ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಹ್ತಾ, ಅರವಿಂದ್ ಸುಬ್ರಮಣಿಯನ್‌ ರಾಜೀನಾಮೆ ಪ್ರಕರಣ: ವಿಷಾದಿಸಿದ ಅಶೋಕ ವಿವಿ

Last Updated 21 ಮಾರ್ಚ್ 2021, 7:17 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ವಿಶ್ಲೇಷಕ ಪ್ರತಾಪ್‌ ಭಾನು ಮೆಹ್ತಾ ಮತ್ತು ಆರ್ಥಿಕ ತಜ್ಞ ಅರವಿಂದ್ ಸುಬ್ರಮಣಿಯನ್‌ ಅವರು ಪ್ರಾಧ್ಯಾಪಕ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಅಶೋಕ ವಿಶ್ವವಿದ್ಯಾಲಯ, ‘ಸಾಂಸ್ಥಿಕ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ’ ಎಂದು ಒಪ್ಪಿಕೊಂಡಿದೆ.

‘ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರಮುಖರ ಜತೆ ಚರ್ಚಿಸಿ ಲೋಪಗಳನ್ನು ಸರಿಪಡಿಸಿಕೊಳ್ಳಲಾಗುವುದು. ಈ ಮೂಲಕ ಶೈಕ್ಷಣಿಕ‌ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ. ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಅಶೋಕ ವಿಶ್ವವಿದ್ಯಾಲಯದ ಸಿದ್ಧಾಂತದ ಭಾಗವಾಗಿವೆ’ ಎಂದು ಭಾನುವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಮೆಹ್ತಾ ಅವರು ಮೊದಲು ಕುಲಪತಿಯಾಗಿ ಹಾಗೂ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ವಿಶ್ವವಿದ್ಯಾಲಯದ ಪ್ರಗತಿಗೆ ಮಾರ್ಗದರ್ಶನ ಮಾಡಿದ್ದಾರೆ. ಅದೇ ರೀತಿ, ಸುಬ್ರಮಣಿಯನ್‌ ಅವರು ವಿಶ್ವವಿದ್ಯಾಲಯದಲ್ಲಿ ಹೊಸ ಕಲ್ಪನೆಗಳನ್ನು ಬಿತ್ತಿ ಶಕ್ತಿ ತುಂಬಿದ್ದಾರೆ. ಜತೆಗೆ ವಿಶ್ವವಿದ್ಯಾಲಯ ತನ್ನ ಹಿರಿಮೆ ಸಾಧಿಸಿ, ಸ್ಥಾನಮಾನ ಹೆಚ್ಚಿಸಿಕೊಳ್ಳಲು ಕಾರಣರಾಗಿದ್ದಾರೆ’ ಎಂದು ತಿಳಿಸಿದೆ.

ವಿಶ್ವವಿದ್ಯಾಲಯದ ಕುಲಾಧಿಪತಿ, ಕುಲಪತಿ ಮತ್ತು ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರು ಜಂಟಿಯಾಗಿ ಈ ಹೇಳಿಕೆ ನೀಡಿದ್ದಾರೆ.

‘ಅಶೋಕ ವಿಶ್ವವಿದ್ಯಾಲಯವನ್ನು ತೊರೆದಿರುವ ಬಗ್ಗೆ ಪ್ರತಾಪ್‌ ಮತ್ತು ಅರವಿಂದ್‌ ಅವರಿಗೆ ದುಃಖವಾಗಿದೆ. ದೇಶದ ಉನ್ನತ ಶಿಕ್ಷಣದಲ್ಲಿ ಮಹತ್ವದ ಯೋಜನೆಯಾಗಿರುವ ಅಶೋಕ ವಿಶ್ವವಿದ್ಯಾಲಯ ಉದಾರ ದೂರದೃಷ್ಟಿ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆ ಹೊಂದಿರಬೇಕು ಎಂದು ಅವರು ಪ್ರತಿಪಾದಿಸಿದ್ದರು. ಈ ಇಬ್ಬರೂ ವಿಶ್ವವಿದ್ಯಾಲಯದ ಹಿತೈಷಿಯಾಗಿ ತಮ್ಮ ಜೀವನದುದ್ದಕ್ಕೂ ಇರುತ್ತಾರೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ತರಗತಿಗೆ ಬಹಿಷ್ಕಾರ

ಸೋಮವಾರದಿಂದ ಎರಡು ದಿನಗಳ ಕಾಲ ತರಗತಿಗಳಿಗೆ ಬಹಿಷ್ಕಾರ ಹಾಕುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಆದರೆ, ಈ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮೆಹ್ತಾ ಅವರು ವಿದ್ಯಾರ್ಥಿಗಳಿಗೆ ಕೋರಿದ್ದಾರೆ.

ವಿದ್ಯಾರ್ಥಿಗಳಿಗೆ ಪತ್ರ ಬರೆದಿರುವ ಮೆಹ್ತಾ, ‘ವಿಶ್ವವಿದ್ಯಾಲಯಕ್ಕೆ ಮತ್ತೆ ಮರಳುವಂತೆ ಒತ್ತಾಯಿಸಬಾರದು. ರಾಜೀನಾಮೆ ನೀಡಲು ಉಂಟಾದ ಸಂದರ್ಭಗಳು ಭವಿಷ್ಯದಲ್ಲಿಯೂ ಬದಲಾಗುವುದಿಲ್ಲ. ಹೀಗಾಗಿ, ಒತ್ತಡ ಹೇರಬಾರದು. ಇಬ್ಬರೂ ಪ್ರಾಧ್ಯಾಪಕರಿಗಿಂತ ನಿಮ್ಮ ಗುರಿ ದೊಡ್ಡದು’ ಎಂದು ಎಂದು ಹೇಳಿದ್ದಾರೆ.

‘ನೀವು ವಿಶ್ವವಿದ್ಯಾಲಯದ ಹೃದಯ ಮತ್ತು ಆತ್ಮ. ಈ ಎರಡಕ್ಕೂ ಯಾರಿಂದಲೂ ಹಾನಿ ಮಾಡಲು ಸಾಧ್ಯವಿಲ್ಲ’ ಎಂದು ವಿದ್ಯಾರ್ಥಿಗಳಿಗೆ ನೀಡಿರುವ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಜಕೀಯ ವಿಶ್ಲೇಷಕರೂ ಆಗಿರುವ ಮೆಹ್ತಾ ಅವರು ಎರಡು ವರ್ಷಗಳ ಹಿಂದೆ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ, ಪ್ರಾಧ್ಯಾಪಕ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಮೆಹ್ತಾ ಅವರಿಗೆ ಬೆಂಬಲ ಸೂಚಿಸಿ ನರೇಂದ್ರ ಮೋದಿ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಸಹ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT