ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಸರ್ಕಾರದ ಇಲಾಖೆ ಅಲ್ಲ: ಸುಪ್ರೀಂ ಕೋರ್ಟ್‌

ಶಿವರಾಮ ಕಾರಂತ ಬಡಾವಣೆ ಟೆಂಡರ್‌ಗೆ ಸರ್ಕಾರದ ಅನುಮೋದನೆ ಬೇಕಿಲ್ಲ
Last Updated 12 ಆಗಸ್ಟ್ 2022, 21:34 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕರ್ನಾಟಕ ಸರ್ಕಾರದ ಇಲಾಖೆ ಅಲ್ಲ. ಹಾಗಾಗಿ, ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆಗೆ ಟೆಂಡರ್ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ.

ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಸಂಪೂರ್ಣ ಭೂಮಿಗೆ ಆರು ವಾರಗಳ ಒಳಗೆ ಅರ್ಹತಾ ಪ್ರಮಾಣಪತ್ರಗಳನ್ನು ಪ್ರಾಧಿಕಾರ ನೀಡಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಪೀಠವು, ಒಂದು ವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಬ್ದುಲ್‌ ಎಸ್‌.ನಜೀರ್‌ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಪೀಠವು, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1976ರ ಸೆಕ್ಷನ್‌ 3 ಅಡಿಯಲ್ಲಿ ಪ್ರಾಧಿಕಾರವನ್ನು ರಚಿಸಲಾಗಿದೆ. ಇದು ಶಾಶ್ವತ ಉತ್ತರಾಧಿಕಾರ ಹೊಂದಿರುವ ಸಂಸ್ಥೆ. ಪ್ರಾಧಿಕಾರವು ಭೂ ಸ್ವಾಧೀನ ಮಾಡುವ, ವಿಲೇವಾರಿ ಮಾಡುವ ಅಧಿಕಾರ ಹೊಂದಿದೆ. ಅಲ್ಲದೆ, ಕಾಯ್ದೆಯಡಿ ಮಂಜೂರಾದ ಯೋಜನೆಗಳನ್ನು ಕಾರ್ಯಗತ ಮಾಡುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ’ ಎಂದು ಹೇಳಿದೆ.

ಟೆಂಡರ್ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಾಧಿಕಾರವು ಪ್ರಸ್ತಾವನೆ ಸಲ್ಲಿಸುವುದು ಅನಗತ್ಯ. ಇಂತಹ ಪ್ರಸ್ತಾವನೆಗಳಿಗೆಅನುಮೋದನೆ ನೀಡುವುದು ಸರ್ಕಾರಕ್ಕೆ ಕೂಡಾ ಕಾನೂನಾತ್ಮಕವಾಗಿ ಕಡ್ಡಾಯ ಅಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಶಿವರಾಮ ಕಾರಂತ ಬಡಾವಣೆಯನ್ನು 17 ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ರಚಿಸುವ ಯೋಜನೆಗೆ ರಾಜ್ಯ ಸರ್ಕಾರ ಜುಲೈ 8ರಂದು ಅನುಮೋದನೆ ನೀಡಿತ್ತು. ಒಟ್ಟು 3,546 ಎಕರೆ 12 ಗುಂಟೆಯಲ್ಲಿ ಬಡಾವಣೆ ರಚಿಸಲು ₹5,337 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. ಈ ಯೋಜನೆಗೆ ಸರ್ಕಾರದ ಅನುಮೋದನೆಯ ಅಗತ್ಯ ಇಲ್ಲ ಎಂದೂ ಕೋರ್ಟ್‌ ಹೇಳಿದೆ.

ಪ್ರಾಧಿಕಾರವು ಯಾವ ನಿಯಮದಡಿ ಬಡಾವಣೆ ನಿರ್ಮಾಣ ಮಾಡಲು ಅನುಮೋದನೆ ಪಡೆಯಬೇಕು ಹಾಗೂ ಅಂತಹ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಸರ್ಕಾರಕ್ಕೆ ಇರುವ ಶಾಸನಬದ್ಧ ಅಧಿಕಾರ ವ್ಯಾಪ್ತಿ ಬಗ್ಗೆ ವಿವರಣೆ ನೀಡುವಂತೆ ಕರ್ನಾಟಕ ಸರ್ಕಾರ ಹಾಗೂ ಬಿಡಿಎ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ ಜುಲೈ 28ರಂದು ಸೂಚನೆ ನೀಡಿತ್ತು. ಈ ಬಗ್ಗೆ ಸರ್ಕಾರ ಹಾಗೂ ಬಿಡಿಎ ವಕೀಲರು ಪ್ರತಿಕ್ರಿಯೆ ನೀಡಿದ್ದರು. ಆದರೆ, ಸರ್ಕಾರಕ್ಕೆ ಇರುವ ಶಾಸನಬದ್ಧ ಅಧಿಕಾರದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂಬುದನ್ನು ಪೀಠವು ಗಮನಿಸಿತು.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 2018ಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಪಾಲನಾ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠವು, ವಿವಿಧ ಬಡಾವಣೆಗಳಲ್ಲಿ 96 ಪರ್ಯಾಯ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೀಡುವಂತೆ ಬಿಡಿಎಗೆ ಸೂಚಿಸಿತು.

ಆಗಸ್ಟ್‌ 8ರಂದು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ ಪೀಠವು, ಈವರೆಗೆ ಕೇವಲ 53 ಸ್ವಾಧೀನ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಸ್ವಾಧೀನಪಡಿಸಿಕೊಂಡ ಸಂಪೂರ್ಣ ಭೂಮಿಗೆ ಆರು ವಾರಗಳೊಳಗೆ ಅರ್ಹತಾ ಪ್ರಮಾಣಪತ್ರಗಳನ್ನು ನೀಡಬೇಕು ಎಂದೂ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT