ಮಂಗಳವಾರ, ಅಕ್ಟೋಬರ್ 27, 2020
23 °C

ಬಿಹಾರ ಚುನಾವಣೆ| ನಿತೀಶ್‌ರ ‘ಸುಶಾಸನ’ ಗೇಲಿ ಮಾಡುತ್ತಿರುವ ಅವರದೇ ಪಕ್ಷದ ನಾಯಕಿಯರು

ಅಭಯ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 1990-2005ರ ನಡುವಿನ ಆರ್‌ಜೆಡಿ ಅವಧಿಯ ‘ಜಂಗಲ್‌ ರಾಜ್‌’ ಅನ್ನು ಎಂದಿಗೂ ದೂಷಿಸುವ ಗೋಜಿಗೆ ಹೋಗಿಲ್ಲ. ಅದರೆ, ರಾಜ್ಯದಲ್ಲಿ ತಾವು ಕಾನೂನು ಸುವ್ಯವಸ್ಥೆ ಸ್ಥಾಪಿಸಿದ್ದರ ಬಗ್ಗೆ, ರಾಜ್ಯದಲ್ಲಿ ‘ಸುಶಾಸನ’ (ಉತ್ತಮ ಆಡಳಿತ) ಜಾರಿಗೆ ತಂದ ಬಗ್ಗೆ ನಿರಂತರವಾಗಿ ಹೇಳಿಕೊಳ್ಳುತ್ತಾರೆ.

ಆದರೆ, ಈ ಬಾರಿಯ ವಿಧಾನಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಪಡೆದಿರುವ ಕೆಲ ಮಹಿಳಾ ಅಭ್ಯರ್ಥಿಗಳು ನಿತೀಶ್‌ ಕುಮಾರ್‌ ಅವರ ‘ಸುಶಾಸನ’ವನ್ನು ಪ್ರಶ್ನೆ ಮಾಡುವಂಥ ಹಿನ್ನೆಲೆ ಹೊಂದಿರುವುದು ಮಾತ್ರ ಎಲ್ಲರ ಹುಬ್ಬೇರಲು ಕಾರಣವಾಗಿದೆ.

ಉದಾಹರಣೆಗೆ, ಮಾಜಿ ಸಚಿವೆ ಮಂಜು ವರ್ಮಾ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವ ಮಂಜು ವರ್ಮಾ ಅವರ ಪತಿ ಚಂದೇಶ್ವರ ವರ್ಮಾ ಅವರು ಮುಜಪ್ಫಜರಪುರ ಬಾಲಿಕಾಗೃಹ (ಶೆಲ್ಟರ್‌ ಹೋಮ್‌) ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ. ಹೀಗಾಗಿ ಮಂಜು ವರ್ಮಾ ಅವರು 2018ರಲ್ಲಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸ್ವತಃ ಮಂಜು ವರ್ಮಾ ಅವರ ಹೆಸರೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿದೆ.

ಇನ್ನೊಂದು ಉದಾಹರಣೆ, ಜೆಡಿಯುನಿಂದ ಆಯ್ಕೆಯಾಗಿದ್ದ ಪರಿಷತ್‌ ಸದಸ್ಯರೆ ಮನೋರಮಾ ದೇವಿ ಅವರ ಪುತ್ರ ರಾಖಿ, 2016ರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯನ್ನು ಕೊಂದ ಅಪರಾಧದಿಂದಾಗಿ ಜೀವಾವಧಿ ಶಿಕ್ಷೆ ಗುರಿಯಾಗಿದ್ದಾನೆ.

ಪುತ್ರ ರಾಖಿ ಜೊತೆಗೆ ಪೊಲೀಸರು ಮನೋರಮಾ ಪತಿ ಬಿಂದಿ ಯಾದವ್‌ ಅವರನ್ನು ಬಂದಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಬಿಂದಿ ಯಾದವ್‌ ವಿರುದ್ಧ ಸುಲಿಗೆ, ಅಪಹರಣ, ಕೊಲೆ ಸೇರಿದಂತೆ 17ಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳಿದ್ದವು. ಅಷ್ಟೇ ಅಲ್ಲ, ಮನೆಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿದ ಆರೋಪದ ಮೇಲೆ ಮನೋರಮಾ ಅವರು ಜೈಲು ವಾಸವನ್ನೂ ಅನುಭವಿಸಿದ್ದರು.

ಆದರೆ, ಕ್ರಿಮಿನಲ್‌ ಹಿನ್ನೆಲೆ ಇರುವ ಮಹಿಳೆಯರಿಗೆ ಟಿಕೆಟ್‌ ನೀಡುವ ಮೂಲಕ ನಿತೀಶ್‌ ಹಿಂದಿನ ತಪ್ಪನ್ನೆಲ್ಲ ಸ್ಪಷ್ಟವಾಗಿ ಮರೆತಂತೆ ಕಾಣುತ್ತಿದೆ. ಮಂಜು ವರ್ಮಾ ಅವರಿಗೆ ಬೆಗುಸರಾಯ್‌ನ ಚೆರಿಯಾ ಬರಿಯಾರ್‌ಪುರದಿಂದ ಟಿಕೆಟ್ ನೀಡಲಾಗಿದೆ. ಮನೋರಮಾ ದೇವಿಗೆ ಗಯಾದಲ್ಲಿನ ಅಟ್ರಿಯಿಂದ ಟಿಕೆಟ್‌ ನೀಡಲಾಗಿದೆ. ಮನೋರಮಾ ವರ ಪತಿ ಬಿಂದಿ ಯಾದವ್ ಅವರು ಜುಲೈನಲ್ಲಿ ಕೋವಿಡ್‌ನಿಂದ ಮೃತಪಟ್ಟರು. ಅವರ ಪುತ್ರ ರಾಖಿ ಸದ್ಯ ಜೈಲಿನಲ್ಲಿದ್ದಾನೆ.

ದಿಢೀರ್‌ ಶ್ರೀಮಂತಿಕೆಗೆ ಉದಾಹರಣೆ

ಪಂಜಾಬ್‌ನ ಟ್ರಕ್ ಚಾಲಕನ ಮಗಳಾದ, ಮನೋರಮಾ ದೇವಿ ದಿಢೀರ್‌ ಶ್ರೀಮಂತಿಕೆಗೆ ಬಿಹಾರದಲ್ಲಿ ಹೆಸರಾದವರು. ಅವರು ನಾಮಪತ್ರ ಸಲ್ಲಿಸುವಾಗ ₹89.77 ಕೋಟಿಗಳನ್ನು ತಮ್ಮ ಆಸ್ತಿಯೆಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. 2015ರ ಚುನಾವಣೆಯಲ್ಲಿ ಅವರ ಆಸ್ತಿ ₹12.24 ಕೋಟಿ ಆಗಿತ್ತು.

ಮನೋರಮಾ ದೇವಿ ಅವರ ತಂದೆ ಪಂಜಾಬ್‌ನ ಟ್ರಕ್‌ ಚಾಲಕ. ಊಟಕ್ಕಾಗಿ ಗಯಾದ ಡಾಬಾ ಬಳಿ ಲಾರಿ ನಿಲ್ಲಿಸುತ್ತಿದ್ದ ಅವರು ಮುಂದೆ ಡಾಬಾ ಮಾಲೀಕರ ಮಗಳು ಕಬೂತ್ರಿ ದೇವಿ ಅವರನ್ನು ವಿವಾಹವಾಗಿ, ಕೃಷಿ ಜಮೀನು ಖರೀದಿಸಿ ಗಯಾದಲ್ಲೇ ನೆಲೆಸಿದರು. ಈ ದಂಪತಿಯ ಮಗಳಾಗಿ 1970ರಲ್ಲಿ ಜನಿಸಿದ ಮನೋರಮಾ ದೇವಿ, ಅದೇ ಡಾಬಾಕ್ಕೆ ಬರುತ್ತಿದ್ದ ಕುಖ್ಯಾತ ರೌಡಿ ಬಿಂದಿ ಯಾದವ್‌ನನ್ನು ಪ್ರೀತಿಸಿ ವಿವಾಹವಾದರು.

ಲಾಲು ಪ್ರಸಾದ್‌ ಅವರ ಆರ್‌ಜೆಡಿಯಲ್ಲಿದ್ದ ಬಿಂದಿ ಯಾದವ್‌, ನಂತರ ಜೆಡಿಯುಗೆ ದುಮುಕಿದ್ದರು. ಅವರ ಪತ್ನಿ ಮನೋರಮಾ ದೇವಿ ಈಗ ಜೆಡಿಯು ಅಭ್ಯರ್ಥಿ. ಮನೋರಮಾ ದೇವಿ ಅವರು ಬಿಹಾರ ಚುನಾವಣಾ ಕಣದಲ್ಲಿರುವ ಅತಿ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರು.

ಇತ್ತೀಚೆಗೆ ನಿತೀಶ್‌ ಕುಮಾರ್‌ ಆರ್‌ಜೆಡಿಯನ್ನು ಟೀಕಿಸುವ ಭರದಲ್ಲಿ ‘ಜಂಗಲ್‌ ರಾಜ್‌’ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಸೂಕ್ತ ತಿರುಗೇಟು ನೀಡಿದ್ದ ಆರ್‌ಜೆಡಿ ನಾಯಕ ಮೃತ್ಯುಂಜಯ ತಿವಾರಿ ‘ಗಾಜಿನ ಮನೆಯಲ್ಲಿ ವಾಸಿಸುತ್ತಿರುವವರು ಇತರರಿಗೆ ಕಲ್ಲೆಸೆಯುವ ಪ್ರಯತ್ನ ಮಾಡಬಾರದು,’ ಎಂದು ಗೇಲಿ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು