ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಭವಾನಿಪುರ ಬಿಜೆಪಿ ಅಭ್ಯರ್ಥಿಗೆ ಇಸಿ ನೋಟಿಸ್

Last Updated 15 ಸೆಪ್ಟೆಂಬರ್ 2021, 12:13 IST
ಅಕ್ಷರ ಗಾತ್ರ

ಕೋಲ್ಕತ್ತ: ಭವಾನಿಪುರದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಅವರು ನಾಮಪತ್ರ ಸಲ್ಲಿಸುವಾಗ ಹೆಚ್ಚಿನ ಸಂಖ್ಯೆಯ ಬೆಂಬಲಿಗರನ್ನು ಸೇರಿಸಿಕೊಳ್ಳುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಟಿಎಂಸಿ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಪ್ರಿಯಾಂಕಾ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.

ನಾಮಪತ್ರ ಸಲ್ಲಿಸುವ ವೇಳೆ ಅನುಮತಿ ಪಡೆಯದೆ ಸುಮಾರು 500 ಜನರನ್ನು ಒಟ್ಟಾಗಿ ಸೇರಿಸಿಕೊಳ್ಳುವ ಮೂಲಕ ಟಿಬ್ರೆವಾಲ್ ಮಾದರಿ ನೀತಿ ಸಂಹಿತೆ ಮತ್ತು ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಟಿಎಂಸಿ ತನ್ನ ದೂರಿನಲ್ಲಿ ಆರೋಪಿಸಿದೆ.

ಇದಲ್ಲದೆ ನಾಮಪತ್ರ ಸಲ್ಲಿಸಲು ತೆರಳುವ ಮಾರ್ಗ ಮಧ್ಯೆ ಅವರು 'ಧುನುಚಿ ನಾಚ್' (ಸಾಂಪ್ರದಾಯಿಕ ಬಂಗಾಳಿ ನೃತ್ಯ, ಸಾಮಾನ್ಯವಾಗಿ ದುರ್ಗಾ ಪೂಜೆಯ ಸಮಯದಲ್ಲಿ ಪ್ರದರ್ಶಿಸುವುದು) ಅನ್ನು ಕೂಡ ಪ್ರದರ್ಶಿಸಿದರು ಎಂದು ಟಿಎಂಸಿ ಹೇಳಿದೆ.

ಚುನಾವಣಾಧಿಕಾರಿ ನೀಡಿರುವ ನೋಟಿಸ್‌ನಲ್ಲಿ ಭವಾನಿಪುರ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿದ್ದು, ವರದಿಯಲ್ಲಿ ಸಂಭುನಾಥ ಪಂಡಿತ್ ಬೀದಿ ಮತ್ತು ಇತರ ಸ್ಥಳಗಳಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಪ್ರಮಾಣದಲ್ಲಿ ಸೇರಿದ ಬಳಿಕ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಹೇಳಿದ್ದಾರೆ.

ಆದಾಗ್ಯೂ, ಪ್ರಿಯಾಂಕಾ ಟಿಬ್ರೆವಾಲ್ ಅವರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

'ಸೆಪ್ಟೆಂಬರ್ 30 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿರುವುದಕ್ಕೆ ಟಿಎಂಸಿಗೆ ಭಯವಾಗಿದೆ. ತನ್ನ ಚುನಾವಣಾ ಪ್ರಚಾರವನ್ನು ತಡೆಯಲೆಂದು ನನ್ನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ನಾನು ನಾಮಪತ್ರ ಸಲ್ಲಿಸಲು ತೆರಳಿದ್ದಾಗ ಅಪಾರ ಸಂಖ್ಯೆಯ ಜನರನ್ನು ಕರೆದೊಯ್ದಿದ್ದೇನೆ. ಈ ಮೂಲಕ ಮಾದರಿ ನೀತಿ ಸಂಹಿತೆ ಹಾಗೂ ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿದ್ದೇನೆ ಎಂದು ಆರೋಪಿಸಿ ಟಿಎಂಸಿ ದೂರು ನೀಡಿದ ನಂತರ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಇದಕ್ಕೆ ನಾನು ಉತ್ತರಿಸುತ್ತೇನೆ' ಎಂದು ಬುಧವಾರ ಪ್ರಿಯಾಂಕಾ ಟಿಬ್ರೆವಾಲ್ ಪ್ರತಿಕ್ರಿಯಿಸಿದ್ದಾರೆ.

'ಆದರೆ, ನಾನು ನಾಮಪತ್ರ ಸಲ್ಲಿಸಲು ಹೋಗಿದ್ದ ವಾಹನದಲ್ಲಿ ಸುವೇಂದು ಅಧಿಕಾರಿಯನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ ಎಂಬುದನ್ನು ತಿಳಿಸಲು ನಾನು ಬಯಸುತ್ತೇನೆ. ಬಿಜೆಪಿ ಬೆಂಬಲಿಗರು ತಾವಾಗಿಯೇ ಅಲ್ಲಿಗೆ ಬಂದಿದ್ದರು. ನಾನು ಯಾವುದೇ ರೀತಿಯಲ್ಲಿ ಜನಸಂದಣಿ ಸೇರುವಂತೆ ಮಾಡಿಲ್ಲ. ರಸ್ತೆಗಳಲ್ಲಿ ಯಾರು ಬೈಕ್ ಮತ್ತು ನಾಲ್ಕು ಚಕ್ರದ ವಾಹನಗಳಲ್ಲಿ ಹೋಗುತ್ತಿದ್ದಾರೆ ಎಂಬುದನ್ನು ನೋಡುವುದು ನನ್ನ ಕರ್ತವ್ಯವಲ್ಲ. ಇದು ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಕೆಲಸ' ಎಂದು ಅವರು ಹೇಳಿದರು.

ಪ್ರಿಯಾಂಕಾ ಟಿಬ್ರೆವಾಲ್ ಅವರು ಟಿಎಂಸಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಪಿಐ (ಎಂ) ನ ಶ್ರೀಜಿಬ್ ಬಿಸ್ವಾಸ್ ವಿರುದ್ಧ ಭವಾನಿಪುರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT