ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಚುನಾವಣೆ: ಹಲವು ಪಕ್ಷಗಳು ಒಟ್ಟಾಗಲು ಸಿಎಎ ಚರ್ಚೆ ಮುನ್ನೆಲೆಗೆ

2 ಹೊಸ ಪಕ್ಷ ಹುಟ್ಟಲು ಕಾರಣವಾದ ಪೌರತ್ವ ತಿದ್ದುಪಡಿ ಕಾಯ್ದೆ
Last Updated 12 ಮಾರ್ಚ್ 2021, 21:23 IST
ಅಕ್ಷರ ಗಾತ್ರ

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೇಕೇ ಅಥವಾ ಬೇಡವೇ? ಇದು ಅಸ್ಸಾಂ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಮುನ್ನೆಲೆಗೆ ಬಂದಿರುವ ವಿಚಾರ. ವಿವಾದಾತ್ಮಕವಾದ ಈ ಕಾಯ್ದೆಯ ದುಷ್ಪರಿಣಾಮಗಳು ಮತ್ತು ‘2016ರಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ’ ಎಂಬುದನ್ನು ಜನರಿಗೆ ಮನದಟ್ಟು ಮಾಡಲು ಬಿಜೆಪಿಯೇತರ ಪಕ್ಷಗಳು ಯತ್ನಿಸುತ್ತಿವೆ.

ಅಸ್ಸಾಂನಲ್ಲಿ ಸಿಎಎ ವಿರುದ್ಧ 2019ರ ಡಿಸೆಂಬರ್‌ನಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಸಿಎಎ ವಿರುದ್ಧದ ಪ್ರತಿಭಟನೆಯೇ ಕಾಂಗ್ರೆಸ್‌ ಮತ್ತು ಬದ್ರುದ್ದೀನ್‌ ಅಜ್ಮಲ್‌ ಅವರ ಎಐಯುಡಿಎಫ್‌ ಹತ್ತಿರವಾಗಲು ಕಾರಣ. 2005ರಿಂದಲೂ ಈ ಎರಡು ಪಕ್ಷಗಳು ಪ್ರತಿಸ್ಪರ್ಧಿಯಾಗಿದ್ದವು. ಈಗ, ಕಾಂಗ್ರೆಸ್‌ ನೇತೃತ್ವದ ಏಳು ಪಕ್ಷಗಳ ಮೈತ್ರಿಕೂಟದಲ್ಲಿ ಎಐಯುಡಿಎಫ್‌ ಕೂಡ ಇದೆ.

ಸಿಎಎ ವಿರುದ್ಧದ ಪ್ರತಿಭಟನೆಯಿಂದಾಗಿ ಎರಡು ಹೊಸ ಪಕ್ಷಗಳು ಹುಟ್ಟಿಕೊಂಡಿವೆ. ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿ ಲುರಿನ್‌ಜ್ಯೋತಿ ಗೊಗೊಯಿ ಅವರ ನೇತೃತ್ವದ ಅಸ್ಸಾಂ ಜಾತೀಯ ಪರಿಷತ್‌ (ಎಜೆಪಿ) ಮತ್ತು ಸಿಎಎ ವಿರೋಧಿ ಹೋರಾಟಗಾರ ಅಖಿಲ್‌ ಗೊಗೊಯಿ ನೇತೃತ್ವದ ರಾಯ್‌ಜೊರ್‌ ದಳ ಸ್ಥಾಪನೆಯಾಗಿವೆ. ಅಖಿಲ್‌ ಅವರನ್ನು ಪ್ರತಿಭಟನೆ ಸಂದರ್ಭದಲ್ಲಿ ಬಂಧಿಸಲಾಗಿದೆ. ಅವರು ಈಗಲೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾರೆ. ಸಿಎಎ ವಿರೋಧಿ ನಿಲುವೇ ಈ ಎರಡು ಪಕ್ಷಗಳ ಮೈತ್ರಿಗೆ ಕಾರಣವಾಗಿದೆ.

ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಕ್ಕೆ ಸೇರಲು ಈ ಪಕ್ಷಗಳು ನಿರಾಕರಿಸಿವೆ. ಆದರೆ, ಬಿಜೆಪಿ ವಿರುದ್ಧ ಸಿಎಎ ಅನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಅಸ್ಸಾಮಿ ಅಸ್ಮಿತೆಯ ಬಗೆಗಿನ ಹೆಮ್ಮೆ ಬಲವಾಗಿರುವ ಪೂರ್ವ ಮತ್ತು ಉತ್ತರ ಅಸ್ಸಾಂನ 88 ಕ್ಷೇತ್ರಗಳಲ್ಲಿ ಈ ಪಕ್ಷಗಳು ಸ್ಪರ್ಧಿಸುತ್ತಿವೆ. ಅಸ್ಸಾಂನಲ್ಲಿ ಒಟ್ಟು 126 ಕ್ಷೇತ್ರಗಳಿವೆ. ಮಾರ್ಚ್‌ 27, ಏಪ್ರಿಲ್‌ 1 ಮತ್ತು ಏಪ್ರಿಲ್‌ 6ರಂದು ಮೂರು ಹಂತದ ಮತದಾನ ನಡೆಯಲಿದೆ.

ಸಿಎಎ ಜಾರಿಯಿಂದಾಗಿ ಸ್ಥಳೀಯರು ಅಲ್ಪಸಂಖ್ಯಾತರಾಗುವ ಸಾಧ್ಯತೆ ಇದೆ ಎಂಬುದು ಸಿಎಎ ವಿರೋಧಿಗಳ ವಾದ. ನೆರೆಯ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಿಂದ 2014ರವರೆಗೆ ವಲಸೆ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡುವ ಅವಕಾಶ ಸಿಎಎಯಲ್ಲಿ ಇದೆ. ಹೀಗೆ ಬಂದ ಭಾರಿ ಸಂಖ್ಯೆಯ ಜನರು ಅಸ್ಸಾಂನಲ್ಲಿ ಇದ್ದಾರೆ.

‘ಏನೇ ಆಗಲಿ, ನಾವು ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೆ ಅವಕಾಶವನ್ನೇ ಕೊಡುವುದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅಸ್ಸಾಂನಲ್ಲಿ ಹಲವು ಬಾರಿ ಹೇಳಿದ್ದಾರೆ.

ಬಿಜೆಪಿಯ ಅಭಿವೃದ್ಧಿ ಮಂತ್ರ
ಸಿಎಎಯಿಂದಾದ ಹಾನಿ ಸರಿಪಡಿಸಿಕೊಳ್ಳುವ ಯತ್ನದಲ್ಲಿ ಬಿಜೆಪಿ ಇದೆ. ಸಿಎಎ ಚುನಾವಣಾ ವಿಷಯವೇ ಅಲ್ಲ ಎಂಬುದು ಆ ಪ‍ಕ್ಷದ ಪ್ರತಿಪಾದನೆ. 2016ರಿಂದ ಬಿಜೆಪಿ ಸರ್ಕಾರ ಜಾರಿ ಮಾಡಿದ ಅಭಿವೃದ್ಧಿ ಕೆಲಸಗಳಿಂದಾಗಿ ಜನರು ಮತ ಹಾಕುತ್ತಾರೆ ಎಂಬುದು ಆ ಪ‍ಕ್ಷದ ವಿಶ್ವಾಸ.

3.65 ಲಕ್ಷ ಸ್ಥಳೀಯರಿಗೆ ಪಟ್ಟಾ ನೀಡಲಾಗಿದೆ, ಕಾಜಿರಂಗ ರಾಷ್ಟ್ರೀಯ ಉದ್ಯಾನದ ಒತ್ತುವರಿ ತೆರವು ಮಾಡಲಾಗಿದೆ ಎಂದು ಸ್ಥಳೀಯ ಜನರಿಗಾಗಿ ಮಾಡಿದ ಕೆಲಸವನ್ನು ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಮುಂದಿಡುತ್ತಿದ್ದಾರೆ. ‘ಅಸ್ಸಾಂನ ಜನರ ಅನನ್ಯತೆ, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಲು ನಾವು ಬದ್ಧ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ಕೊಟ್ಟಿದ್ದಾರೆ.

ಬಂಗಾಳಿ ಭಾಷೆಯ ಪ್ರಾಬಲ್ಯ ಇರುವ ಬರಕ್‌ ಕಣಿವೆ ಮತ್ತು ಬೋಡೊಲ್ಯಾಂಡ್‌ ಪ್ರದೇಶವನ್ನು ಹೊರತುಪಡಿಸಿ ಇಡೀ ರಾಜ್ಯದಲ್ಲಿ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳು ಅಸ್ಸಾಮಿ ಭಾಷೆ ಕಲಿಯುವುದನ್ನು ಸರ್ಕಾರವು ಕಡ್ಡಾಯ ಮಾಡಿದೆ. ಮೂರು ಸ್ವಾಯತ್ತ ಸಮಿತಿಗಳ ಪ್ರದೇಶವನ್ನು ಸಿಎಎಯಿಂದ ಹೊರಗೆ ಇರಿಸಲಾಗಿದೆ. ಚಹಾ ತೋಟದ ಕಾರ್ಮಿಕರು ಸೇರಿ 22 ಲಕ್ಷ ಬಡ ಜನರಿಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ನೀಡಲಾಗಿದೆ. ಇವೆಲ್ಲವೂ ಚುನಾವಣೆಯಲ್ಲಿ ನೆರವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT