ಮಂಗಳವಾರ, ನವೆಂಬರ್ 24, 2020
19 °C
ಮಧ್ಯ ಪ್ರದೇಶ ಸರ್ಕಾರದ ಭವಿಷ್ಯವೂ ನಿರ್ಧಾರ

ಇಂದು ಮತಎಣಿಕೆ: ಬಿಹಾರ ಗದ್ದುಗೆ ಯಾರಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮಂಗಳವಾರ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬರುವ ಹಿನ್ನೆಲೆಯಲ್ಲಿ ಪಟ್ನಾದಲ್ಲಿ ಸಿಹಿ ತಿನಿಸುಗಳನ್ನು ಸಿದ್ಧಪಡಿಸುತ್ತಿರುವುದು

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಮತ್ತು ಹತ್ತು ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದೆ.  

ಬಿಹಾರ ಫಲಿತಾಂಶದ ಜತೆಗೆ, ಮಧ್ಯ ಪ್ರದೇಶದ 28 ಮತ್ತು ಗುಜರಾತ್‌ನ ಎಂಟು ಕ್ಷೇತ್ರಗಳ ಉಪಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಉಳಿದಂತೆ, ಉತ್ತರ ಪ್ರದೇಶದ ಏಳು, ಜಾರ್ಖಂಡ್‌, ಕರ್ನಾಟಕ, ನಾಗಾಲ್ಯಾಂಡ್‌ ಮತ್ತು ಒಡಿಶಾದ ತಲಾ ಎರಡು ಮತ್ತು ಛತ್ತೀಸಗಡ, ಹರಿಯಾಣ ಹಾಗೂ ತೆಲಂಗಾಣದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಮಂಗಳ
ವಾರ ಪ್ರಕಟವಾಗುವ ಫಲಿತಾಂಶವು ದೇಶದ ರಾಜಕೀಯ ಮನಸ್ಥಿತಿಯ ಪ್ರತಿಫಲನ ಆಗಬಹುದು ಎನ್ನಲಾಗುತ್ತಿದೆ. 

ಬಿಹಾರದಲ್ಲಿ ಸತತ ಮೂರು ಅವಧಿಗೆ ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿಯಾಗಿದ್ದರು. ಅದರಲ್ಲಿ ಹೆಚ್ಚಿನ ಅವಧಿ ಅವರು ಎನ್‌ಡಿಎಯ ಭಾಗವಾಗಿಯೇ ಇದ್ದರು. ಈ ಬಾರಿ ಎನ್‌ಡಿಎಗೆ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ ಭಾರಿ ಪೈಪೋಟಿ ನೀಡಿದೆ.ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಮತಗಟ್ಟೆ ಸಮೀಕ್ಷೆಗಳಲ್ಲಿ ಹೆಚ್ಚಿನವು ಅಂದಾಜಿಸಿವೆ. ಹಾಗಾಗಿ, ಈ ಫಲಿತಾಂಶ ಕುತೂಹಲ ಮೂಡಿಸಿದೆ. 

ಮಧ್ಯ ಪ್ರದೇಶ ಮತ್ತು ಗುಜರಾತ್‌ನಲ್ಲಿ ಕಾಂಗ್ರೆಸ್‌ ಶಾಸಕರನ್ನು ‘ಆಪರೇಷನ್‌ ಕಮಲ’ದ ಮೂಲಕ ಬಿಜೆಪಿ ತನ್ನೆಡೆಗೆ ಸೆಳೆದ ಕಾರಣಕ್ಕೆ ಉಪಚುನಾವಣೆ ನಡೆದಿದೆ.  

ಕೋವಿಡ್‌ ಕಾಣಿಸಿಕೊಂಡ ಬಳಿಕ ದೇಶದಲ್ಲಿ ನಡೆದ ಮೊದಲ ಚುನಾವಣೆ ಇದು. ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳ ದೊಡ್ಡ ಜನವರ್ಗವು ಉದ್ಯೋಗಕ್ಕಾಗಿ ವಲಸೆಯನ್ನೇ ಅವಲಂಬಿಸಿತ್ತು. ಈ ರಾಜ್ಯಗಳಿಂದ ವಲಸೆ ಹೋದ ಹೆಚ್ಚಿನವರು ದೊಡ್ಡ ನಗರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದವರು. ಇವರೆಲ್ಲರೂ ತಮ್ಮ ತವರಿಗೆ ಮರಳಿದ್ದಾರೆ.

ಅದಲ್ಲದೆ, ಕೇಂದ್ರ ಸರ್ಕಾರವು ಇತ್ತೀಚೆಗೆ ರೂಪಿಸಿದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾಯ್ದೆಗಳು ಚುನಾವಣಾ ಪ್ರಚಾರದಲ್ಲಿ ಸದ್ದು ಮಾಡಿವೆ. ಹೀಗಾಗಿ, ಕೋವಿಡ್‌ ನಿರ್ವಹಣೆ ಹಾಗೂ ಕೃಷಿ ಕ್ಷೇತ್ರದ ಸುಧಾರಣಾ ಪ್ರಯತ್ನದ ಬಗ್ಗೆ ಫಲಿತಾಂಶವು ಜನಮತಗಣನೆಯೂ ಆಗಬಹುದು ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು