ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಪ್ರೀತಿ: ಪ್ರಿಯಕರನ ವರಿಸಲು ಬಾಂಗ್ಲಾದಿಂದ ಭಾರತಕ್ಕೆ ಈಜಿ ಬಂದ ಯುವತಿ!

ಅಕ್ಷರ ಗಾತ್ರ

ಕೋಲ್ಕತ್ತ: ಇಷ್ಟಪಟ್ಟವರನ್ನೇ ಮದುವೆಯಾಗುವುದಕ್ಕಾಗಿ ಪ್ರೇಮಿಗಳು ವಿವಿಧ ಸಾಹಸಕ್ಕೆ ಮುಂದಾಗುವುದನ್ನು ಅಲ್ಲಲ್ಲಿ ಕೇಳಿರುತ್ತೇವೆ. ಬಾಂಗ್ಲಾದೇಶದ 22 ವರ್ಷ ವಯಸ್ಸಿನ ಯುವತಿಯೊಬ್ಬರು ಪ್ರಿಯಕರನನ್ನು ವಿವಾಹವಾಗುವುದಕ್ಕಾಗಿ ದೇಶದ ಗಡಿಯನ್ನೇ ಮೀರಿ, ನದಿಯ ಮೂಲಕ ಬರೋಬ್ಬರಿ ಒಂದು ಗಂಟೆ ಈಜಿಕೊಂಡು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದಾರೆ!

ಹೌದು, ಈ ಸಿನಿಮೀಯ ರೀತಿಯ ಪ್ರೇಮ ವಿವಾಹ ಪಶ್ಚಿಮ ಬಂಗಾಳದ ‘ದಕ್ಷಿಣ 24 ಪರಗಣ’ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಯುವತಿ ಪೊಲೀಸರ ಅತಿಥಿಯಾಗಿದ್ದಾರೆ. ಅಕ್ರಮವಾಗಿ ದೇಶದ ಗಡಿ ದಾಟಿ ಬಂದ ಆರೋಪದಲ್ಲಿ ನರೇಂದ್ರಪುರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಕೃಷ್ಣಾ ಮಂಡಲ್ ಸಾಹಸ; ಮಾಟ್ಲಾ ನದಿಯಲ್ಲಿ ಒಂದು ಗಂಟೆ ಈಜು

‘ದಕ್ಷಿಣ 24 ಪರಗಣ’ ಜಿಲ್ಲೆಯ ಯುವಕ ಅಭಿಕ್ ಮಂಡಲ್ ಅವರನ್ನು ಬಾಂಗ್ಲಾದೇಶದ ಕೃಷ್ಣಾ ಮಂಡಲ್ ಪ್ರೀತಿಸುತ್ತಿದ್ದರು. ಪ್ರಿಯಕರನನ್ನು ಮದುವೆಯಾಗುವುದಕ್ಕಾಗಿ ಸುಂದರ್‌ಬನ್ ಪ್ರದೇಶದ ದಟ್ಟ ಕಾನನದ ನಡುವೆ ಹರಿಯುತ್ತಿರುವ ಮಾಟ್ಲಾ ನದಿಯಲ್ಲಿ ಒಂದು ಗಂಟೆ ಕಾಲ ಈಜಿಕೊಂಡು ಜಿಲ್ಲೆಯ ಕೈಖಲಿ ಗ್ರಾಮಕ್ಕೆ ಬಂದಿದ್ದಾರೆ. ಅಲ್ಲಿ ಅದಾಗಲೇ ಕಾರಿನೊಂದಿಗೆ ಯುವತಿಗಾಗಿ ಕಾಯುತ್ತಿದ್ದ ಅಭಿಕ್ ಮಂಡಲ್, ಆಕೆಯನ್ನು ಕರೆದೊಯ್ದು ದೇಗುಲವೊಂದರಲ್ಲಿ ಮದುವೆಯಾಗಿದ್ದಾರೆ ಎಂದು ಸ್ಥಳೀಯ ಪತ್ರಿಕೆ ‘ಲೋಕಮತ್’ ವರದಿ ಮಾಡಿದೆ.

ಫೇಸ್‌ಬುಕ್‌ನಲ್ಲಿ ಅರಳಿದ ಪ್ರೀತಿ

ಆನ್‌ಲೈನ್ ಮೂಲಕ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಇದು ಬಳಿಕ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪ್ರೇಮಕ್ಕೆ ತಿರುಗಿತ್ತು. ಆದರೆ, ಅಭಿಕ್‌ ಪಾಸ್‌ಪೋರ್ಟ್ ಹೊಂದಿರಲಿಲ್ಲ. ಹೀಗಾಗಿ ಬಾಂಗ್ಲಾದೇಶಕ್ಕೆ ತೆರಳುವುದು ಸಾಧ್ಯವಿರಲಿಲ್ಲ. ಕೊನೆಗೆ ದಿಟ್ಟ ನಿರ್ಧಾರ ಕೈಗೊಂಡ ಕೃಷ್ಣಾ ಮಂಡಲ್, ನದಿಯಲ್ಲಿ ಈಜಿಕೊಂಡು ಭಾರತದ ಗಡಿ ದಾಟಿ ಕೋಲ್ಕತ್ತಕ್ಕೆ ತೆರಳುವ ಯೋಜನೆ ರೂಪಿಸಿ ಯಶಸ್ವಿಯಾಗಿದ್ದಾರೆ.

ಕೃಷ್ಣಾ ಮಂಡಲ್ ಹಾಗೂ ಅಭಿಕ್ ಅವರ ಪ್ರಮಕಥೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಯುವತಿಯನ್ನು ಶೀಘ್ರದಲ್ಲೇ ಬಾಂಗ್ಲಾದೇಶ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT