ಮಂಗಳವಾರ, ಅಕ್ಟೋಬರ್ 26, 2021
26 °C

ಹಸಿರು ಪಟಾಕಿಗಳಲ್ಲಿ ನಿಷೇಧಿತ ವಸ್ತುಗಳ ಬಳಕೆ: ಸುಪ್ರೀಂ ಅಸಮಾಧಾನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹಸಿರು ಪಟಾಕಿಗಳ ನೆಪದಲ್ಲಿ ನಿಷೇಧಿತ ವಸ್ತುಗಳನ್ನು ಪಟಾಕಿ ತಯಾರಕರು ಬಳುಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, ಜಂಟಿ ಪಟಾಕಿಗಳನ್ನು ನಿಷೇಧಿಸಿರುವ ತನ್ನ ಹಿಂದಿನ ಆದೇಶವನ್ನು ಪ್ರತಿ ರಾಜ್ಯವೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಬುಧವಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠವು, ‘ಆಚರಣೆಗಳಿಗೆ ನಾವು ಅಡ್ಡಿ ಬರುವುದಿಲ್ಲ. ಆದರೆ ಆ ನೆಪದಲ್ಲಿ ನಾಗರಿಕರ ಜೀವಕ್ಕೆ ಕುತ್ತು ತರುವುದಕ್ಕೂ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿತು.

ಸಂಭ್ರಮಾಚರಣೆ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುವ ಪಟಾಕಿಗಳನ್ನೇ ಬಳಸಬೇಕು ಎಂದೇನಿಲ್ಲ. ಸುರ್‌ ಸುರ್‌ ಬತ್ತಿಯನ್ನು ಬಳಸುವ ಮೂಲಕವೂ ಸಂಭ್ರಮಿಸಬಹುದು. ಇದು ಸದ್ದು, ಗದ್ದಲವಿಲ್ಲದ ಸಂಭ್ರಮಾಚರಣೆ ಆಗುತ್ತದೆ ಎಂದು ಪೀಠ ಕಿವಿಮಾತು ಹೇಳಿತು.

ಜಂಟಿ ಪಟಾಕಿಗಳ ಮೇಲೆ ನಿಷೇಧವಿದ್ದರೂ ಅವು ದೇಶದ ಪ್ರತಿ ರಾಜ್ಯ ಅಥವಾ ನಗರಗಳಲ್ಲಿ ದೊರೆಯುತ್ತಿವೆ. ಆಚರಣೆಗಳಲ್ಲಿ ಬಳಕೆಯಾಗುತ್ತಿವೆ. ಮಾರುಕಟ್ಟೆಗಳಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿವೆ ಎಂದು ಪೀಠ ಕಳವಳ ವ್ಯಕ್ತಪಡಿಸಿತು.

‘ಈ ರೀತಿಯ ಪಟಾಕಿಗಳು ಮಾರುಕಟ್ಟೆಗಳಲ್ಲಿ ಮುಕ್ತವಾಗಿ ದೊರೆಯುತ್ತಿವೆ. ಜನರು ಬಳಸುತ್ತಿದ್ದಾರೆ. ನಿಷೇಧವಿದ್ದರೂ ಈ ಪಟಾಕಿಗಳು ಮಾರುಕಟ್ಟೆಗಳಿಗೆ ಹೇಗೆ ಬರುತ್ತಿವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ’ ಎಂದು ಪೀಠ ಕೇಳಿತು.

ಅರ್ಜಿದಾರ ಅರ್ಜುನ್‌ ಗೋಪಾಲ್‌ ಪರ ಹಾಜರಾದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರು ಸಿಬಿಐ ವರದಿಯ ಆಧಾರದ ಮೇಲೆ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಿದರು.

ಪಟಾಕಿಗಳ ತಯಾರಕರ ಸಂಘದ ಪರವಾಗಿ ವಾದಿಸಿದ ಹಿರಿಯ ವಕೀಲ ದುಷ್ಯಂತ್‌ ದವೆ ಅವರು, ಸರ್ಕಾರ ನೀಡಿದ ಮಾರ್ಗಸೂಚಿ ಪ್ರಕಾರವೇ ಉದ್ಯಮಗಳು ನಡೆಯಬೇಕು ಎಂದರು.

ಇದು ಸಂಘಟಿತ ಉದ್ಯಮವಾಗಿದ್ದು ಐದು ಲಕ್ಷ ಕುಟುಂಬಗಳು ಅವಲಂಬಿಸಿವೆ. ಶಿವಕಾಶಿಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಅನುಷ್ಠಾನ ಮತ್ತು ಪಾಲನೆಯೇ ಮುಖ್ಯ ತೊಂದರೆಯಾಗಿದೆಯೇ ಎಂದು ಪೀಠ ಇದೇ ವೇಳೆ ಪ್ರಶ್ನಿಸಿತು.

‘ಪಟಾಕಿ ತಯಾರಕರ ಉತ್ತರವನ್ನು ನೋಡಿದರೆ ಬಹಳ ಆಶ್ಚರ್ಯವಾಗುತ್ತದೆ. ತಯಾರಕರ ಗೋದಾಮುಗಳಲ್ಲಿ ಬೇರಿಯಂ ಲವಣಗಳು ಪತ್ತೆಯಾಗಿವೆ. ಆದರೆ ಅವರು ಅವುಗಳನ್ನು ಪಟಾಕಿಯಲ್ಲಿ ಬಳಸುವುದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ. ಹಾಗಾದರೆ ಗೋದಾಮಿನಲ್ಲಿ ಪ್ರದರ್ಶನಕ್ಕಾಗಿ ಸಂಗ್ರಹಿಸಿಡಲಾಗಿದೆಯೇ’ ಎಂದು ಪೀಠ ಕೇಳಿತು. 

ಹಿರಿಯ ವಕೀಲ ರಾಜೀವ್ ದತ್ತಾ ಅವರು, ಯಾವುದೋ ಒಂದಿಬ್ಬರು ತಯಾರಕರು ಆದೇಶಗಳನ್ನು ಉಲ್ಲಂಘಿಸಿರಬಹುದು. ಆದರೆ ಅದರಿಂದ ಇಡೀ ಉದ್ಯಮಕ್ಕೆ ತೊಂದರೆ ಆಗಬಾರದು ಎಂದು ಮನವಿ ಮಾಡಿದರು.

ಸಿಬಿಐ ವರದಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಲಾದ ಪ್ರಮಾಣ ಪತ್ರಗಳ ಪ್ರತಿಗಳನ್ನು ವಿನಿಮಯ ಮಾಡಿಕೊಳ್ಳುವಂತೆ ವಕೀಲರಿಗೆ ಸೂಚಿಸಿದ ಪೀಠವು, ವಿಚಾರಣೆಯನ್ನು ಅಕ್ಟೋಬರ್‌ 26ಕ್ಕೆ ಮುಂದೂಡಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು