನ್ನು ಪಕ್ಷದ ಮುಖ್ಯ ವಕ್ತಾರರನ್ನಾಗಿ ನೇಮಿಸಿದೆ. ಇದುವರೆಗೆ ಸಂಜಯ್‌ ರಾವುತ್‌ ಅವರು ಮಾತ್ರ ಮುಖ್ಯ ವಕ್ತಾರರಾಗಿದ್ದರು.

ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಂಪುಟದಲ್ಲಿ ಶಿವಸೇನಾ ಪಕ್ಷದ ಏಕೈಕ ಸಚಿವರಾಗಿ ಸಾವಂತ್‌ 2019ರವರೆಗೂ ಕಾರ್ಯ ನಿರ್ವಹಿಸಿದ್ದರು. ಶಿವಸೇನಾವು ಬಿಜೆಪಿಯೊಂದಿಗಿನ ಸಂಬಂಧ ತ್ಯಜಿಸಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿತ್ತು. ಈ ಬೆಳವಣಿಗೆಗಳಿಂದ ಸಾವಂತ್‌ ಅವರು ಕೇಂದ್ರದ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು.

ಪಕ್ಷದ ಮುಖವಾಣಿ ‘ಸಾಮ್ನಾದಲ್ಲಿ’ ಸೇನಾ ತನ್ನ ವಕ್ತಾರರ ಹೊಸ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.
ರಾಜ್ಯಸಭಾ ಸದಸ್ಯ, ಮತ್ತು ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ರಾವುತ್‌ ಅವರನ್ನು ಪಕ್ಷವು ಕಳೆದ ಸೆಪ್ಟೆಂಬರ್‌ನಲ್ಲಿ ಪಕ್ಷದ ಮುಖ್ಯ ವಕ್ತಾರರನ್ನಾಗಿ ನೇಮಿಸಿತ್ತು.

ರಾವುತ್‌ಗೆ ಸೆಡ್ಡು ಹೊಡೆಯುವ ತಂತ್ರ?: ಸಂಜಯ್‌ರಾವುತ್‌ ಅವರು ಇತ್ತೀಚೆಗೆ ನೀಡಿರುವ ಹಲವು ವಿವಾದಾತ್ಮಕ ಹೇಳಿಕೆಗಳಿಗಾಗಿ ಅವರನ್ನು ಮೂಲೆಗುಂಪು ಮಾಡುವ ಸಲುವಾಗಿ ಅರವಿಂದ ಸಾವಂತ್‌ ಅವರನ್ನೂ ಮುಖ್ಯ ವಕ್ತಾರರನ್ನಾಗಿ ನಿಯೋಜಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ರಾವುತ್‌ ಅವರು ಎನ್‌ಸಿಪಿ ನಾಯಕ ಅನಿಲ್‌ ದೇಶಮುಖ್‌ ಅವರನ್ನು ‘ಆಕಸ್ಮಿಕ ಗೃಹ ಸಚಿವ’ ಎಂದು ಕರೆದು ಟೀಕೆಗೆ ಗುರಿಯಾಗಿದ್ದರು. ಇದಕ್ಕೂ ಮುನ್ನ ಅವರು, ‘ಶರದ್‌ ಪವಾರ್‌ ಅವರು ಯುಪಿಎ ನೇತೃತ್ವ ವಹಿಸಿಕೊಳ್ಳಬೇಕು’ ಎಂದು ಹೇಳಿದ್ದರು. ಇದಕ್ಕೆ ಶಿವಸೇನಾದ ಮಿತ್ರ ಪಕ್ಷವಾದ ಕಾಂಗ್ರೆಸ್‌ನ ನಾಯಕರಿಂದ ಟೀಕೆ ವ್ಯಕ್ತವಾಗಿತ್ತು. ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು, ‘ರಾವುತ್‌ ಅವರು ಶರದ್‌ ಪವಾರ್‌ ಅವರ ವಕ್ತಾರರಾಗಿದ್ದಾರಾ’ ಎಂದು ಪ್ರಶ್ನಿಸಿದ್ದರು.

ಇದರ ಬೆನ್ನಲ್ಲೇ, ಮಹಾರಾಷ್ಟ್ರದ ಕಂದಾಯ ಸಚಿವ ಮತ್ತು ಶಿವಸೇನಾದ ಹಿರಿಯ ನಾಯಕ ಬಾಳಾಸಾಹೇಬ್‌ ಥೋರಟ್‌ ಅವರು, ರಾವುತ್‌ ಅವರು ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕು ಎಂದೂ ಎಚ್ಚರಿಸಿದ್ದರು.

ಅದಾಗ್ಯೂ, ಶಿವಸೇನಾವು ರಾಜ್ಯ ಸಚಿವ ಗುಲಾಬ್ರಾವ್ ಪಾಟೀಲ್ ಮತ್ತು ಲೋಕಸಭಾ ಸದಸ್ಯ ಧೀರಶೀಲ್ ಮಾನೆ ಅವರನ್ನು ಪಕ್ಷದ ವಕ್ತಾರರ ಸ್ಥಾನದಿಂದ ಕೈಬಿಟ್ಟಿದೆ.

ಉಳಿದಂತೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್, ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್, ರಾಜ್ಯಸಭಾ ಸದಸ್ಯ ಪ್ರಿಯಾಂಕಾ ಚತುರ್ವೇದಿ, ಶಾಸಕರಾದ ಸುನಿಲ್ ಪ್ರಭು, ಪ್ರತಾಪ್ ಸರ್‌ನಾಯಕ್‌, ಭಾಸ್ಕರ್ ಜಾಧವ್, ಅಂಬಾದಾಸ್ ದನ್ವೆ ಮತ್ತು ಮನೀಶಾ ಕಯಾಂಡೆ ಮತ್ತಿತರರನ್ನು ಪಕ್ಷದ ವಕ್ತಾರರ ಸ್ಥಾನದಲ್ಲಿ ಮುಂದುವರಿಸಿರುವುದಾಗಿ ಪಕ್ಷ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT