ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ ತಲುಪಿದ ‘ಆಜಾನ್’ ವಿವಾದ: ಧ್ವನಿವರ್ಧಕಗಳಲ್ಲಿ ಭಜನೆ, ವೇದಮಂತ್ರ ಪಠಣ?

ಪ್ರಧಾನಿ ಲೋಕಸಭಾ ಕ್ಷೇತ್ರ
Last Updated 14 ಏಪ್ರಿಲ್ 2022, 13:08 IST
ಅಕ್ಷರ ಗಾತ್ರ

ಲಖನೌ: ‘ಆಜಾನ್’ (ಮಸೀದಿಗಳಿಂದ ಧ್ವನಿವರ್ಧಕದ ಮೂಲಕ ಪ್ರಾರ್ಥನೆಗೆ ಕರೆ) ನಿಷೇಧಿಸುವಂತೆ ಒತ್ತಾಯಿಸುತ್ತಿರುವ ಕೆಲ ಹಿಂದೂ ಸಂಘಟನೆಗಳು, ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಹಲವು ಮನೆಗಳ ಮೇಲೆ ಧ್ವನಿವರ್ಧಕದ ಮೂಲಕ ಭಜನೆ ಮತ್ತು ವೇದಮಂತ್ರಗಳ ಪಠಣಕ್ಕೆ ಸಿದ್ಧತೆ ಆರಂಭಿಸಿವೆ.

ಶ್ರೀಕಾಶಿ ವಿಶ್ವನಾಥ ಜ್ಞಾನವಾಪಿ ಆಂದೋಲನದ ಅಧ್ಯಕ್ಷ ಮತ್ತು ಬಿಜೆಪಿ ಸದಸ್ಯ ಸುಧೀರ್ ಸಿಂಗ್ ಗುರುವಾರ ಮಾತನಾಡಿ, ‘ನಗರದ ಪ್ರಮುಖ ದೇವಾಲಯಗಳಲ್ಲಿ ಶೀಘ್ರದಲ್ಲೇ ಧ್ವನಿವರ್ಧಕಗಳನ್ನು ಅಳವಡಿಸಲಾಗುವುದು, ಅದರ ಮೂಲಕ ‘ಹನುಮಾನ್ ಚಾಲೀಸಾ’, ಭಜನೆ ಮತ್ತು ವೇದಮಂತ್ರಗಳನ್ನು ಪಠಿಸಲಾಗುವುದು. ‘ಆಜಾನ್’ ಅನ್ನು ದಿನಕ್ಕೆ ಐದು ಬಾರಿ ಪಠಿಸಲಾಗುತ್ತಿದೆ. ಅಂತೆಯೇ, ನಾವೂ ದಿನಕ್ಕೆ ಐದು ಬಾರಿ ಭಜನೆ, ವೇದಮಂತ್ರಗಳನ್ನು ಧ್ವನಿವರ್ಧಕದ ಮೂಲಕ ಪಠಿಸುತ್ತೇವೆ’ ಎಂದು ಹೇಳಿದ್ದಾರೆ.

‘ಭಜನೆ ಮತ್ತು ವೇದಮಂತ್ರಗಳನ್ನು ಪಠಿಸುವುದು ವಾರಾಣಸಿಯಲ್ಲಿ ಪುರಾತನ ಸಂಪ್ರದಾಯವಾಗಿತ್ತು. ಆದರೆ, ಬಿಜೆಪಿಯೇತರ ಸರ್ಕಾರಗಳ ಅವಧಿಯಲ್ಲಿ ಇದಕ್ಕೆ ಒತ್ತಡ ಹಾಕಿ ನಿಲ್ಲಿಸಲಾಗಿತ್ತು. ಆದರೆ, ನಾವೀಗ ಪುರಾತನ ಸಂಪ್ರದಾಯವನ್ನು ಪುನರಾರಂಭಿಸಲು ಬಯಸುತ್ತೇವೆ’ ಎಂದು ಸಿಂಗ್ ಹೇಳಿದ್ದಾರೆ.

‘ವಾರಾಣಸಿಯ ಎಲ್ಲಾ ಹಿಂದೂ ನಿವಾಸಿಗಳಿಗೆ ತಮ್ಮ ಮನೆಗಳ ಮೇಲೆ ಧ್ವನಿವರ್ಧಕಗಳನ್ನು ಅಳವಡಿಸಿ, ದಿನಕ್ಕೆ ಐದು ಬಾರಿ ಭಜನೆ, ಮಂತ್ರ ಪಠಣ ಮಾಡಲು ಹೇಳಿದ್ದೇವೆ. ಆದರೆ, ಈ ಕ್ರಮವು ನಗರದಲ್ಲಿ ಕೋಮುಸೌಹಾರ್ದ ಕದಡುವ ಉದ್ದೇಶವನ್ನು ಒಳಗೊಂಡಿಲ್ಲ’ ಎಂದೂ ಅವರು ಸ್ಪಷ್ಪಪಡಿಸಿದ್ದಾರೆ.

ಈ ನಡುವೆ ರಾಷ್ಟ್ರೀಯ ಹಿಂದೂ ದಳದ ಅಧ್ಯಕ್ಷ ರೋಷನ್ ಪಾಂಡೆ, ‘ಮಸೀದಿಗಳಿಂದ ಧ್ವನಿವರ್ಧಕಗಳ ಮೂಲಕ ‘ಆಜಾನ್’ ಪಠಿಸಬಹುದಾದರೆ, ನಾವು ದೇವಾಲಯಗಳಿಂದ ಧ್ವನಿವರ್ಧಕಗಳ ಮೂಲಕ ಏಕೆ ಭಜನೆಗಳನ್ನು ಹೇಳಬಾರದು’ ಎಂದು ಪ್ರಶ್ನಿಸಿದ್ದಾರೆ.

ಆದಾಗ್ಯೂ, ಕೆಲವು ಹಿಂದೂ ದಾರ್ಶನಿಕರು ಧ್ವನಿವರ್ಧಕಗಳ ಮೂಲಕ ಭಜನೆಗಳನ್ನು ಪಠಿಸುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಹಿಂದೂ ಧರ್ಮವು ಪ್ರತಿಗಾಮಿ ಧರ್ಮವಲ್ಲ. ಪೂಜೆಗೆ ಕೆಲವು ಸ್ಥಾಪಿತ ಸಂಪ್ರದಾಯಗಳಿವೆ. ಮೂರು ಬಾರಿ ಅಥವಾ ಐದು ಬಾರಿ ಭಜನೆ ಮಾಡುವಂತಹ ಯಾವುದೇ ನಿಬಂಧನೆ ಇಲ್ಲ. ಈ ಕ್ರಮವು ರಾಜಕೀಯ ಪ್ರೇರಿತವಾಗಿದೆ’ ಎಂದು ವಾರಾಣಸಿಯ ಪ್ರಮುಖ ದಾರ್ಶನಿಕರೊಬ್ಬರು ಹೇಳಿದ್ದಾರೆ.

ಮಹಾರಾಷ್ಟ್ರದ ಮಸೀದಿಗಳಿಂದ ರಾಜ್ಯ ಸರ್ಕಾರವು ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ತಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಡೆಸಿಬಲ್ ಮಟ್ಟದಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಲು ಪ್ರಾರಂಭಿಸುವರು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT