ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ಕುಲಪತಿ ವಜಾಕ್ಕೆ ಒತ್ತಾಯ

ಹಿಂದೂ ದೇವರ ಬಗ್ಗೆ ಹೇಳಿಕೆ ನೀಡಿರುವ ಆರೋ‍ಪ
Last Updated 24 ಆಗಸ್ಟ್ 2022, 16:12 IST
ಅಕ್ಷರ ಗಾತ್ರ

ಲಖನೌ: ಹಿಂದೂ ದೇವರುಗಳ ಬಗ್ಗೆ ಹೇಳಿಕೆ ನೀಡಿರುವ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ತಕ್ಷಣವೇ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅಯೋಧ್ಯೆಯ ‍ಪ್ರಮುಖ ಸಂತರು ಬುಧವಾರ ಒತ್ತಾಯಿಸಿದ್ದಾರೆ.

‘ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ. ಶಿವ ಸಹ ಪರಿಶಿಷ್ಟ ಜಾತಿ ಅಥವಾ ‍ಪಂಗಡದವನಾಗಿರಬಹುದು’ ಎಂದು ಕುಲಪತಿ ಹೇಳಿಕೆ ನೀಡಿದ್ದರು.

‘ಪಂಡಿತ್ ಅವರ ಹೇಳಿಕೆಯು ವಿಶ್ವದಾದ್ಯಂತ ಲಕ್ಷಾಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ. ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು. ಅವರನ್ನು ಜೈಲಿಗೆ ಕಳುಹಿಸಬೇಕು.ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೂಡಲೇ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತೇವೆ. ಅವರ ವಿರುದ್ಧ ದೇಶದ ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವಂತೆ ಹಿಂದೂ ಸಂಘಟನೆಗಳಿಗೆ ಮನವಿ ಮಾಡಲಾಗುವುದು’ ಎಂದು ಅಯೋಧ್ಯೆಯ ಪ್ರಸಿದ್ಧ ಹನುಮಂಗರಹಿ ದೇವಸ್ಥಾನದ ಮಹಂತ್ ರಾಜು ದಾಸ್ ಹೇಳಿದ್ದಾರೆ.

ತಪಸ್ವಿ ಚಾವಣಿಯ ಸಂತ ಪರಮಹಂಸಾಚಾರ್ಯ ಮಾತನಾಡಿ, ‘ಜಾತಿ ಆಧಾರದ ಮೇಲೆ ದೇವರುಗಳನ್ನು ವಿಭಜಿಸಲು ಸಾಧ್ಯವಿಲ್ಲ. ದೇವರಿಗೆ ಜಾತಿಯಿಲ್ಲ. ಎಲ್ಲರಿಗೂ ಸೇರಿದವರು. ಸನಾತನ ಧರ್ಮದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ತೋರುತ್ತದೆ. ಅವರು (ಶಾಂತಿಶ್ರೀ) ವೇದಗಳನ್ನು ಓದಬೇಕು’ ಎಂದು ಸಲಹೆ ನೀಡಿದರು.

ಕುಲಪತಿಯನ್ನು ಹುದ್ದೆಯಿಂದ ತೆಗೆದು ಹಾಕದಿದ್ದರೆ ಹಾಗೂ ಅವರ ಹೇಳಿಕೆ ಬಗ್ಗೆ ಕಾನೂನು ಕ್ರಮ ಜರುಗಿಸದಿದ್ದರೆ ರಾಷ್ಟ್ರವ್ಯಾಪಿ ಆಂದೋಲನ ನಡೆಸುವುದಾಗಿ ಬೆದರಿಕೆ ಹಾಕಿರುವ ಸಂತರು, ‘ನಮ್ಮ ದೇವರಿಗೆ ಅವಮಾನ ಮತ್ತು ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ’ ಎಂದು ಅವರು ಟೀಕಿಸಿದರು.

ನವದೆಹಲಿ ವರದಿ: ‘ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ’ ಎಂಬ ಹೇಳಿಕೆ ವಿವಾದವಾಗುತ್ತಿದ್ದಂತೆಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ತಮ್ಮ ಹೇಳಿಕೆಯು ಶೈಕ್ಷಣಿಕ ಭಾಗವಾಗಿದ್ದು, ನನ್ನ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಲಿಂಗ ನ್ಯಾಯದ ಬಗ್ಗೆ ಬಿ.ಆರ್. ಅಂಬೇಡ್ಕರ್ ಅವರ ಅಭಿಪ್ರಾಯಗಳ ಬಗ್ಗೆ ಮಾತನಾಡಲು ನನ್ನನ್ನು ಹೇಳಲಾಯಿತು. ಅಂಬೇಡ್ಕರ್ ಅವರ ಬಗ್ಗೆ ಹೇಳುತ್ತಿದ್ದೆ. ಅವರ ಬರಹಗಳನ್ನು ನೀವು ನೋಡಬಹುದು. ಜನರು ನನ್ನ ಮೇಲೆ ಏಕೆ ಕೋಪಗೊಳ್ಳಬೇಕು? ಅಂಬೇಡ್ಕರ್‌ ಬಗ್ಗೆ ಕೋಪಗೊಳ್ಳಬೇಕು. ನನ್ನನ್ನು ಏಕೆ ಎಳೆಯಲಾಗುತ್ತಿದೆ?’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT