ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಾನಿಪುರ ಉಪಚುನಾವಣೆ ಶಾಂತ

ಸಂಜೆ 5 ಗಂಟೆವರೆಗೆ ಶೇ 53.32ರಷ್ಟು ಮತದಾನ
Last Updated 30 ಸೆಪ್ಟೆಂಬರ್ 2021, 17:12 IST
ಅಕ್ಷರ ಗಾತ್ರ

ಕೋಲ್ಕತ್ತ: ವಿರಳ ಘರ್ಷಣೆಗಳನ್ನು ಹೊರತುಪಡಿಸಿದರೆ, ಭವಾನಿಪುರ ಕ್ಷೇತ್ರದ ಉಪಚುನಾವಣೆ ಶಾಂತಿಯುತವಾಗಿತ್ತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್‌ನಿಂದ (ಟಿಎಂಸಿ) ಕಣಕ್ಕಿಳಿದಿರುವುದರಿಂದ, ಈ ಚುನಾವಣೆ ಗಮನ ಸೆಳೆದಿದೆ.

ವಾರ್ಡ್ ಸಂಖ್ಯೆ 72ರ ಮತಗಟ್ಟೆಯಲ್ಲಿ ಮತದಾನಕ್ಕೆ ಟಿಎಂಸಿ ತಡೆಯೊಡ್ಡಿದೆ ಎಂದುಭವಾನಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಆರೋಪಿಸಿದ್ದಾರೆ. ಟಿಎಂಸಿ ನಾಯಕರು ಮತ್ತು ಸಚಿವರು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಇಬ್ಬರು ಸಚಿವರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.

‘ರಸ್ತೆಬದಿಯ ಚಹಾ ಅಂಗಡಿಯನ್ನು ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನವೆಂದು ಹೇಗೆ ಪರಿಗಣಿಸಬಹುದು? ಭವಾನಿಪುರದಲ್ಲಿ ಸೋಲಿನ ಸುಳಿವು ಬಿಜೆಪಿಗೆ ಸಿಕ್ಕಿದೆ. ಅದಕ್ಕಾಗಿಯೇ ಮುಖಂಡರು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಹಕೀಮ್ ಎಂಬುವರು ಹೇಳಿದ್ದಾರೆ.

ಕೋಲ್ಕತ್ತದ ಶರತ್ ಬೋಸ್ ರಸ್ತೆಯಲ್ಲಿ ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಅವರ ವಾಹನವನ್ನು ಅಪರಿಚಿತ ವ್ಯಕ್ತಿಗಳ ಗುಂಪು ಧ್ವಂಸಗೊಳಿಸಿದೆ.

ಭವಾನಿಪುರದಲ್ಲಿ ಓಡಾಡಲು ಚುನಾವಣಾ ಆಯೋಗದಿಂದ ನೋಂದಣಿ ಆಗಿರದ ವಾಹನದಲ್ಲಿ ಏಕೆ ಪ್ರಯಾಣಿಸುತ್ತಿದ್ದೀರಿ ಮತ್ತು ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಚೌಬೆ, ತಾವು ಭವಾನಿಪುರದ ಹಿಂದೂಸ್ತಾನಿ ಅವಾಮಿ ಮೋರ್ಚಾದ ಅಭ್ಯರ್ಥಿಯ ಚುನಾವಣಾ ಏಜೆಂಟ್ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗವು ಘಟನೆಯ ವರದಿಯನ್ನು ಕೇಳಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ ಆಯೋಗವು, ಚೌಬೆ ಅವರ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದಿದ್ದು, ಇದರಲ್ಲಿ ರಾಜಕೀಯ ಇದೆ ಎಂಬುದನ್ನು ತಳ್ಳಿಹಾಕಿದೆ.

ತಮ್ಮ ಆಪ್ತ ಸಹಾಯಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಚೌಬೆ ಆರೋಪಿಸಿದ್ದಾರೆ. ಆದರೆ ನಂತರ ಆಪ್ತ ಸಹಾಯಕನನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗುರುವಾರ ಬೆಳಿಗ್ಗೆ ಭವಾನಿಪುರ ಮತಗಟ್ಟೆಯ ಹೊರಗೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆಯಿತು. ನಕಲಿ ಮತದಾರರು ಬೂತ್‌ಗೆ ಪ್ರವೇಶಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ದಾಖಲೆಯ ಮತದಾನ

ಮುರ್ಷಿದಾಬಾದ್ ಜಿಲ್ಲೆಯ ಸಮಸೇರ್‌ಗಂಜ್ ಮತ್ತು ಜಾಂಗಿಪುರ ವಿಧಾನಸಭಾ ಕ್ಷೇತ್ರಗಳಿಗೂ ಗುರುವಾರ ಉಪಚುನಾವಣೆ ನಡೆಯಿತು. ಸಮಸೇರ್‌ಗಂಜ್‌ನಲ್ಲಿ ಶೇ 78.60ರಷ್ಟು ಹಾಗೂ ಜಾಂಗಿಪುರದಲ್ಲಿ ಶೇ 76.12ರಷ್ಟು ಮತದಾನ ದಾಖಲಾಗಿದೆ. ಮತಗಟ್ಟೆ ವಶದಂತಹ ಕೆಲವು ಘಟನೆಗಳನ್ನು ಹೊರತುಪಡಿಸಿದರೆ, ಈ ಎರಡೂ ಕಡೆ ಮತದಾನ ಶಾಂತಿಯುತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT