ಟಿಎಂಸಿ ಸುಳ್ಳು ಆರೋಪ ಮಾಡುತ್ತಿದೆ: ಬಂಗಾಳ ರಾಜ್ಯಪಾಲ ಜಗದೀಪ್ ಧನಖರ್

ಕೋಲ್ಕತ್ತ: ರಾಜಭವನದಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ರಾಜ್ಯಪಾಲರ ಸಂಬಂಧಿಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಮಾಡಿರುವ ಆರೋಪವನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಖರ್ ಅಲ್ಲಗಳೆದಿದ್ದಾರೆ.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಗಮನ ಬೇರೆಡೆ ಸೆಳೆಯಲು ತಮ್ಮ ವಿರುದ್ಧ ಆರೋಪ ಮಾಡಲಾಗಿದೆ ಎಂದು ಧನಖರ್ ಹೇಳಿದ್ದಾರೆ.
ವಿಶೇಷ ಕರ್ತವ್ಯದಲ್ಲಿರುವ 6 ಮಂದಿ ಅಧಿಕಾರಿಗಳು ನನ್ನ ಕುಟುಂಬದ ಆಪ್ತರಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಓದಿ: ಬಂಗಾಳ ಹಿಂಸಾಚಾರ ಮಾನವೀಯತೆಗೆ ನಾಚಿಕೆಗೇಡು: ಮಮತಾಗೆ ರಾಜ್ಯಪಾಲ
‘ರಾಜಭವನದಲ್ಲಿರುವ 6 ಮಂದಿ ವಿಶೇಷ ಕರ್ತವ್ಯ ಅಧಿಕಾರಿಗಳು ನನ್ನ ಸಂಬಂಧಿಕರೆಂದು ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಟ್ವೀಟ್ ಮೂಲಕ ಮಾಡಿರುವ ಆರೋಪ ನಿಜವಲ್ಲ. ವಿಶೇಷ ಕರ್ತವ್ಯ ಅಧಿಕಾರಿಗಳು ಮೂರು ರಾಜ್ಯಗಳವರಾಗಿದ್ದು, ನಾಲ್ಕು ಭಿನ್ನ ಸಮುದಾಯಗಳಿಗೆ ಸೇರಿದವರು. ಅವರು ಯಾರೂ ನನ್ನ ಕುಟುಂಬದ ಆಪ್ತರಲ್ಲ. ಆ ಪೈಕಿ ನಾಲ್ವರಂತೂ ನನ್ನ ಸಮುದಾಯ, ರಾಜ್ಯದವರೂ ಅಲ್ಲ’ ಎಂದು ಧನಖರ್ ಟ್ವೀಟ್ ಮಾಡಿದ್ದಾರೆ.
Assertion @MahuaMoitra in tweet & Media that six coterminous appointee OSDs in personal staff are relatives is FACTUALLY WRONG.
OSDs are from three states and belong to four different castes.
None of them is part of close family. Four of them are not from my caste or state.
— Governor West Bengal Jagdeep Dhankhar (@jdhankhar1) June 7, 2021
ರಾಜ್ಯದ ಕಾನೂನು–ಸುವ್ಯವಸ್ಥೆಗೆ ಸಂಬಂಧಿಸಿ ರಾಜ್ಯಪಾಲರು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಭಾನುವಾರ ತರಾಟೆಗೆ ತೆಗೆದುಕೊಂಡಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತ ಇರುವ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆಯುತ್ತಿರುವ ತಡೆಯಿಲ್ಲದ ಹಿಂಸಾಚಾರವು ಮನುಷ್ಯತ್ವವನ್ನು ನಾಚಿಸುವಂತಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ನಿಯಂತ್ರಿಸಲು ರಾಜ್ಯ ಪೊಲೀಸ್ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಗಲಭೆ ಕೃತ್ಯದಲ್ಲಿ ಭಾಗಿಯಾದವರನ್ನು ಶಿಕ್ಷಿಸಬೇಕು ಮತ್ತು ಶಿಸ್ತು ಮೂಡಿಸಬೇಕು ಎಂದು ರಾಜ್ಯಪಾಲರು ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.