ಬುಧವಾರ, ಸೆಪ್ಟೆಂಬರ್ 22, 2021
22 °C

ಕ್ರಿಕೆಟ್: ವಿರಾಮ ಪಡೆದ ಬೆನ್ ಸ್ಟೋಕ್ಸ್; ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್:‌ ತಮ್ಮ ತಂಡದ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಕ್ರಿಕೆಟ್‌ನಿಂದ ಅನಿರ್ದಿಷ್ಟ ಅವಧಿಗೆ ವಿರಾಮ ಪಡೆದುಕೊಂಡಿದ್ದಾರೆ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಶುಕ್ರವಾರ ಪ್ರಕಟಿಸಿದೆ. ಸ್ಟೋಕ್ಸ್‌ ತಮ್ಮ ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಿದ್ದು, ಅವರು ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗೂ ಲಭ್ಯವಿರುವುದಿಲ್ಲ.

ಭಾರತ-ಇಂಗ್ಲೆಂಡ್‌ ಐದು ಪಂದ್ಯಗಳ ಟೆಸ್ಟ್‌ ಸರಣಿಯು ಆಗಸ್ಟ್‌ 04ರಿಂದ ಆರಂಭವಾಗಲಿದೆ.

ಐಪಿಎಲ್-2021 ಟೂರ್ನಿ ವೇಳೆ ಬೆರಳಿಗೆ ಗಾಯ ಮಾಡಿಕೊಂಡು ಎರಡು ತಿಂಗಳು ವಿಶ್ರಾಂತಿ ಪಡೆದಿದ್ದ ಸ್ಟೋಕ್ಸ್‌, ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾಗಿದ್ದರು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ತಂಡ ಮುನ್ನಡೆಸಿ, 3-0 ಅಂತರದ ಜಯ ತಂದುಕೊಟ್ಟಿದ್ದರು. ಆದಾಗ್ಯೂ, ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿತ್ತು.

ವಿರಾಮ ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿರುವ ಇಸಿಬಿ, ಸ್ಟೋಕ್ಸ್‌ ಕೈಬೆರಳಿಗೆ ಆಗಿದ್ದ ಗಾಯ ಇನ್ನೂ ವಾಸಿಯಾಗಿಲ್ಲ ಎಂದೂ ಹೇಳಿದೆ. ʼಸ್ಟೋಕ್ಸ್‌ ತಮ್ಮ ನೋವು ಮತ್ತು ಯೋಗಕ್ಷೇಮದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುವ ಧೈರ್ಯ ಮಾಡಿದ್ದಾರೆ. ಎಲ್ಲರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೆ ನಮ್ಮ ಮೊದಲ ಆದ್ಯತೆ ಇರುತ್ತದೆʼ ಎಂದು ತಿಳಿಸಿದೆ.

ʼಕುಟುಂಬದಿಂದ ದೂರ ಉಳಿದು, ಕಟ್ಟುಪಾಡುಗಳೊಂದಿಗೆ ಸಮಯ ಕಳೆಯುವುದು ಸುಲಭವಲ್ಲ. ಬಹಳ ಸವಾಲಿನ ಸಂಗತಿ. ಸ್ಟೋಕ್ಸ್‌ಗೆ ಅಗತ್ಯವಿರುವಷ್ಟು ಸಮಯವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಅವರು ಇಂಗ್ಲೆಂಡ್‌ ತಂಡದಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇವೆʼ ಎಂದೂ ಹೇಳಿದೆ.

ಕೊರೊನಾದಿಂದಾಗಿ ಅರ್ಧಕ್ಕೇ ನಿಂತಿರುವ ಐಪಿಎಲ್-2021, ಸೆಪ್ಟೆಂಬರ್‌ 19ರಿಂದ ಪುನರಾರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ಸ್ಟೋಕ್ಸ್‌ ಆಡುವರೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಅವರು ರಾಜಸ್ಥಾನ ರಾಯಲ್ಸ್‌ ತಂಡದ ಪರ ಆಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು