ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾ ‘ಮರ್ಮ ಯೋಗಿ’ಯ ಕೈಗೊಂಬೆ ಎಂಬುದೇ ಅಚ್ಚರಿ: ಮಾಜಿ ಸಹೋದ್ಯೋಗಿಗಳ ಅಭಿಪ್ರಾಯ

Last Updated 21 ಫೆಬ್ರುವರಿ 2022, 13:10 IST
ಅಕ್ಷರ ಗಾತ್ರ

ನವದೆಹಲಿ: ಚಿತ್ರಾ ರಾಮಕೃಷ್ಣ ಅವರು 'ಮರ್ಮ' ಯೋಗಿ ಅಥವಾ ನಿಗೂಢ ವ್ಯಕ್ತಿಯೊಬ್ಬರಿಗೆ ಕೈಗೊಂಬೆಯಾಗಿದ್ದರೆಂಬುದು ಊಹೆಗೂ ಮೀರಿದ್ದು ಎಂದು 1980ರ ದಶಕದ ಮಧ್ಯಭಾಗದಲ್ಲಿ ಚಿತ್ರಾ ಅವರೊಂದಿಗೆ ಐಡಿಬಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದ ಮಾಜಿ ಸಹೋದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಅತ್ಯಂತ ಪ್ರಮುಖ ಷೇರುಪೇಟೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಆಗಿ 2013ರ ಏಪ್ರಿಲ್‌ 1ರಿಂದ 2016ರ ಡಿಸೆಂಬರ್‌ 2ರವರೆಗೆ ಕರ್ತವ್ಯ ನಿಭಾಯಿಸಿದ್ದ ಚಿತ್ರಾ ರಾಮಕೃಷ್ಣ ಈಗ ದೇಶದಾದ್ಯಂತ ಸುದ್ದಿಯಾಗಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪ, ಸಂಭಾವನೆ ಹೆಚ್ಚಿಸುವಲ್ಲಿನ ಲೋಪ ಸೇರಿದಂತೆ ಹಲವು ಆರೋಪಗಳು ಅವರ ಮೇಲಿದೆ. ‘ಹಿಮಾಲಯದಲ್ಲಿ ಎಲ್ಲೋ ಒಂದು ಕಡೆ ಇರುವ ಯೋಗಿ’ಯೊಬ್ಬರ ಸಲಹೆ ಪಡೆದು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದ ಆರೋಪವೂ ಅವರ ಮೇಲಿದೆ. ಹೀಗಾಗಿ ಹಲವು ತನಿಖಾ ಸಂಸ್ಥೆಗಳು ಚಿತ್ರಾ ಅವರ ವಿಚಾರಣೆ ನಡೆಸುತ್ತಿವೆ.

‘ಐಡಿಬಿಐ ಅಗ್ರ ಶ್ರೇಯಾಂಕಿತರನ್ನು (ಚಾರ್ಟರ್ಡ್ ಅಕೌಂಟೆಂಟ್‌ಗಳು / ಮ್ಯಾನೇಜ್‌ಮೆಂಟ್ ಪದವೀಧರರನ್ನು) ನೇಮಿಸಿಕೊಳ್ಳುವ ನೀತಿಯನ್ನು ಪಾಲಿಸುತ್ತಿತ್ತು. ಚಿತ್ರಾ ಅವರು ಟಾಪರ್‌ಗಳಲ್ಲಿ ಒಬ್ಬರಾಗಿದ್ದರು. 1985 ರಲ್ಲಿ ಅವರು ಐಡಿಬಿಐಗೆ ನೇಮಕಗೊಂಡಿದ್ದರು’ ಎಂದು ಐಡಿಬಿಐನಲ್ಲಿ ಅವರೊಂದಿಗೆ ಕೆಲಸ ಮಾಡಿದ್ದ ಮಾಜಿ ಬ್ಯಾಂಕರ್‌ ಒಬ್ಬರು ಹೇಳಿದ್ದಾರೆ.

‘ಅವರು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ್ದವರು. ಬುದ್ಧಿವಂತೆ, ಮುಕ್ತವಾಗಿ ಮಾತನಾಡುವಂಥವರು, ಮುನ್ನುಗ್ಗುವ ಗುಣದವರಾಗಿದ್ದರು. ಅವರು ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ತಮ್ಮ 20ರ ವಯಸ್ಸಿನಲ್ಲಿ ಚಿತ್ರ ಅವರ ಆಲೋಚನೆಗಳು ವೃತ್ತಿ ಅಥವಾ ವ್ಯವಹಾರ ಕೇಂದ್ರೀತವಾಗಿರುತ್ತಿದ್ದವು. ಆದರೆ, ಆಕೆ ಒಬ್ಬೊಂಟಿಯಾಗಿರಲು ಇಷ್ಟಪಡುತ್ತಿದ್ದರು. ಒಬ್ಬರೇ ಕುಳಿತು ಊಟ ಮಾಡುತ್ತಿದ್ದರು’ ಎಂದು ಹಲವರು ಹೇಳಿದ್ದಾರೆ.

‘ಚಿತ್ರಾ ಅವರು ಶಾಲೆಯ ಮುಖ್ಯ ಶಿಕ್ಷಕರೊಬ್ಬರ ಮೊಮ್ಮಗಳು ಮತ್ತು ವೃತ್ತಿಪರ ಅಕೌಂಟೆಂಟ್‌ನ ಮಗಳು. ಆಕೆಯ ತಾಯಿ ಚೆನ್ನೈನವರು. ಮದುವೆಯ ನಂತರ ಮುಂಬೈ ಸೇರಿದ್ದರು’ ಎಂದು ಇನ್ನೊಬ್ಬ ಮಾಜಿ ಬ್ಯಾಂಕರ್ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ಮಾಹಿತಿ ನೀಡಿದ್ದಾರೆ.

‘ ಸ್ಪುರದ್ರೂಪಿಯಾಗಿದ್ದ ಚಿತ್ರಾ ರಾಮಕೃಷ್ಣ ಅವರ ಹಿಂದೆ ಆ ಕಾಲದಲ್ಲಿ ಯಾರಾದರೂ ಬಿದ್ದಿದ್ದರೇ?’ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಾಜಿ ಸಹೋದ್ಯೋಗಿಗಳು, ‘ಬಹುಶಃ ಯುವ ಸಹೋದ್ಯೋಗಿಗಳು ಅವಳ ಗುಣಲಕ್ಷಣಗಳಿಂದ ಭಯಭೀತರಾಗಿದ್ದರು ಮತ್ತು ಆಕೆ ಅಂಥದ್ದನ್ನು ಎಂದೂ ಒಪ್ಪುತ್ತಿರಲಿಲ್ಲ. ಅವರೂ ತಮ್ಮ ಹರೆಯದಲ್ಲಿ ಅಂತ ಒಲವುಗಳನ್ನು ಹೊಂದಿರಲಿಲ್ಲ’ ಎಂದು ಮಾಜಿ ಐಡಿಬಿಐ ಅಧಿಕಾರಿ ಹೇಳಿದ್ದಾರೆ.

ಐಡಿಬಿಐನ ಮಾಜಿ ಅಧ್ಯಕ್ಷ ಎಸ್.ಎಸ್.ನಾಡಕರ್ಣಿ, ಎನ್‌ಎಸ್‌ಇ ಸ್ಥಾಪಿಸುವ ನಿರ್ಧಾರ ಮಾಡಿದಾಗ ಆ ಸವಾಲನ್ನು ಸ್ವೀಕರಿಸಲು ಮುಂದೆ ಬಂದವರಲ್ಲಿ ಚಿತ್ರಾ ಕೂಡ ಒಬ್ಬರಾಗಿದ್ದರು ಎನ್ನಲಾಗಿದೆ.

‘ನನಗೆ ನೆನಪಿರುವಂತೆ ಚಿತ್ರಾ ದುರಾಸೆಯ ವ್ಯಕ್ತಿಯಾಗಿರಲಿಲ್ಲ. ಆದರೆ, ಎನ್‌ಎಸ್‌ಇಯ ಗೊಂದಲಮಯ ಘಟನೆಗಳಲ್ಲಿ ಆಕೆ ಏಕೆ ಭಾಗಿಯಾಗಿದ್ದಳು ಎಂಬುದು ಆಶ್ಚರ್ಯ ತರಿಸಿದೆ’ ಎಂದು ಮತ್ತೊಬ್ಬ ಸಹೋದ್ಯೋಗಿ ಹೇಳಿದ್ದಾರೆ.

‘ತನಗೆ ಏನೂ ಆಗುವುದಿಲ್ಲ ಮತ್ತು ತನ್ನ ವಿರುದ್ಧ ಏನಾದರೂ ಪ್ರತಿಕೂಲ ಸಂದರ್ಭಗಳು ಏರ್ಪಟ್ಟರೆ ರಕ್ಷಣೆ ಸಿಗಲಿದೆ ಎಂಬ ಧೈರ್ಯದ ಮೇಲೆ ಚಿತ್ರಾ ಆ ಮರ್ಮ ಯೋಗಿಯ ಬಗ್ಗೆ ಹೇಳಿದ್ದಾರೆ’ ಎಂದು ಕೆಲವು ಬ್ಯಾಂಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

‘ಚಿತ್ರಾ ಅವರನ್ನು ನಿಗೂಢ ಯೋಗಿಯೊಬ್ಬರು ಮುನ್ನಡೆಸುತ್ತಿದ್ದರೆ ಎಂದರೆ, ಅದು ನಮ್ಮ ಗ್ರಹಿಕೆಯನ್ನೇ ಮೀರಿದ್ದು. ಆಕೆ ನಾವಂದುಕೊಂಡಂತೆ ಅಲ್ಲ. ಈ 'ಮರ್ಮ' ಯೋಗಿ ಯಾರು ಎಂಬುದು ಆಕೆಯೇ ಉತ್ತರಿಸಬೇಕಾದ ಪ್ರಮುಖ ಪ್ರಶ್ನೆಯಾಗಿದೆ’ ಎಂದು ಅವರ ಮಾಜಿ ಸಹೋದ್ಯೋಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT