ಕೋಲ್ಕತ್ತ: ಸೆಪ್ಟೆಂಬರ್ 30 ರಂದು ನಡೆದಿದ್ದ ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್‌ನಿಂದ (ಟಿಎಂಸಿ) ಕಣಕ್ಕಿಳಿದಿರುವುದರಿಂದ ಈ ಚುನಾವಣೆ ಗಮನ ಸೆಳೆದಿತ್ತು. ಪಶ್ಚಿಮ ಬಂಗಾಳದ ಸಂಸರ್‌ಗಂಜ್ ಮತ್ತು ಜಂಗೀಪುರ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಸಹ ಇಂದು ಹೊರಬೀಳಲಿದೆ.
ಈ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಂಡರು. ಆದರೆ, ಅವರ ತೃಣಮೂಲ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು ಸರ್ಕಾರ ರಚಿಸಿತ್ತು. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮಮತಾ, ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸದ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವರು ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಅವರ ವಿರುದ್ಧ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಹಾಗೂ ಸಿಪಿಐಎಂನ ಶ್ರೀಜಿಬ್ ಬಿಸ್ವಾಸ್ ಕಣಕ್ಕಿಳಿದಿದ್ದರು.
ದೀದಿ 50,000 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೊಂಡರೆ, ಬ್ಯಾನರ್ಜಿ ವಿರುದ್ಧ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ, 'ಭವಾನಿಪುರದಲ್ಲಿ ಉತ್ತಮ ಹೋರಾಟ' ನೀಡುತ್ತದೆ ಎಂದು ಹೇಳಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಭವಾನಿಪುರ ಕ್ಷೇತ್ರದಲ್ಲಿ 21 ಸುತ್ತಿನ ಮತ ಎಣಿಕೆ ನಡೆಯಲಿದೆ. ಚುನಾವಣಾ ಸಂಸ್ಥೆಯು ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಿದ್ದು, ಕೇಂದ್ರ ಪಡೆಗಳ 24 ತಂಡಗಳನ್ನು ಕರೆಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ಈಗಾಗಲೇ ಮತ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾಗಿದೆ.
ಸೆಪ್ಟೆಂಬರ್ 30 ರಂದು ನಡೆದ ಚುನಾವಣೆಯಲ್ಲಿ ಶೇ. 53.32 ರಷ್ಟು ಮತದಾನವಾಗಿತ್ತು ಎಂದು ಚುನಾವಣೆ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಇನ್ನು ಅದೇ ದಿನ ಪಶ್ಚಿಮ ಬಂಗಾಳದ ಇನ್ನೆರಡು ವಿಧಾನಸಭಾ ಸ್ಥಾನಗಳಿಗೂ ಚುನಾವಣೆ ನಡೆದಿದ್ದು, ಭವಾನಿಪುರಕ್ಕಿಂತಲೂ ಹೆಚ್ಚಿನ ಮತದಾನವಾಗಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಸಂಸರ್‌ಗಂಜ್‌ನಲ್ಲಿ ಶೇಕಡ 78.60 ರಷ್ಟು ಮತದಾನ ನಡೆದಿದ್ದರೆ, ಜಂಗೀಪುರದಲ್ಲಿ ಸಂಜೆ ವೇಳೆಗೆ 76.12 ರಷ್ಟು ಮತದಾನವಾಗಿದೆ. ಮತದಾನ ಬಹುತೇಕ ಶಾಂತಿಯುತವಾಗಿತ್ತು ಮತ್ತು ಯಾವುದೇ ಹಿಂಸಾಚಾರ ಅಥವಾ ಚುನಾವಣಾ ದುರಾಚಾರದ ಬಗ್ಗೆ ವರದಿಯಾಗಿಲ್ಲ ಎಂದು ಇಸಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.