ಶಿಮ್ಲಾ: ‘ಬಿಜೆಪಿ ನೇತೃತ್ವದ ಆಡಳಿತವು ಭ್ರಷ್ಟಾಚಾರ ನಿರ್ಮೂಲನೆ ಮಾಡಿದ್ದು,ಎಂಟು ವರ್ಷಗಳಲ್ಲಿ ದೇಶವು ಅಗಾಧ ಬದಲಾವಣೆ ಕಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಇಲ್ಲಿ ರ್‍ಯಾಲಿಗೂ ಮೊದಲು ಕೇಂದ್ರದವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು.ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಾಗಿ 80 ಕೋಟಿ ರೈತರಿಗೆ ₹21,000 ಕೋಟಿ ಅನುದಾನ ಬಿಡುಗಡೆ ಮಾಡಿದರು.
‘2014ರ ಮೊದಲುಭ್ರಷ್ಟಾಚಾರವನ್ನು ಸರ್ಕಾರದ ಅತ್ಯಗತ್ಯ ಭಾಗವಾಗಿ ಪರಿಗಣಿಸಲಾಗಿತ್ತು’ ಎಂದು ಆರೋಪಿಸಿದ ಮೋದಿ, ‘2014ಕ್ಕೂ ಮೊದಲು ವಿವಿಧ ಹಗರಣಗಳಿಂದ ಸರ್ಕಾರ ಸುದ್ದಿಯಾಗುತ್ತಿತ್ತು. ಆದರೆ, ಈಗ ಭ್ರಷ್ಟಾಚಾರ ಸಹಿಸದಿರುವುದು ಮತ್ತುಅಭಿವೃದ್ಧಿ ಯೋಜನೆಗಳ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಬಡತನವೂ ತಗ್ಗಿದೆ. ಇದನ್ನು ಅಂತರರಾಷ್ಟ್ರೀಯ ಏಜೆನ್ಸಿಗಳು ಸಹ ಒಪ್ಪಿಕೊಳ್ಳುತ್ತಿವೆ’ ಎಂದರು.
‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಸಹಿಸದೇ,ವಿವಿಧ ಯೋಜನೆಗಳ ಒಂಬತ್ತು ಕೋಟಿ ನಕಲಿ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ವಿದ್ಯಾರ್ಥಿ ವೇತನ ಅಥವಾ ಯಾವುದೇ ಯೋಜನೆಯಾಗಿರಲಿ, ಅರ್ಹರಿಗೆ ನೇರ ವರ್ಗಾವಣೆಯ ಮೂಲಕ ಸರ್ಕಾರದ ಪ್ರಯೋಜನವನ್ನು ತಲುಪಿಸಿ, ಭ್ರಷ್ಟಾಚಾರದ ವ್ಯಾಪ್ತಿಯನ್ನು ಹತ್ತಿಕ್ಕಿದ್ದೇವೆ. ₹22 ಲಕ್ಷ ಕೋಟಿಯನ್ನು ನೇರ ನಗದು ವರ್ಗಾವಣೆ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ’ ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಎದುರಿಸಲು ಕೈಗೊಂಡ ಸರ್ಕಾರ ಕ್ರಮಗಳನ್ನು ಪ್ರಶಂಸಿಸಿದ ಅವರು, ‘ದೇಶದಲ್ಲಿ ಈವರೆಗೆ ಸುಮಾರು 200 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಲ್ಲದೆ, ಹಲವು ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಪೂರೈಸುವ ಮೂಲಕಭಾರತವು ಸ್ನೇಹದ ಹಸ್ತ ಚಾಚಿದೆ’ ಎಂದರು.
ಬಿಲಾಸ್‌ಪುರದಲ್ಲಿ ನಿರ್ಮಿಸುತ್ತಿರುವ ಏಮ್ಸ್ ಅನ್ನು ಉಲ್ಲೇಖಿಸಿ ‘ನಾವು ದೇಶದ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು ಯೋಜಿಸಿದ್ದೇವೆ’ ಎಂದು ಹೇಳಿದರು.
ಹೀರಾಬೆನ್ ರೇಖಾಚಿತ್ರ ಸ್ವೀಕರಿಸಿದ ಮೋದಿ:ಶಿಮ್ಲಾದ ರಿಡ್ಜ್ ಮೈದಾನಕ್ಕೆ ಹೋಗುವ ರಸ್ತೆಯು ಪ್ರಧಾನಿ ಮೋದಿ ಅವರ ದರ್ಶನಕ್ಕಾಗಿ ಕಾದು ಕುಳಿತಿದ್ದ ಜನರಿಂದ ತುಂಬಿ ತುಳುಕುತ್ತಿತ್ತು. ಜನರ ನಡುವೆ ಅನು ಎಂಬ ಬಾಲಕಿ ಮೋದಿ ಅವರ ತಾಯಿ ಹೀರಾಬೆನ್ ಅವರ ಕಲಾಕೃತಿ ಹಿಡಿದು ನಿಂತಿದ್ದಳು. ರೋಡ್ ಶೋ ವೇಳೆ, ಕಲಾಕೃತಿ ಗಮನಿಸಿದ ನರೇಂದ್ರ ಮೋದಿಯವರು ಬೆಂಗಾವಲು ಪಡೆ ನಿಲ್ಲಿಸಿ, ಕಾರಿನಿಂದ ಇಳಿದು ಬಾಲಕಿಯ ಬಳಿಗೆ ಹೋದರು. ‘ನಿಮ್ಮ ಹೆಸರೇನು? ನೀವು ಎಲ್ಲಿ ವಾಸಿಸುತ್ತಿದ್ದೀರಿ? ಈ ಕಲಾಕೃತಿ ರಚನೆಗೆ ನೀವು ಎಷ್ಟು ದಿನ ತೆಗೆದುಕೊಂಡಿದ್ದೀರಿ?’ ಎಂದು ಬಾಲಕಿಯನ್ನು ವಿಚಾರಿಸಿ, ಕಲಾಕೃತಿಯನ್ನು ಖುಷಿಯಿಂದ ಸ್ವೀಕರಿಸಿದರು.
ಬಾಲಕಿ ‘ನಾನು ಶಿಮ್ಲಾದವಳು. ಒಂದೇ ದಿನದಲ್ಲಿ ಕಲಾಕೃತಿ ರಚಿಸಿದೆ. ನಿಮ್ಮ ಕಲಾಕೃತಿಯನ್ನು ರಚಿಸಿರುವೆ. ಅದನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಲಾಗಿದೆ’ ಎಂದು ಬಾಲಕಿ ತಿಳಿಸಿದಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.