ಶುಕ್ರವಾರ, ಮೇ 20, 2022
19 °C

ಬಿಹಾರ ಚುನಾವಣೆ: ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

EVMs

ನವದೆಹಲಿ: ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ 71 ಕ್ಷೇತ್ರಗಳಿಗೆ ಬುಧವಾರ (ಅಕ್ಟೋಬರ್ 28) ಮೊದಲ ಹಂತದ ಚುನಾವಣೆ ನಡೆಯಲಿದೆ. ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸೀತೆಯ ತವರಿನಾದ್ಯಂತ ವಿಜಯ ದಶಮಿಯ ಮುನ್ನಾ ದಿನವಾದ ಭಾನುವಾರ  ‘ರಾವಣ ದಹನ’ ಪ್ರಕ್ರಿಯೆ ಸಡಗರದಿಂದಲೇ ನಡೆದಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾದ ಜೆಡಿಯುನ ನಿತೀಶ್‌ಕುಮಾರ್ ಅವರ  15 ವರ್ಷಗಳ ‘ದುರಾಡಳಿತ’ ಈ ಬಾರಿಯಾದರೂ ಕೊನೆಗೊಳ್ಳಬಹುದು ಎಂಬ ಭರವಸೆ ಹೊಂದಿರುವ ಆರ್‌ಜೆಡಿ– ಕಾಂಗ್ರೆಸ್‌ ನೇತೃತ್ವದ ಮಹಾ ಘಟಬಂಧನವು, 10 ಲಕ್ಷ ಯುವ ಜನರಿಗೆ ಸರ್ಕಾರಿ ನೌಕರಿಯ ಆಶ್ವಾಸನೆ ನೀಡಿದೆ.

ಇದನ್ನೂ ಓದಿ: 

‘ಸುದೀರ್ಘ ಅವಧಿಯ ಆಡಳಿತ ನಡೆಸಿದರೂ ಬಿಹಾರ ಜನರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ನಿತೀಶ್‌ಕುಮಾರ್ ಅವರನ್ನು ನಂಬಿದ್ದು ಸಾಕು. ಮಹಾ ಘಟಬಂಧನವು ನಂಬಿಕೆ ದ್ರೋಹ ಮಾಡದು’ ಎಂದೇ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹೇಳುತ್ತಿದ್ದಾರೆ.

‘ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿಯ ‘ಗೂಂಡಾರಾಜ್‌’ಗೆ ಮತ್ತೆ ಅವಕಾಶ ಕೊಡಬೇಡಿ’ ಎಂದೇ ಮತದಾರರಲ್ಲಿ ಮನವಿ ಮಾಡುತ್ತಿರುವ ನಿತೀಶ್‌ಕುಮಾರ್, ತಾವು ಮತ್ತೆ ಆಡಳಿತದ ಚುಕ್ಕಾಣಿ ಹಿಡಿದರೆ ಸರ್ಕಾರಿ ನೌಕರಿಯ ಮಹಾಪರ್ವವೇ ಆರಂಭವಾಗಲಿದೆ ಎಂದು ಸಾರಿ ಹೇಳಿದ್ದಾರೆ.

ಎನ್‌ಡಿಎ ಭಾಗವಾದ ಬಿಜೆಪಿಯೂ ಸರ್ಕಾರಿ ಉದ್ಯೋಗದ ಭರವಸೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಕೋವಿಡ್–19 ಸೋಂಕು ತಡೆಗೆ ಲಸಿಕೆಯನ್ನು ಉಚಿತವಾಗಿ ವಿತರಿಸುವ ಭರವಸೆ ಮಾತ್ರವಲ್ಲದೆ, ಬರೊಬ್ಬರಿ 19 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಪ್ರಣಾಳಿಕೆ ಮೂಲಕ ಆಶ್ವಾಸನೆ ನೀಡಿದೆ.

ಏಳು ತಿಂಗಳ ಹಿಂದೆ ಜನ್ಮ ತಾಳಿರುವ ಪ್ಲ್ಯೂರಲ್ಸ್ ಪಾರ್ಟಿಯ ಮುಖ್ಯಸ್ಥರು ಈ ಎಲ್ಲ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ, ಒಟ್ಟು 80 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ ನೀಡಿರುವುದು ವಿಶೇಷ.

ಇದನ್ನೂ ಓದಿ: 

ಜನತಾದಳ ಮುಖಂಡ ವಿನೋದ್‌ ಚೌಧರಿ ಅವರ ಪುತ್ರಿ, ಲಂಡನ್‌ನಿಂದ ಇತ್ತೀಚೆಗೆ ಮರಳಿರುವ ಪುಷ್ಪಂ ಪ್ರಿಯಾ ಚೌಧರಿ ಈ ಪಕ್ಷವನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ಮಾರ್ಚ್‌ನಲ್ಲಿ ಸ್ಥಾಪಿಸಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದೆ.

ಕೊರೊನಾ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ದಿಢೀರ್ ಲಾಕ್‌ಡೌನ್‌ ಆದೇಶದಿಂದ ದಿಕ್ಕು ತಪ್ಪಿದಂತಾಗಿ, ದೇಶದ ವಿವಿಧೆಡೆಯಿಂದ ತೀವ್ರ ಸ್ವರೂಪದ ಸಮಸ್ಯೆಗಳನ್ನು ಎದುರಿಸಿಕೊಂಡೇ ಕಾಲ್ನಡಿಗೆಯಲ್ಲಿ ಊರು ತಲುಪಿಕೊಂಡ 25 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರಲ್ಲಿ ಮುಕ್ಕಾಲು ಪಾಲು ಜನ ಮತ್ತೆ ಕೆಲಸಕ್ಕೆ ಮರಳಿಲ್ಲ.

ನಿರುದ್ಯೋಗಿಗಳಾಗಿ ಆರು ತಿಂಗಳು ದೂಡಿರುವ ವಲಸೆ ಕಾರ್ಮಿಕರು ರಾಜಕೀಯ ಪಕ್ಷಗಳನ್ನು ಹಳಿಯುತ್ತಲೇ ಈ ಬಾರಿಯ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿರುವುದೇ ಬಿಹಾರದ ಪ್ರಮುಖ ಮುಖಂಡರೆಲ್ಲರೂ ಒಂದೇಸಮನೆ ಸೇವಾ ಭದ್ರತೆ ಒಳಗೊಂಡ ಸರ್ಕಾರಿ ಉದ್ಯೋಗದ  ಭರವಸೆಯ ಮಹಾಪೂರವನ್ನೇ ಹರಿಸಲು ಪ್ರಮುಖ ಕಾರಣವಾಗಿದೆ. 

ಕೆಲಸ ಅರಸಿ ದೇಶ–ವಿದೇಶಗಳಿಗೆ ವಲಸೆ ಹೋಗುವ ಕಾರ್ಮಿಕರ ಸಮಸ್ಯೆ ಹಾಗೂ ಈಗಲೂ ಯುವಜನತೆ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಯತ್ನಿಸದ ರಾಜಕೀಯ ಮುಖಂಡರು, ಲಾಕ್‌ಡೌನ್‌ ಸಂದರ್ಭ ಅವರು ಎದುರಿಸಿದ ಸಮಸ್ಯೆಗಳನ್ನೇ ಪ್ರಸ್ತಾಪಿಸುತ್ತ ಮತಬೇಟೆಗೆ ಸಜ್ಜಾಗಿರುವುದು ವಿಷಾದದ ಸಂಗತಿ ಎಂದೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ವಯಂ ಘೋಷಿಸಿಕೊಂಡಿರುವ ಪುಷ್ಪಂ ಪ್ರಿಯಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು