ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ರಾಜ್ಯಗಳಲ್ಲಿ ಸೋಲಿನ ಆತ್ಮಾವಲೋಕನ: ನಾಳೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ

Last Updated 12 ಮಾರ್ಚ್ 2022, 13:08 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯವಾದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ಆತ್ಮಾವಲೋಕನ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನು ಭಾನುವಾರ ಸಂಜೆ 4ಕ್ಕೆ ಎಐಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಪಕ್ಷವು ಪಂಜಾಬ್‌ನಲ್ಲಿ 117 ಸ್ಥಾನಗಳ ಪೈಕಿ 18 ಸ್ಥಾನಗಳಲ್ಲಿ ಮಾತ್ರ ಜಯಿಸುವ ಮೂಲಕ ಅಧಿಕಾರ ಕಳೆದುಕೊಂಡಿದ್ದು, ಉತ್ತರಪ್ರದೇಶದ 403ರಲ್ಲಿ ಕೇವಲ 2, ಉತ್ತರಾಖಂಡದ 70ರಲ್ಲಿ 18, ಗೋವಾದ 40ರಲ್ಲಿ 12 ಮತ್ತು ಮಣಿಪುರದಲ್ಲಿ 60 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಾತ್ರ ಗಳಿಸಿದೆ.

ಚುನಾವಣೆಯಲ್ಲಿ ಪಕ್ಷದ ನಿರಾಶಾದಾಯಕ ಪ್ರದರ್ಶನದ ಕುರಿತೇ ಸಭೆಯಲ್ಲಿ ಗಂಭೀರ ಚರ್ಚೆ ನಡೆಸುವ ಸಾಧ್ಯತೆ ಇದೆ.

ಈ ಸಭೆಗೂ ಮೊದಲು ಬೆಳಿಗ್ಗೆ 10ಕ್ಕೆ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಪಕ್ಷದ ಸಂಸದೀಯ ಸಮಿತಿಯ ಸಭೆಯನ್ನೂ ಆಯೋಜಿಸಲಾಗಿದೆ. ಮಾರ್ಚ್‌ 14ರಿಂದ ಆರಂಭ ಆಗಲಿರುವ ಸಂಸತ್‌ನ ಎರಡನೇ ಹಂತದ ಬಜೆಟ್‌ ಅಧಿವೇಶನ ಕುರಿತ ಕಾರ್ಯತಂತ್ರ ರೂಪಿಸುವ ಸಂಬಂಧ ಚರ್ಚೆ ನಡೆಯಲಿದೆ.

ಹಿರಿಯ ಮುಖಂಡರಾದ ಕಪಿಲ್‌ ಸಿಬಲ್‌, ಗುಲಾಂ ನಬಿ ಆಜಾದ್‌, ಮುಕುಲ್ ವಾಸ್ನಿಕ್‌, ಆನಂದ ಶರ್ಮಾ ಸೇರಿದಂತೆ ಸಿಡಬ್ಲ್ಯೂಸಿ ಸದಸ್ಯರೂ ಆಗಿರುವ ಜಿ–23 ನಾಯಕರು, ಶುಕ್ರವಾರ ರಾತ್ರಿ ಗೌಪ್ಯ ಸಭೆ ನಡೆಸಿ ಚುನಾವಣೆಯ ಫಲಿತಾಂಶದ ಕುರಿತು ಚರ್ಚಿಸಿದ್ದು, ಸಿಡಬ್ಲ್ಯೂಸಿ ಸಭೆಯಲ್ಲಿ ಯಾವ ರೀತಿ ಧ್ವನಿ ಎತ್ತಬಹುದು ಎಂಬುದು ಕುತೂಹಲ ಕೆರಳಿಸಿದೆ.

ನಾಯಕತ್ವ ಬದಲಾವಣೆಗೆ ಅಗತ್ಯವಿರುವ ಪಕ್ಷದ ಆಂತರಿಕ ಚುನಾವಣೆಗೂ ಬೇಡಿಕೆ ಇರಿಸುವುದಲ್ಲದೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಕೆಲವು ಮುಖಂಡರ ವಿರುದ್ಧ ಕ್ರಮಕ್ಕೂ ಸಭೆಯಲ್ಲಿ ಆಗ್ರಹಿಸಬಹುದಾಗಿದೆ. ಪಂಜಾಬ್ ಮತ್ತು ಉತ್ತರಾಖಂಡ ಚುನಾವಣೆಯ ವೇಳೆ ಅನುಸರಿಸಲಾದ ಕಾರ್ಯತಂತ್ರಗಳನ್ನೂ ಅವರು ಪ್ರಶ್ನಿಸಬಹುದಾಗಿದೆ. ಈ ರಾಜ್ಯಗಳಲ್ಲಿನ ದಯನೀಯ ಸೋಲಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧವೂ ಈ ಮುಖಂಡರು ಹರಿಹಾಯುವ ಸಾಧ್ಯತೆ ಇದೆ.

ಪಕ್ಷ ಆಡಳಿತದಲ್ಲಿರುವ ರಾಜಸ್ತಾನ ಮತ್ತು ಛತ್ತೀಸ್‌ಗಡದ ಮುಖ್ಯಮಂತ್ರಿಗಳಾದ ಅಶೋಕ್‌ ಗೆಹ್ಲೋಟ್‌ ಹಾಗೂ ಭೂಪೇಶ್‌ ಬಘೇಲ್‌ ಅವರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಅಲ್ಲದೆ, ಸಿಡಬ್ಲ್ಯೂಸಿಯ 20 ಸದಸ್ಯರು, 24 ಕಾಯಂ ಆಹ್ವಾನಿತರು ಮತ್ತು ಒಂಬತ್ತು ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

ಪಕ್ಷದ ಹಿರಿಯ ಮುಖಂಡರು ಜನರೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದು, ಜನ ಸಾಮಾನ್ಯರೊಂದಿಗೆ ಬೆರೆಯುವುದನ್ನು ಒಂದು ರೀತಿಯಲ್ಲಿ ‘ಉಪಕಾರ’ ಎಂದೇ ಭಾವಿಸುತ್ತಿದ್ದಾರೆ. ಹಿರಿಯರ ನಡವಳಿಕೆ, ಪಕ್ಷ ಸಂಘಟನೆ, ಅರ್ಪಣಾ ಮನೋಭಾವದ ಕೊರತೆಯ ಕುರಿತು ಆಂತರಿಕವಾಗಿ ಚರ್ಚೆ ನಡೆಯಬೇಕಿದೆ ಎಂದು ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಪಕ್ಷದ ಯುವ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ಸಾಮೂಹಿಕ ನಾಯಕತ್ವಕ್ಕೆ ಮಹತ್ವ ನೀಡುವ ನಿಟ್ಟಿನಲ್ಲಿ ನಾವು ಬಿಜೆಪಿ ನೋಡಿ ಕಲಿಯಬೇಕಿದೆ. ಆ ಪಕ್ಷದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಹೊಸ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಹೊಸದಾಗಿ ಯಾವುದೇ ನಾಯಕ ಹೊರಹೊಮ್ಮುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT