ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ| ನಗರ ಸಂಚಾರ, ದಾರಿ ಸಾಗದು, ಮುಂದೆ ಹೋಗದು

ನಗರಗಳಲ್ಲಿ ಸಂಚಾರ: ಚಲಿಸಿದ್ದು ಕಡಿಮೆ, ನಿಂತಿದ್ದೇ ಹೆಚ್ಚು
Last Updated 16 ಫೆಬ್ರುವರಿ 2023, 20:30 IST
ಅಕ್ಷರ ಗಾತ್ರ

ಬೆಂಗಳೂರು ನಗರದಲ್ಲಿ ಬೆಳಿಗ್ಗಿನ ಹೊತ್ತು 10 ಕಿ.ಮೀ. ಕ್ರಮಿಸಲು ಸರಾಸರಿ 29 ನಿಮಿಷ, 10 ಸೆಕೆಂಡ್ ಬೇಕಾಗುತ್ತದೆ. ಜಗತ್ತಿನಲ್ಲಿ ಅತ್ಯಂತ ನಿಧಾನಗತಿಯ ಸಂಚಾರ ಸಾಧ್ಯತೆಯ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೆ, ಲಂಡನ್‌ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಜನ ತಾವು ಹೊರಟಲ್ಲಿಂದ, ತಲುಪುವ ಸ್ಥಳದ ನಡುವಣ ಪ್ರಯಾಣದಲ್ಲಿ ಅರ್ಧಕ್ಕೂ ಹೆಚ್ಚು ಸಮಯವನ್ನು ಸಂಚಾರ ಸಿಗ್ನಲ್‌ಗಳಲ್ಲಿ ಮತ್ತು ಸಂಚಾರ ದಟ್ಟಣೆಯಲ್ಲಿ ಕಳೆಯುತ್ತಾರೆ ಎನ್ನುತ್ತದೆ ಸಂಚಾರ ಮೇಲ್ವಿಚಾರಣಾ ಮತ್ತು ಜಿಪಿಎಸ್‌ ಟ್ರ್ಯಾಕಿಂಗ್‌ ಸೇವಾ ಸಂಸ್ಥೆ ಟಾಮ್‌ಟಾಮ್‌. ಈ ಸಂಸ್ಥೆ ಈಚೆಗೆ ಬಿಡುಗಡೆ ಮಾಡಿರುವ ‘ಜಾಗತಿಕ ಸಂಚಾರ ಸೂಚ್ಯಂಕ’ದಲ್ಲಿ ಈ ಮಾಹಿತಿ ಇದೆ.

ಉಬರ್ ಸೇರಿ ಜಗತ್ತಿನ ಅತ್ಯಂತ ದೊಡ್ಡ ಹಲವು ಟ್ಯಾಕ್ಸಿ ಸೇವಾ ಸಂಸ್ಥೆಗಳಿಗೆ, ಟ್ರಕ್‌ ಸೇವಾ ಸಂಸ್ಥೆಗಳಿಗೆ ವಾಹನ ಪಥನಿರ್ದೇಶಕ ಮತ್ತು ನಿರ್ವಹಣಾ ಸೇವೆ ಒದಗಿಸುವ ಟಾಮ್‌ ಟಾಮ್‌ ಒಂದು ವರ್ಷದ ಸಂಚಾರ ದತ್ತಾಂಶಗಳನ್ನು ವಿಶ್ಲೇಷಿಸಿ ಈ ಸೂಚ್ಯಂಕ ಸಿದ್ಧಪಡಿಸಿದೆ. ಬೆಂಗಳೂರಿನ ಸಂಚಾರ ಸ್ಥಿತಿಗತಿಯನ್ನು ವಿಶ್ಲೇಷಿಸಲು 2022ರ ಜನವರಿ 1ರಿಂದ, ಡಿಸೆಂಬರ್ 31ರವರೆಗಿನ ದತ್ತಾಂಶವನ್ನು ಪರಿಶೀಲಿಸಲಾಗಿದೆ. ಈ ಅವಧಿಯಲ್ಲಿ ಬೆಂಗಳೂರಿನ ಜನರು ನಗರ ಕೇಂದ್ರ ಭಾಗದ ಐದು ಕಿ.ಮೀ. ಪರಿಧಿಯಲ್ಲಿ ಒಟ್ಟು 59,200 ಕೋಟಿ ಕಿ.ಮೀ.ಗಳಷ್ಟು ಪ್ರಯಾಣಿಸಿದ್ದಾರೆ. ಈ ದತ್ತಾಂಶದ ಆಧಾರದಲ್ಲಿ ಸೂಚ್ಯಂಕ ಸಿದ್ಧಪಡಿಸಲಾಗಿದೆ ಎಂದು ಟಾಮ್‌ಟಾಮ್‌ ತನ್ನ ವರದಿಯಲ್ಲಿ ಮಾಹಿತಿ ನೀಡಿದೆ.

ಬೆಂಗಳೂರಿನ ಜನರು ನಗರದ ಕೇಂದ್ರ ಭಾಗದಲ್ಲಿ ಸಂಚರಿಸಲು ಹೆಚ್ಚು ಪೆಟ್ರೋಲ್‌/ಡೀಸೆಲ್‌ ವ್ಯಯಿಸಬೇಕಾಗುತ್ತದೆ ಮತ್ತು ಅವರ ವಾಹನಗಳಿಂದ ಹೊರಬರುವ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವೂ ಹೆಚ್ಚು ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ. ನಗರದ ಕೇಂದ್ರ ಭಾಗಕ್ಕೆ ಹೋಲಿಸಿದರೆ, ನಗರದ ಹೊರಭಾಗದಲ್ಲಿ ದಟ್ಟಣೆ ಕಡಿಮೆ. ಹೀಗಾಗಿ ನಗರ ಕೇಂದ್ರಭಾಗದಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯ ಹೆಚ್ಚು. ಜತೆಗೆ ಡೀಸೆಲ್‌ ಎಂಜಿನ್‌ ವಾಹನಗಳಿಗಿಂತ, ಪೆಟ್ರೋಲ್‌ ಎಂಜಿನ್‌ ವಾಹನಗಳು ಉಗುಳುವ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ಹೆಚ್ಚು ಎಂದು ಈ ದತ್ತಾಂಶಗಳು ಹೇಳುತ್ತವೆ.

ದಿನದ ಸಂಚಾರ ಸಮಯ

ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ 10 ಕಿ.ಮೀ. ದೂರವನ್ನು ಕ್ರಮಿಸಲು ಸಾಮಾನ್ಯವಾಗಿ ತಗಲುವ ಸಮಯಕ್ಕಿಂತ, ದಟ್ಟಣೆ ಅವಧಿಯಲ್ಲಿ ಒಂದು ಪಟ್ಟು ಹೆಚ್ಚು ಸಮಯ ಬೇಕಾಗುತ್ತದೆ. ಬೆಳಿಗ್ಗೆಯ ದಟ್ಟಣೆ ಅವಧಿಯಲ್ಲಿ ತಗಲುವ ಸಮಯಕ್ಕಿಂತ, ಸಂಜೆಯ ದಟ್ಟನೆ ಅವಧಿಯಲ್ಲಿ ಹೆಚ್ಚು ಸಮಯ ಬೇಕಾಗುತ್ತದೆ. ನಗರದ ಈ ಭಾಗದಲ್ಲಿ ಪ್ರತಿದಿನ 10 ಕಿ.ಮೀ. ಕ್ರಮಿಸುವವರು, ವರ್ಷವೊಂದರಲ್ಲಿ ರಸ್ತೆ ಮೇಲೆಯೇ 260 ಗಂಟೆಗಳನ್ನು ಕಳೆಯಬೇಕಾಗುತ್ತದೆ ಎನ್ನುತ್ತದೆ ದತ್ತಾಂಶಗಳು. ದಟ್ಟಣೆ ಇಲ್ಲದೇ ಇದ್ದರೆ ಸಾಮಾನ್ಯವಾಗಿ ಪ್ರತಿದಿನ 10 ಕಿ.ಮೀ.ನಂತೆ ಒಂದು ವರ್ಷದಲ್ಲಿ 126 ಗಂಟೆಗಳನ್ನು ರಸ್ತೆಯಲ್ಲಿ ಕಳೆಯಬೇಕಾಗುತ್ತದೆ. ಆದರೆ, ಅಷ್ಟೇ ದೂರವನ್ನು ಕ್ರಮಿಸಲು ವರ್ಷವೊಂದರಲ್ಲಿ 134 ಗಂಟೆಗಳನ್ನು ಸಂಚಾರ ದಟ್ಟಣೆಯಲ್ಲಿ ಕಳೆಯಬೇಕಾಗುತ್ತದೆ.

ಒಟ್ಟು 108 ಕಿ.ಮೀ. ದಟ್ಟಣೆ

ಬೆಂಗಳೂರಿನಲ್ಲಿ ಸಂಜೆ 7ರಿಂದ ರಾತ್ರಿ 9ರ ಮಧ್ಯೆ ಸಂಚಾರ ದಟ್ಟಣೆ ತೀವ್ರವಾಗಿರುತ್ತದೆ ಎಂದು ಟಾಮ್‌ಟಾಮ್‌ನ ದತ್ತಾಂಶಗಳು ಹೇಳುತ್ತವೆ. ಬೆಂಗಳೂರು ನಗರ ಕೇಂದ್ರದ 5 ಕಿ.ಮೀ. ಪರಿಧಿಯಲ್ಲಿ ಗುರುವಾರ ರಾತ್ರಿ 9 ಗಂಟೆಯಲ್ಲಿ, ಒಟ್ಟು 186 ಕಡೆ ವಾಹನಗಳು ಸುಮ್ಮನೆ ನಿಂತಿದ್ದವು. ಸಂಚಾರ ಸಿಗ್ನಲ್‌ಗಳಲ್ಲಿ ನಿಂತಿರುವ ಮತ್ತು ಸಂಚಾರ ದಟ್ಟಣೆಯಲ್ಲಿ ಸಿಲುಕಿ, ಚಲಿಸಲಾಗದೇ ನಿಂತಿರುವ ಸ್ಥಳಗಳನ್ನು ಇಲ್ಲಿ ಪರಿಗಣಿಸಲಾಗಿದೆ.

ಹೀಗೆ ಕೇವಲ 5 ಕಿ.ಮೀ.ನಷ್ಟು ಪರಿಧಿಯಲ್ಲಿ 186 ಕಡೆ ನಿಂತಿರುವ ವಾಹನಗಳ ಒಟ್ಟು ಉದ್ದ 108 ಕಿ.ಮೀ.ನಷ್ಟಿತ್ತು ಎಂದು ಟಾಮ್‌ಟಾಮ್‌ನ ದತ್ತಾಂಶಗಳು ಹೇಳುತ್ತವೆ. ಆ ಸಮಯದಲ್ಲಿ ವಾಹನಗಳು 10 ಕಿ.ಮೀ.ನಷ್ಟು ದೂರವನ್ನು ಕ್ರಮಿಸಲು ಸರಾಸರಿ 32 ನಿಮಿಷ, 41 ಸೆಕೆಂಡ್‌ಗಳು ಬೇಕಾಗಿತ್ತು ಎಂದು ಟಾಮ್‌ಟಾಮ್‌ ಡ್ಯಾಶ್‌ಬೋರ್ಡ್‌ ಹೇಳುತ್ತದೆ.

ಪ್ರಯಾಣದ ಸರಾಸರಿ ಅವಧಿ

ಬೆಂಗಳೂರಿನ ನಗರ ಕೇಂದ್ರ ಭಾಗದಲ್ಲಿ 10 ಕಿ.ಮೀ.ದೂರವನ್ನು ಕ್ರಮಿಸಲು ಸಾಮಾನ್ಯವಾಗಿ ತಗಲುವ ಸಮಯಕ್ಕಿಂತ, ದಟ್ಟಣೆ ಅವಧಿಯಲ್ಲಿ ಒಂದು ಪಟ್ಟು ಹೆಚ್ಚು ಸಮಯ ಬೇಕಾಗುತ್ತದೆ. ಬೆಳಿಗ್ಗೆಯ ದಟ್ಟಣೆ ಅವಧಿಯಲ್ಲಿ ತಗಲುವ ಸಮಯಕ್ಕಿಂತ, ಸಂಜೆಯ ದಟ್ಟನೆ ಅವಧಿಯಲ್ಲಿ ಹೆಚ್ಚು ಸಮಯ ಬೇಕಾಗುತ್ತದೆ. ನಗರದ ಈ ಭಾಗದಲ್ಲಿ ಪ್ರತಿದಿನ 10 ಕಿ.ಮೀ. ಕ್ರಮಿಸುವವರು, ವರ್ಷವೊಂದರಲ್ಲಿ ರಸ್ತೆ ಮೇಲೆಯೇ 260 ಗಂಟೆಗಳನ್ನು ಕಳೆಯಬೇಕಾಗುತ್ತದೆ ಎನ್ನುತ್ತದೆ ದತ್ತಾಂಶಗಳು. ದಟ್ಟಣೆ ಇಲ್ಲದೇ ಇದ್ದರೆ ಸಾಮಾನ್ಯವಾಗಿ ಪ್ರತಿದಿನ 10 ಕಿ.ಮೀ.ನಂತೆ ಒಂದು ವರ್ಷದಲ್ಲಿ 126 ಗಂಟೆಗಳನ್ನು ರಸ್ತೆಯಲ್ಲಿ ಕಳೆಯಬೇಕಾಗುತ್ತದೆ. ಆದರೆ, ಅಷ್ಟೇ ದೂರವನ್ನು ಕ್ರಮಿಸಲು ವರ್ಷವೊಂದರಲ್ಲಿ 134 ಗಂಟೆಗಳನ್ನು ಸಂಚಾರ ದಟ್ಟಣೆಯಲ್ಲಿ ಕಳೆಯಬೇಕಾಗುತ್ತದೆ.

ಬೆಳಿಗ್ಗೆ 8ರಿಂದ 11ರವರೆಗೆ

15+ ನಿಮಿಷ/ 10 ಕಿ.ಮೀ. ಕ್ರಮಿಸಲು ಸಂಚಾರಕ್ಕೆ ತಗಲುವ ಸಮಯ

16+ ನಿಮಿಷ/ 10 ಕಿ.ಮೀ. ಕ್ರಮಿಸಲು ಸಂಚಾರ ದಟ್ಟಣೆಯಲ್ಲಿ ನಿಲ್ಲಬೇಕಾದ ಸಮಯ

31+ ನಿಮಿಷ/ 10 ಕಿ.ಮೀ. ಕ್ರಮಿಸಲು ತಗಲುವ ಒಟ್ಟು ಸಮಯ


ಸಂಜೆ 5ರಿಂದ 9ರವರೆಗೆ

16+ ನಿಮಿಷ/ 10 ಕಿ.ಮೀ. ಕ್ರಮಿಸಲು ಸಂಚಾರಕ್ಕೆ ತಗಲುವ ಸಮಯ

20+ ನಿಮಿಷ/ 10 ಕಿ.ಮೀ. ಕ್ರಮಿಸಲು ಸಂಚಾರ ದಟ್ಟಣೆಯಲ್ಲಿ ನಿಲ್ಲಬೇಕಾದ ಸಮಯ

36+ ನಿಮಿಷ/ 10 ಕಿ.ಮೀ. ಕ್ರಮಿಸಲು ತಗಲುವ ಒಟ್ಟು ಸಮಯ

ಲಂಡನ್‌, ಬೆಂಗಳೂರಿನಲ್ಲಿ ಸಂಚಾರ ಅತಿನಿಧಾನ

ಲಂಡನ್‌ನಲ್ಲಿ ಹತ್ತು ಕಿಲೋಮೀಟರ್ ಸಂಚರಿಸಲು 36 ನಿಮಿಷ 20 ಸೆಕೆಂಡ್ ಬೇಕು. ಬೆಂಗಳೂರಿನಲ್ಲಿ ಇಷ್ಟು ದೂರ ಕ್ರಮಿಸಲು 29 ನಿಮಿಷ 10 ಸೆಕೆಂಡ್ ಹಿಡಿಯುತ್ತದೆ ಎಂದು ವರದಿ ಹೇಳಿದೆ. ಈ ಪಟ್ಟಿಯಲ್ಲಿ 6ನೇ ರ‍್ಯಾಂಕ್ ಪಡೆದಿರುವ ಪುಣೆಯಲ್ಲಿ, 27 ನಿಮಿಷ 20 ಸೆಕೆಂಡ್‌ನಲ್ಲಿ 10 ಕಿಲೋಮೀಟರ್‌ ಸಂಚರಿಲಷ್ಟೇ ಸಾಧ್ಯ. ದೆಹಲಿ ಹಾಗೂ ಮುಂಬೈ ನಗರಗಳು ಈ ಪಟ್ಟಿಯಲ್ಲಿ ಕ್ರಮವಾಗಿ 34 ಹಾಗೂ 47ನೇ ಸ್ಥಾನದಲ್ಲಿವೆ. ಈ ನಗರಗಳಲ್ಲಿ ವಾಹನ ಸವಾರರು ಮುಂದೆ ಹೋಗುವುದು ಕಷ್ಟ, ಅವರ ದಾರಿ ಸಾಗುವುದೂ ಕಷ್ಟ.

ಏಷ್ಯಾ: ಭಾರತದ ನಗರಗಳಲ್ಲಿ ಸಾಗದು ದಾರಿ..

ವಾಹನದಟ್ಟಣೆಯ ಏಷ್ಯಾದ ನಗರಗಳ ಪಟ್ಟಿಯಲ್ಲಿ ಭಾರತದ ನಾಲ್ಕು ಮಹಾನಗರಗಳು ಇವೆ. ಜಾಗತಿಕವಾಗಿ ಎರಡನೇ ರ್‍ಯಾಂಕ್‌ನಲ್ಲಿರುವ ಬೆಂಗಳೂರು ನಗರವು ಏಷ್ಯಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪುಣೆ ಮೂರನೇ ರ‍್ಯಾಂಕ್‌ನಲ್ಲಿದೆ. ದೆಹಲಿಯಲ್ಲಿ ವಾಹನ ದಟ್ಟಣೆಯ ಸಮಯದಲ್ಲಿ 10 ಕಿಲೋಮೀಟರ್ ಸಂಚರಿಲು 22 ನಿಮಿಷ 10 ಸೆಕೆಂಡ್ ಸಮಯ ಬೇಕಾಗುತ್ತದೆ. ಮುಂಬೈ ನಗರದಲ್ಲಿ ಇಷ್ಟೇ ದೂರ ಕ್ರಮಿಸಲು 21 ನಿಮಿಷ 10 ಸೆಕೆಂಡ್ ಸಮಯ ಹಿಡಿಯುತ್ತದೆ ಎಂದು ವರದಿ ತಿಳಿಸಿದೆ. ಮೊದಲ 12 ರ್‍ಯಾಂಕ್‌ಗಳಲ್ಲಿ ಜಪಾನ್‌ ಹಾಗೂ ತೈವಾನ್‌ನ ತಲಾ ಮೂರು ನಗರಗಳಿವೆ.

ಆಧಾರ: ಟಾಮ್‌ಟಾಮ್‌ ಜಾಗತಿಕ ಸಂಚಾರ ಸೂಚ್ಯಂಕ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT