ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: 32 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ; ಮತ್ತೆ 11 ಸಾವು, 7 ಮಂದಿ ನಾಪತ್ತೆ

Last Updated 21 ಜೂನ್ 2022, 11:09 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನಲ್ಲಿ ಭಾರಿ ಪ್ರವಾಹದಿಂದ ಇನ್ನೂ 11 ಮಂದಿ ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ಮೃತರ ಸಂಖ್ಯೆ 82ಕ್ಕೆ ಏರಿದೆ. ಒಟ್ಟಾರೆ 47 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.

ಈಶಾನ್ಯ ರಾಜ್ಯವಾದ ಅಸ್ಸಾಂನ 36 ಜಿಲ್ಲೆಗಳ ಪೈಕಿ 32ರಲ್ಲಿ ಕಳೆದೊಂದು ವಾರದಿಂದ ಪ್ರವಾಹ ಸ್ಥಿತಿ ಇದೆ. ಮಂಗಳವಾರಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿಗೆ ಕರೆ ಮಾಡಿ ಪರಿಸ್ಥಿತಿಯ ವಿವರವನ್ನು ಪಡೆದಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರು ಕೊಚ್ಚಿಹೋಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿಹರಿದಿದ್ದು ರಾಜ್ಯದ ಒಟ್ಟು 5,424 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. ಸಂತ್ರಸ್ತರಿಗಾಗಿ ವಿವಿಧೆಡೆ 810 ಪರಿಹಾರ ಶಿಬಿರ ಸ್ಥಾಪಿಸಿದ್ದು, ಸುಮಾರು 2.31 ಲಕ್ಷ ಜನರು ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೇಂದ್ರ ಗೃಹ ಸಚಿವರು ಎರಡು ಬಾರಿ ಕರೆ ಮಾಡಿದ್ದರು. ಶೀಘ್ರವೇ ನಷ್ಟ ಅಂದಾಜು ಮಾಡಲು ಕೇಂದ್ರ ತಂಡ ಕಳುಹಿಸುವ ಭರವಸೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದಾರೆ. ಶನಿವಾರ ಪ್ರಧಾನಿಯೂ ಕರೆ ಮಾಡಿ ಮಾತನಾಡಿದ್ದರು.

‘ಬಾಧಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಚುರುಕುಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಬಾಧಿತ ಪ್ರದೇಶಗಳಿಗೆ ಪರಿಹಾರ ಮತ್ತು ವೈದ್ಯಕೀಯ ಪರಿಕರ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಈಶಾನ್ಯ ರೈಲ್ವೆ ತಿಳಿಸಿದೆ.

ಧಾರಾಕಾರ ಮಳೆಯಿಂದಾಗಿ ಕೊಪಿಲಿ, ಬ್ರಹ್ಮಪುತ್ರ, ಪುಥಿಮರಿ, ಪಾಗ್ಲಡಿಯ, ಬೆಕಿ ಬರಾಕ್‌, ಕುಶಿಯಾರ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ವಿವಿಧ ಜಿಲ್ಲೆಗಳ ನಗರ ಪ್ರದೇಶಗಳಲ್ಲಿಯೂ ಪ್ರತಿಕೂಲ ಪರಿಣಾಮ ವ್ಯಕ್ತವಾಗಿದೆ.

1,13,485 ಹೆಕ್ಟೇರ್‌ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ. 5,232 ಜಾನುವಾರುಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರ ಕಾರ್ಯಗಳಿಗೆ ದಲೈಲಾಮ ನೆರವು
ಧರ್ಮಶಾಲಾ (ಪಿಟಿಐ): ಟಿಬೆಟ್‌ ಧಾರ್ಮಿಕ ನಾಯಕ ದಲೈಲಾಮ ಅವರು ಪ್ರವಾಹಪೀಡಿತ ಅಸ್ಸಾಂಗೆ ನೆರವು ನೀಡುವ, ಸಂಕಷ್ಟ ಕಾಲದಲ್ಲಿ ರಾಜ್ಯದ ಜನರ ಜೊತೆಗೆ ನಿಲ್ಲುವ ಭರವಸೆಯನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಹಿಮಂತ್‌ ಬಿಸ್ವಶರ್ಮಾ ಅವರಿಗೆ ಪತ್ರ ಬರೆದಿರುವ ಅವರು, ನಿರೀಕ್ಷೆ ಮೀರಿದ ಮಳೆ, ಪ್ರವಾಹದ ಕಾರಣ ಆಗಿರುವ ಅವಘಡಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ‘ಇದು, ದುರದೃಷ್ಟಕರ. ಜನರಿಗೆ ತೀರಾ ಸಂಕಷ್ಟವಾಗಿದೆ. ಆಪ್ತರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪರಿಹಾರ ಕಾರ್ಯಗಳಿಗೆ ದೇಣಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT