ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Naxal Attack: ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಅಮಿತ್ ಶಾ

Last Updated 4 ಏಪ್ರಿಲ್ 2021, 21:56 IST
ಅಕ್ಷರ ಗಾತ್ರ

ನವದೆಹಲಿ: ನಕ್ಸಲರು ನಡೆಸಿದ ಗುಂಡಿನ ದಾಳಿಯಿಂದಾಗಿ 22 ಯೋಧರು, ಭದ್ರತಾ ಸಿಬ್ಬಂದಿ ಮೃತಪಟ್ಟ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಹುತಾತ್ಮರಾದವರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ. ಗಾಯಾಳುಗಳು ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ’ ಎಂದಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಜೊತೆಗೆ ಚರ್ಚಿಸಿ ದುರಂತದ ವಿವರ ಪಡೆದರು. ಅಲ್ಲದೆ, ಸಿಆರ್‌ಪಿಎಫ್‌ ಡಿಜಿ ಕುಲದೀಪ್ ಸಿಂಗ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಗಮನಿಸಲು ಸೂಚಿಸಿದರು.

‘ಸರ್ಕಾರ ಎಂದಿಗೂ ಈ ಹುತಾತ್ಮರ ಬಲಿದಾನವನ್ನು ಮರೆಯುವುದಿಲ್ಲ. ಶಾಂತಿಯನ್ನು ಮರುಸ್ಥಾಪಿಸುವ ಕ್ರಮವಾಗಿ ಹೋರಾಟವನ್ನು ಮುಂದುವರಿಸಲಿದೆ’ ಎಂದೂ ಅಮಿತ್ ಶಾ ಹೇಳಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಹೋರಾಟ ನಡೆಸಿದ್ದಲ್ಲಿ ಗೆಲುವು ಸಾಧ್ಯ ಎಂದು ಗೃಹಸಚಿವ ಅಮಿತ್ ಶಾ ಹೇಳಿದರು’ ಎಂದು ಛತ್ತೀಸಗಡ ಸರ್ಕಾರದ ವಕ್ತಾರರು ನಂತರ ತಿಳಿಸಿದರು.

ಈ ಅವಘಡದ ಹಿನ್ನೆಲೆಯಲ್ಲಿ, ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಮಿತ್ ಶಾ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ, ನವದೆಹಲಿಗೆ ಮರಳಿದರು.

ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರೂ ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಟೀಕೆ: ನಕ್ಸಲರ ದಾಳಿ ಗಮನಿಸಲು ಆಗದಷ್ಟು ಪ್ರಧಾನಿ, ಗೃಹ ಸಚಿವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಟಿ.ವಿ.ಘೋಷಣೆಗಳಷ್ಟೇ ಸಾಲದು. ಪಿಡುಗು ತಡೆಗೆ ನಿರ್ದಿಷ್ಟ ಕಾರ್ಯತಂತ್ರ ಮತ್ತು ನೀಲನಕ್ಷೆ ಅಗತ್ಯವಾಗಿದೆ’ ಎಂದು ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

27ರಲ್ಲಿ 14 ಜಿಲ್ಲೆಗಳು ನಕ್ಸಲ್‌ ಬಾಧಿತ: ಛತ್ತೀಸಗಡದಲ್ಲಿ 22 ಜನರ ಸಾವಿಗೆ ಕಾರಣವಾದ ಗುಂಡಿನ ದಾಳಿ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ಭೀಕರ ದಾಳಿಯಾಗಿದೆ. ರಾಜ್ಯದಲ್ಲಿರುವ 27 ಜಿಲ್ಲೆಗಳ ಪೈಕಿ 14 ಜಿಲ್ಲೆಗಳು ನಕ್ಸಲ್ ಬಾಧಿತವಾಗಿವೆ.

ಮಾರ್ಚ್ 23ರಂದು ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದ ವಾಹನವನ್ನು ಸುಧಾರಿತ ಸ್ಫೋಟಕ ಸಾಧನ (ಎಲ್ಇಡಿ) ಬಳಸಿ ನಕ್ಸಲರು ಉಡಾಯಿಸಿದ್ದು, ಐವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT