ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಪತಿ ವಿರುದ್ಧ ಎಫ್‌ಐಆರ್‌: ಕ್ರಮಕ್ಕೆ ಆಗ್ರಹ

ಅಧಿಕಾರಿಗಳ ಅಮಾನತಿಗೆ ವಿಧಾನಪರಿಷತ್‌ನಲ್ಲಿ ಸದಸ್ಯರ ಒತ್ತಾಯ
Last Updated 10 ಮಾರ್ಚ್ 2022, 21:22 IST
ಅಕ್ಷರ ಗಾತ್ರ

ಬೆಂಗಳೂರು: ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡುವಂತೆ ಸದಸ್ಯರು ಸದನದಲ್ಲಿ ಗುರುವಾರ ಆಗ್ರಹಿಸಿದರು.

ಬಜೆಟ್‌ ಕುರಿತ ಚರ್ಚೆಯ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌ ಅವರು, ‘ಅನುಮತಿ ಪಡೆಯದೆಯೇ ಸಭಾಪತಿ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಮೂಲಕ ಸಾಂವಿಧಾನಾತ್ಮಕ ಹುದ್ದೆಗೆ ಅಗೌರವ ತೋರಲಾಗಿದೆ’ ಎಂದು ಆರೋಪಿಸಿದರು.

ಪೀಠದಲ್ಲಿದ್ದ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿ, ‘ಬೆಂಗಳೂರಿನಲ್ಲಿದ್ದರೂ ನನ್ನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಯಾವುದೋ ಶಾಲೆಯಲ್ಲಿ ಗಲಾಟೆ ನಡೆದಿರುವುದಕ್ಕೆ ಪ್ರಕರಣ ದಾಖಲಿಸಿ ಮಧ್ಯ ರಾತ್ರಿ 12.30ಕ್ಕೆ ಆನ್‌ಲೈನ್‌ ಮೂಲಕ ಎಫ್‌ಐಆರ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ರಾತ್ರಿ ಮೂರು ಗಂಟೆಗೆ ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೂರವಾಣಿ ಮೂಲಕ ಮಾಹಿತಿ ನೀಡಿದರು. ಎರಡು ದಿನದ ಬಳಿಕ ಕ್ಷಮೆಯಾಚಿಸಿ, ತಪ್ಪಾಗಿದೆ ಎಂದರು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಗಮನಿಸಬೇಕಾಗಿತ್ತು’ ಎಂದು ವಿವರಿಸಿದರು.

ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ‘ಪೀಠದ ಗೌರವ ಮುಖ್ಯ. ಸಭಾಪತಿ ವಿರುದ್ಧವೇ ಎಫ್‌ಐಆರ್‌ ದಾಖಲಿಸಿ ಪೀಠಕ್ಕೆ ಅಗೌರವ ತೋರಿಸಿರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್‌ನ ಎಸ್.ಎಲ್.ಭೋಜೆಗೌಡ,ಕೆ.ಟಿ.ಶ್ರೀಕಂಠೇಗೌಡ, ರಮೇಶ್‌ಗೌಡ ಹಾಗೂ ಕಾಂಗ್ರೆಸ್‌ನ ಗೋವಿಂದರಾಜು ಅವರು ದನಿಗೂಡಿಸಿ, ‘ಎಫ್‌ಐಆರ್‌ ದಾಖಲಿಸಿದ್ದೇ ತಪ್ಪು. ಸರ್ಕಾರ ಇಷ್ಟು ದಿನ ಏಕೆ ಕ್ರಮಕೈಗೊಂಡಿಲ್ಲ. ಅಧಿಕಾರಿಗಳನ್ನು ಸದನಕ್ಕೆ ಕರೆಯಿಸಿ ಛೀಮಾರಿ ಹಾಕಬೇಕು’ ಎಂದು ಒತ್ತಾಯಿಸಿದರು.

‘ಪೊಲೀಸರು ಸಂವೇದನಾಶೀಲರಾಗಿ ವರ್ತಿಸಬೇಕು. ಆದರೆ, ಸದಸ್ಯರ ಹಕ್ಕುಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಈ ರೀತಿ ದುರ್ವರ್ತನೆ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿಯ ತೇಜಸ್ವಿನಿ ಗೌಡ ಹೇಳಿದರು.

ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಜೆಡಿಎಸ್‌ ಸದಸ್ಯರು ಸ್ವಲ್ಪ ಹೊತ್ತು ಪೀಠದ ಮುಂದೆ ಧರಣಿ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಸರ್ಕಾರಕ್ಕೆ ಸಭಾಪತಿ ಬಗ್ಗೆ ಗೌರವ ಇದೆ. ಆ ಪೀಠಕ್ಕೆ ಕಳಂಕವಾಗದಂತೆ ಕ್ರಮಕೈಗೊಳ್ಳಲಿದೆ. ಇದು ಸೂಕ್ಷ್ಮ ವಿಚಾರ. ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎನ್ನುವುದನ್ನು ಗಮನಿಸಬೇಕು. ಪ್ರಕರಣದ ಸಮಗ್ರ ವರದಿ ಪಡೆದು ಕೈಗೊಂಡಿರುವ ಕ್ರಮ ಕುರಿತು ಎರಡು–ಮೂರು ದಿನಗಳಲ್ಲಿ ಸದನಕ್ಕೆ ಮಾಹಿತಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಧಾರವಾಡ ಜಿಲ್ಲೆಯ ಮುಗದನಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಮೋಹನ್‌ ನೀಡಿದ ದೂರಿನ ಮೇರೆಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜನವರಿ 25ರಂದು ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT